ಬೆಳಕು ಪ್ರಿಯ ಹೊಸದುರ್ಗ ಅವರ ಕವಿತೆ-ಹಲವು ಬಳ್ಳಿಯ ಹೂಗಳು

ಸುಭಾಸ ಭಗತ ತಿಲಕರಿಂದ
ಪಟೇಲ ಭೀಮ ಪ್ರಸಾದರಾದಿ
ಗಾಂಧಿ ಶಾಸ್ತ್ರೀ ನಡೆದು ಬಂದ
ದಾರಿ ಕಂಡಿತೋ…. ನಮಗೆ ಹಾದಿ ತೋರಿತೋ….

ಕಾಶ್ಮೀರದ ಕಣಿವೆಯಲ್ಲಿ
ಕನ್ಯಾಕುಮಾರಿ ಮಡಿಲಿನಲ್ಲಿ
ಸಹ್ಯಾದ್ರಿಯ ಒಡಲಿನಲ್ಲಿ
ನಾವು ಧನ್ಯರೋ… ಇಲ್ಲಿ ನಾವು ಧನ್ಯರೋ…

ಮರಾಠಿಯ ಮೊಗ್ಗು ಬಿರಿದು
ಗುಜರಾತಿ ಘಮಲು ಹರಿದು
ಕನ್ನಡದ ಕಂಪು ಸುರಿದು
ತಂಪಾದಿತೋ…. ನೆಲವು ಇಂಪಾದಿತೋ…

ರಾಮ ರಹೀಮ ಯೇಸು ಬುದ್ಧ
ಒಂದೇ ಎಂಬ ಭಾವ ಶುದ್ಧ
ಐಕ್ಯತೆಯ ದೀಪದಿಂದ
ಬೆಳಕಾದಿತೋ… ನಾಡು ಬೆಳಕಾಯಿತೋ…

ಬಳ್ಳಿ ಹಲವು ತೋಟವೊಂದೆ
ಹೂವು ಹಲವು ಘಮಲು ಒಂದೇ
ಏಕತೆಯ ಮಂತ್ರ ಎಂಬ
ಸಸಿಯು ಮೊಳೆಯಿತೋ…. ಇಲ್ಲಿ ಹಸಿರು ಬೆಳೆದಿತೋ..

ಕೋಟಿ ಜಾತಿ ಪ್ರೀತಿ ಒಂದೇ
ನೂರು ಮತವು ಶಪಥ ಒಂದೇ
ಭಾರತಾಂಬೆ ತಾಯಿ ಎಂಬ
ಘೋಷ ಮೊಳಗಿತೋ… ಇಲ್ಲಿ ದೇಶ ಬೆಳಗಿತೋ..


Leave a Reply

Back To Top