
ಧಾರಾವಾಹಿ-68
ಒಬ್ಬ ಅಮ್ಮನಕಥೆ
ರುಕ್ಮಿಣಿ ನಾಯರ್
ಆಶ್ರಯಕೊಟ್ಟ ಅನಾಥಾಶ್ರಮ

ಕೆಲವು ವರ್ಷಗಳ ಹಿಂದೆ ಕೊಡಗಿನಿಂದ ಬಂದು ಸಕಲೇಶಪುರದ ಹತ್ತಿರದ ಹಳ್ಳಿಯೊಂದರಲ್ಲಿ ಕಾಫೀ ತೋಟವನ್ನು ಖರೀದಿಸಿದ್ದ ಹವ್ಯಕ ಬ್ರಾಹ್ಮಣರೊಬ್ಬರು ಸಕಲೇಶಪುರದಲ್ಲಿ ಒಂದು ಬಾಡಿಗೆ ಕಟ್ಟಡವನ್ನು ಪಡೆದು ಅನಾಥಾಶ್ರಮವನ್ನು ಸ್ಥಾಪಿಸಿ, ಪಟ್ಟಣದ ಸುತ್ತಾ ಮುತ್ತಾ ಇರುವ ಶ್ರೀಮಂತರುಗಳಿಂದ ಅವರ ಶಕ್ತ್ಯಾನುಸಾರವಾಗಿ ದಾನವನ್ನು ಪಡೆದು ಅನಾಥ ಮಕ್ಕಳಿಗೆ ತಮ್ಮಿಂದ ಸಾಧ್ಯವಾದಷ್ಟೂ ಸೌಲಭ್ಯಗಳನ್ನು ಒದಗಿಸಿ ಕೊಡುತ್ತಿದ್ದರು. ತೋಟದ ಮಾಲೀಕರು ದಾನಿಗಳಿಂದ ಸಂಗ್ರಹಿಸಿದ ಆಹಾರ ಪದಾರ್ಥಗಳನ್ನು, ಹಳೆಯ ಬಟ್ಟೆಗಳನ್ನು, ಸ್ಲೇಟು ಬಳಪ ಪುಸ್ತಕಗಳನ್ನು ತಂದು ತಮ್ಮ ಕೆಲಸಗಾರರ ಸಹಾಯದಿಂದ ಅನಾಥಾಶ್ರಮದ ಮಕ್ಕಳಿಗೆ ಹಂಚಿ ಹೋಗುತ್ತಿದ್ದರು. ಬರುವಾಗ ಜೊತೆಗೆ ಮಕ್ಕಳಿಗೆ ತಿನ್ನಲು ಹಣ್ಣು ಹಂಪಲು, ಸಿಹಿ ತಿಂಡಿಗಳನ್ನು ತರುತ್ತಿದ್ದರು. ಅಲ್ಲಿನ ಸಂತೆಯ ದಿನವಾದ ಗುರುವಾರದಂದು ತಮ್ಮ ಜೀಪಿನ ತುಂಬಾ ಮಕ್ಕಳಿಗೆ ಬೇಕಾದ ವಸ್ತುಗಳನ್ನು ತುಂಬಿ ತರುತ್ತಿದ್ದರು. ಅವರನ್ನು ಮಕ್ಕಳೆಲ್ಲರೂ “ಅಜ್ಜ” ಎಂದೇ ಕರೆಯುತ್ತಿದ್ದರು. ಅವರಿಗೆ ಮಕ್ಕಳು, ದೀನದಲಿತರು ಎಂದರೆ ಬಹಳ ಕಾಳಜಿ ಹಾಗೂ ಪ್ರೀತಿ. ಅನಾಥಾಶ್ರಮದ ಮಕ್ಕಳಿಗಂತೂ ಅವರ ಅಜ್ಜ( ತೋಟದ ಮಾಲೀಕರು) ಬರುವ ದಿನವೆಂದರೆ ಹಿಗ್ಗೋ ಹಿಗ್ಗು. ತನ್ನನ್ನು ಅಜ್ಜನೆಂದು ಕರೆಯುವಂತೆ ತಾವೇ ಮಕ್ಕಳಿಗೆ ಹೇಳಿದ್ದರು. ಮಕ್ಕಳನ್ನು ಭೇಟಿ ಮಾಡಲು ಬಂದ ಸಂದರ್ಭಗಳಲ್ಲಿ ಮಕ್ಕಳೊಂದಿಗೆ ಹಾಡುತ್ತಾ ಕುಣಿದು ಕುಪ್ಪಳಿಸಿ ಆ ಅಜ್ಜನೂ ಮಕ್ಕಳಲ್ಲಿ ಒಬ್ಬರಾಗಿಬಿಡುತ್ತಿದ್ದರು. ಯಾವುದೇ ಬೇಧ ಭಾವ ತೋರದೇ ತಮ್ಮ ಸ್ವಂತ ಮೊಮ್ಮಕ್ಕಳಂತೆ ಕಾಣುತ್ತಿದ್ದ ಅವರ ಹೃದಯ ವೈಶಾಲ್ಯತೆ, ಸರಳ ಸಜ್ಜನಿಕೆಯನ್ನು ಕಂಡು ಎಲ್ಲರೂ ಅಚ್ಚರಿ ಪಡುತ್ತಿದ್ದರು.

ಮಕ್ಕಳೊಂದಿಗೆ ಹಾಡಿ ಕುಣಿಯುವುದು ಅವರಿಗೆ ಅತ್ಯಂತ ಸಂಭ್ರಮದ ವಿಷಯವಾಗಿರುತ್ತಿತ್ತು. ತಾವು ಬರುವಾಗ ದಾನಿಗಳನ್ನು ಕೂಡಾ ಕೆಲವೊಮ್ಮೆ ಜೊತೆಗೆ ಕರೆತರುತ್ತಿದ್ದರು.
ಮಕ್ಕಳೊಂದಿಗೆ ಬೆರೆತು ಸಣ್ಣ ಮಗುವಾಗಿ ನಲಿಯುತ್ತಾ ಹಾಡುತ್ತಿದ್ದ ಅಜ್ಜನನ್ನು ಕಂಡು ಅವರೆಲ್ಲರೂ ಮೂಕವಿಸ್ಮಿತರಾಗುತ್ತಿದ್ದರು. ಪಂಜೆ ಮಂಗೇಶರಾಯರ ಪದ್ಯ “ನಾಗರ ಹಾವೇ… ಹಾವೊಳು ಹೂವೇ….ಬಾಗಿಲ ಬಿಲದಲಿ…ನಿನ್ನಯ ಠಾವೇ…ಕೈಗಳ ಮುಗಿವೆ….ಹಾಲನ್ನೀ ವೇ… ಪೋ…ಪೋ…ಪೋ”….ಎಂದು ಹಾಡುತ್ತಾ ಜೊತೆಗೆ ಮಕ್ಕಳಿಗೂ ದನಿ ಗೂಡಿಸಲು ಹೇಳಿ ತಮ್ಮ ಕೈಲಿದ್ದ ಊರು ಗೋಲನ್ನು ಬಾಗಿಲ ಬುಡಕ್ಕೆ ತೋರಿಸಿ ನಗುತ್ತಿದ್ದರು. ತಾವು ಸುಮಾರು ಏಕರೆ ದೊಡ್ಡ ತೋಟದ ಮಾಲಿಕರು ಎನ್ನುವುದನ್ನು ಸಂಪೂರ್ಣವಾಗಿ ಮರೆತು ಮಕ್ಕಳೊಂದಿಗೆ ಬೆರೆತು ಹೋಗುತ್ತಿದ್ದರು. ಅಜ್ಜನ ಈ ಹಾಡು ಅಲ್ಲಿನ ಮಕ್ಕಳಿಗೆ ಪ್ರಿಯವಾಗಿರುತ್ತಿತ್ತು. ಹಾಡಿನ ನಂತರ ಅಜ್ಜ ತಮಗೆ ಹಂಚುವ ಸಿಹಿ ಮಿಠಾಯಿಗಳನ್ನು ಮಕ್ಕಳು ಚಪ್ಪರಿಸಿ ತಿನ್ನುತ್ತಿದ್ದರು. ಅಜ್ಜನ ವೇಷಭೂಷಣವೂ ಮಕ್ಕಳಿಗೆ ಪ್ರಿಯ. ತುಂಬು ತೋಳಿನ ಬಿಳಿ ಶರ್ಟ್, ಅದನ್ನು ಮೊಣಕೈವರೆಗೂ ಮಡಚಿರುತ್ತಿದ್ದರು. ಕಂದು ಅಥವಾ ಕಪ್ಪು ಬಣ್ಣದ ಪ್ಯಾಂಟ್ ಧರಿಸಿ ಬೆಲ್ಟ್ ಸಿಕ್ಕಿಸಿ, ಅತ್ತ ಇತ್ತ ಇರುವ ಪಟ್ಟಿಯನ್ನು ಹೆಗಲ ಮೇಲಿಂದ ಬಂಧಿಸಿರುತ್ತಿದ್ದರು. ತಲೆಯ ಮೇಲೆ ಕುದುರೆ ಸವಾರರು ಧರಿಸುವಂತ ಟೋಪಿ, ಮುಖದಲ್ಲಿ ಸದಾ ಮುಗ್ಧ ನಗುವಿರುತ್ತಿತ್ತು. ಕಾಂತಿ ತುಂಬಿದ ಕಣ್ಣುಗಳು ಎಂತಹವರನ್ನೂ ಸೆಳೆಯುವ ಶಕ್ತಿಯನ್ನು ಹೊಂದಿತ್ತು. ಅಜ್ಜನ ಧ್ವನಿಯೂ ಮೃದು, ಪ್ರೀತಿಯಿಂದ ಆಡುವ ಅವರ ಮಾತುಗಳಂತೂ ಮುತ್ತುಗಳು ಉದುರಿದಂತೆ. ಅಜ್ಜನ ಗುಣಗಾನವನ್ನು ಎಷ್ಟು ಮಾಡಿದರೂ ಕಡಿಮೆಯೇ….ಮಕ್ಕಳೆಲ್ಲರೂ ಒಕ್ಕೊರಲಿನಿಂದ “ಅಜ್ಜಾ”…ಎಂದು ಕೂಗಿ ಕರೆದಾಗ ಅಜ್ಜನ ಮುಖ ಹೂವಂತೆ ಅರಳುತ್ತಿತ್ತು.
ಮಕ್ಕಳ ಯೋಗಕ್ಷೇಮವನ್ನು ವಿಚಾರಿಸಿ, ಅವರನ್ನು ನೋಡಿಕೊಳ್ಳುವ ಮೇಲ್ವಿಚಾರಕರ ಬಗ್ಗೆಯೂ ಕೇಳಿ ತಿಳಿದುಕೊಳ್ಳುವರು. ಮಕ್ಕಳನ್ನು ಕಾಳಜಿ ವಹಿಸಿ ನೋಡಿಕೊಳ್ಳದಿದ್ದರೆ ತಿದ್ದಿ, ಬುದ್ಧಿ ಹೇಳುವರು. ಕೊನೆಗೂ ಅನುಸರಿಸದಿದ್ದರೆ ಕೆಲಸದಿಂದ ಅಂತಹವರನ್ನು ವರ್ಗಾಯಿಸಿ ಬೇರೊಬ್ಬರನ್ನು ನಿಯಮಿಸುತ್ತಿದ್ದರು. ಒಟ್ಟಿನಲ್ಲಿ ಮಕ್ಕಳನ್ನು ಅನಾಥ ಪ್ರಜ್ಞೆ ಕಾಡಬಾರದು ಎನ್ನುವುದು ಅಜ್ಜನ ಮನದ ಇಂಗಿತವಾಗಿತ್ತು. ಮಕ್ಕಳಿಗೆ ಉತ್ತಮ ಸಂಸ್ಕಾರವನ್ನು ಕಲಿಸಲು ಮೇಲ್ವಿಚಾರಕ ಗುರುಗಳಿಗೆ ಪ್ರತ್ಯೇಕವಾಗಿ ನೆನಪಿಸುತ್ತಿದ್ದರು. ಮಕ್ಕಳನ್ನು ಭೇಟಿ ಮಾಡಲು ಬಂದಾಗ ಅನೇಕ ನೀತಿ ಕಥೆಗಳನ್ನು ಹೇಳಿ ಮಕ್ಕಳ ಮನಸ್ಸನ್ನು ಒಳ್ಳೆಯತನದ ಕಡೆಗೆ ಸೆಳೆಯುತ್ತಿದ್ದರು. ಅನಾಥ ಮಕ್ಕಳನ್ನು ಉತ್ತಮ ಸುಶಿಕ್ಷಿತ ಪ್ರಜೆಗಳನ್ನಾಗಿ ಮಾಡಿ ದೇಶದ ಏಳಿಗೆಯನ್ನು ಕಾಣಬೇಕು ಎನ್ನುವುದು ಅವರ ಹೆಬ್ಬಯಕೆಯಾಗಿತ್ತು. ಈ ಮಕ್ಕಳಿಗೆ ಶಿಕ್ಷಣವನ್ನು ಕೊಡಿಸಲು ಅಲ್ಲಿನ ಸರ್ಕಾರಿ, ಅರೆ ಸರ್ಕಾರಿ ಶಾಲೆಗಳಿಗೆ ಮನವಿ ಮಾಡಿಕೊಳ್ಳುತ್ತಿದ್ದರು. ಮಕ್ಕಳ ವಿದ್ಯಾಭ್ಯಾಸದ ಖರ್ಚಿನ ಹೊಣೆಯನ್ನು ಅಜ್ಜನೇ ಹೊರುತ್ತಿದ್ದರು. ಮಕ್ಕಳಿಗೆ ಪೌಷ್ಟಿಕ ಆಹಾರ ದೊರೆಯುವಂತೆ ಪ್ರತ್ಯೇಕ ಕಾಳಜಿ ವಹಿಸುತ್ತಿದ್ದರು. ಅಡಿಗೆ ಮಾಡಲು ಉರುವಲನ್ನು ಕೂಡಾ ತಮ್ಮ ತೋಟದಿಂದ ಕೆಲಸಗಾರರ ಮುಖಾಂತರ ಟ್ರ್ಯಾಕ್ಟರ್ ಅಥವಾ ಲಾರಿಯಲ್ಲಿ ತುಂಬಿಸಿ ಅನಾಥಾಶ್ರಮಕ್ಕೆ ತಲುಪಿಸುತ್ತಿದ್ದರು. ಒಟ್ಟಿನಲ್ಲಿ ಮಕ್ಕಳ ಸರ್ವತೋಮುಖ ಬೆಳವಣಿಗೆಯು ಅವರ ಮೂಲ ಉದ್ದೇಶವಾಗಿತ್ತು. ಲೆಕ್ಕವಿಲ್ಲದಷ್ಟು ಮಕ್ಕಳು, ನಿರ್ಗತಿಕರು ಅವರ ಪ್ರೀತಿ ಮತ್ತು ಕಾಳಜಿಯಲ್ಲಿ ಸುಭದ್ರತೆಯನ್ನು ಕಂಡಿದ್ದಾರೆ.
ಅಲ್ಲಿನ ಮೇಲ್ವಿಚಾರಕರನ್ನು ಆಗಾಗ ಬದಲಿಸುತ್ತಿದ್ದರು ಆದರೆ ನೌಕರಿಯಿಂದ ತೆಗೆದು ಹಾಕುತ್ತಿರಲಿಲ್ಲ. ಅವರಿಗೆ ಸೂಕ್ತವಾದ ಕಡೆಗಳಲ್ಲಿ ಕೆಲಸ ಕೊಡಿಸುತ್ತಿದ್ದರು. ಈ ಬಾರಿಯೂ ಹೀಗೇ ಅನಾಥಾಲಯದ ಮೇಲ್ವಿಚಾರಕರನ್ನು
