ಕಾವ್ಯಸಂಗಾತಿ
ಎ. ಹೇಮಗಂಗಾ
ತನಗಗಳು
ಫಲಭರಿತ ಮರ
ಸೆಳೆದಿದೆ ಎಲ್ಲರ
ಬಿದ್ದ ಕಲ್ಲೇಟು ನೂರು
ಸಹನಾಮಯಿ ತರು
ವೈರಾಗ್ಯದ ಸಂಕೇತ
ನಿಂತ ಆ ಬಾಹುಬಲಿ
ಅಶಾಶ್ವತ ಬಾಳಿನ
ತತ್ವವ ನೀನು ಕಲಿ
ಜನ್ಮದಾತೆ ಎಂದರೆ
ಕ್ಷಮೆಯ ಮೂರ್ತಿಯಂತೆ
ಸಹಿಸುವಳು ಎಲ್ಲ
ನೋವ ಧರಿತ್ರಿಯಂತೆ
ವಿರಹ ಹೃದಯಕೆ
ಹೊರೆಯಾಗುತಲಿದೆ
ನೀನಿರದ ಕೊರಗು
ಕೊರೆಯುತಲೇ ಇದೆ
ಬೆಳ್ಳಕ್ಕಿಗಳ ಗುಂಪು
ಹಾರಿದೆ ಬಾನಿನಲ್ಲಿ
ಕಂಗಳಿಗೆ ಗೋಚರ
ಚೆಲುವಿನ ಚಿತ್ತಾರ
ಬಿಚ್ಚಿದರೆ ಮನದಿ
ನೆನಪಿನ ಸುರುಳಿ
ಸಿಹಿ ನೆನಪು ಮಾತ್ರ
ನೀಡಿದೆ ಕಚಗುಳಿ
ಬಳ್ಳಿಗೆ ಭಾರವಲ್ಲ
ಬಿಟ್ಟಿಹ ಕಾಯಿಗಳು
ತಾಯಿಗೆ ಹೊರೆಯಲ್ಲ
ಎಂದೂ ತನ್ನ ಮಕ್ಕಳು
ಬದುಕಿರುವಾಗಲೇ
ತೋರಿಸು ನೀ ವಿಶ್ವಾಸ
ಸತ್ತ ಮೇಲೆ ಇರದು
ಶರೀರದಲ್ಲಿ ಶ್ವಾಸ
ದಾಂಪತ್ಯದಿ ವಿರಸ
ಕಹಿ ಗರಳದಂತೆ
ವೃದ್ಧಿಸಿದಷ್ಟೂ ಅದು
ಒಲವಿಗೆ ಕೊರತೆ
ಕಳ್ಳ ಬೆಕ್ಕು ಬಂದಿದೆ
ಹಾಲನ್ನು ಕುಡಿದಿದೆ
ಕಣ್ಣುಗಳ ಮುಚ್ಚಿದೆ
ಎಲ್ಲರಿಗೂ ಕಂಡಿದೆ
ಮಳೆ ನಿಂತು ಹೋದರೂ
ಹನಿಯಿನ್ನೂ ನಿಂತಿಲ್ಲ
ನೀ ನನ್ನ ತೊರೆದರೂ
ನೆನಪಿನ್ನೂ ಮಾಸಿಲ್ಲ
ಬಾಳಿನ ಬಂಡಿಯಿಂದು
ಮುಂದೆ ಸಾಗುತ್ತಲಿದೆ
ನೀನು ಇಲ್ಲದಿದ್ದರೂ
ಜೊತೆ ನೀಡದಿದ್ದರೂ
———————————–
ಎ. ಹೇಮಗಂಗಾ
Nice mam