ಶೋಭಾ ಮಲ್ಲಿಕಾರ್ಜುನ್ ಅವರ ಕವಿತೆ-ದ್ರೋಹ

ಮನಸ್ಸಿಗೆ ಘಾಸಿ ಮಾಡಿ ಮೋಸ ಮಾಡುವವರು ಮೈಲುದ್ಧ ಇರಬೇಕೆಂದೇನಿಲ್ಲ ಮನಸಿನ ಸನಿಹವೇ ಸಾಥ್ ನೀಡುತ್ತಾರೆ

ಚಾಚಿದ ಬಾಹುಗಳಲಿ ಬಾಚಿ ತಬ್ಬುವ
ವಾಂಚೆಯ ತೋರಿ ಆಚೆ ದಬ್ಬುವ
ನೀಚ ಬುದ್ಧಿಯ ಚಾಚೂ ತಪ್ಪದೇ ಪಾಲಿಸುತ್ತಾರೆ

ಅಳಿಮನದಿ ಸುಳಿ ಸುಳಿದು
ಬಳಿ ಉಳಿದಿಹೆವೆಂದು
ಬಿಳಿ ಬಾಳಿಗೂ ವರ್ಣ ತುಂಬವ ಬಣ್ಣದ ಮಾತುಗಳನೇ  ಆಡುತ್ತಾರೆ

ಪ್ರೀತಿ ಪಾರಿಜಾತದ ಘಮಲಿನ ಅಮಲನೇರಿಸಿ
ನಿಶೆಯಲೂ ಉಷೆಯ ತೋರುವ
ನಶೆಯಲಿಳಿಸಿ ದ್ವೇಷದಿ
ದೂಷಿಸುತ್ತಾರೆ

 
ಹಸಿವಿನ ಬಗ್ಗೆ ಬಿಸಿ ಬಿಸಿ ಮಾತನಾಡುತ್ತಲೇ ಹಸಿ ಹಸಿ ಮಾಂಸವನ್ನು ಮೂಸಿ ಮುಕ್ಕತ್ತಾರೆ

ಗುರಿ ತೋರುವ ಗುರುವಂತೆ
ಗೋಚರಿಸಿ ಗುರಿಯ ದಾರಿಗಳ ಹೆಮ್ಮೆಟ್ಟಿಸಿ ಗೋರಿ
ಕಟ್ಟಲಣಿಯಾಗುತ್ತಾರೆ

ಸಮಪಾಲು ಸಮಬಾಳು ಸಿದ್ದಾಂತಗಳಿಗೆ ಜೋತುಬಿದ್ದಿ
ಹೆವೆಂದು ನಂಬಿಸಿ ಸ್ವಾರ್ಥದ ನೀತಿಗಳಿಡಿದು
ನೇತಾಡುತ್ತಿರುತ್ತಾರೆ

ಗಡಿಯಾಚೆಗಿನ ದ್ರೋಹಿಗಳ ಬಗ್ಗೆ
ಅಡಿಗಡಿಗೆ ನುಡಿಯುತ್ತಲೇ
ಪ್ರೀತಿ ತಂತುಗಳ ಕಡಿಯಲು ರೆಡಿಯಾಗಿರುತ್ತಾರೆ

ನಾವು ಮಾತ್ರ ನಯವಂಚಕರನ್ನು ಗುರುತಿಸಲು ವಿಫಲರಾಗಿ
ಸಫಲತೆಯ ಮುಖವಾಡದಿ ಮೆರೆಯುತ್ತೇವೆ


3 thoughts on “ಶೋಭಾ ಮಲ್ಲಿಕಾರ್ಜುನ್ ಅವರ ಕವಿತೆ-ದ್ರೋಹ

Leave a Reply

Back To Top