ವೀಣಾ ಹೇಮಂತ್ ಗೌಡ ಪಾಟೀಲ್ ಲೇಖನ-ರಾಷ್ಟ್ರೀಯ ಮತದಾರರ ದಿನ (ಜನವರಿ 25)

ವಿಶ್ವದ ಅತಿ ದೊಡ್ಡ ಪ್ರಜಾತಂತ್ರ ರಾಷ್ಟ್ರವಾದ ಭಾರತದಲ್ಲಿ ಇದೀಗ ಮತ್ತೊಂದು ಬಾರಿ ಚುನಾವಣೆ ಎಂಬ ಪ್ರಜಾಪ್ರಭುತ್ವದ ಮಹಾಯಜ್ಞ ಪ್ರಾರಂಭವಾಗಿದೆ. ಭಾರತ ಒಂದು ಸಾಂವಿಧಾನಿಕ ರಾಷ್ಟ್ರವಾಗಿದ್ದು ಇಲ್ಲಿ ಗಣತಂತ್ರ ವ್ಯವಸ್ಥೆಯು ಜಾರಿಯಲ್ಲಿದೆ. 29 ರಾಜ್ಯಗಳ 550ಕ್ಕೂ ಹೆಚ್ಚು ಲೋಕಸಭಾ ಸೀಟುಗಳು ಮತ್ತು ನಮ್ಮ ಕರ್ನಾಟಕ ರಾಜ್ಯದಲ್ಲಿ 224 ವಿಧಾನಸಭಾ ಸೀಟುಗಳು ಮತ್ತು 28 ಲೋಕಸಭಾ ಸೀಟುಗಳನ್ನು ಹೊಂದಿರುವ ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಪ್ರತಿ ಐದು ವರ್ಷಕ್ಕೊಮ್ಮೆ ಪ್ರಜಾಪ್ರತಿನಿಧಿಗಳ ಆಯ್ಕೆ ನಡೆಯುತ್ತದೆ. ವಿವಿಧ ರಾಷ್ಟ್ರೀಯ ಪಕ್ಷಗಳು ತಮ್ಮ ಪಕ್ಷದ ಪ್ರಣಾಳಿಕೆಗಳೊಂದಿಗೆ ಜನರ ಅಭಿವೃದ್ಧಿಗಾಗಿ ಕಾರ್ಯನಿರ್ವಹಿಸುವ ಪಣತೊಟ್ಟು ಚುನಾವಣೆಯ ಅಖಾಡಕ್ಕೆ ಇಳಿಯುತ್ತವೆ.

ಗ್ರಾಮ ಪಂಚಾಯತಿ, ಜಿಲ್ಲಾ ಪಂಚಾಯತಿ, ಪುರಸಭೆ, ನಗರ ಸಭೆ, ಮಹಾನಗರಪಾಲಿಕೆ ವಿಧಾನಸಭಾ ಸದಸ್ಯರು ಮೆಂಬರ್ ಆಫ್ ಲೆಜಿಸ್ಲೇಟಿವ್ ಅಸೆಂಬ್ಲಿ (ಮೇಲ್ಮನೆ ಮತ್ತು ಕೆಳಮನೆ ಸದಸ್ಯರು) ಮೆಂಬರ್ ಆಫ್ ಲೆಜಿಸ್ಲೇಟಿವ್ ಕೌನ್ಸಿಲ್ ಸದಸ್ಯರು ರಾಜ್ಯದಲ್ಲಿ ಆಡಳಿತದ ಭಾಗವಾಗಿ ಚುನಾಯಿಸಲ್ಪಟ್ಟರೆ ಲೋಕಸಭೆಯಲ್ಲಿ ಲೋಕಸಭಾ ಮತ್ತು ರಾಜ್ಯಸಭಾ ಸದಸ್ಯರಾಗಿ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಲಾಗುತ್ತದೆ. ಪದವೀಧರ ಕ್ಷೇತ್ರ, ಶಿಕ್ಷಕರ ಕ್ಷೇತ್ರ ಎಂದು ವಿವಿಧ ಸದಸ್ಯರನ್ನು ಆಯ್ಕೆ ಮಾಡಲಾಗುತ್ತದೆ. ಮೇಲ್ಮನೆ ಸದಸ್ಯರು ಮತ್ತು ಕೇಂದ್ರದಲ್ಲಿ ರಾಜ್ಯಸಭಾ ಸದಸ್ಯರು  ವಿವಿಧ ರಂಗಗಳಲ್ಲಿ ಸಾಧನೆ ಮಾಡಿದ ಜನರಿಗಾಗಿಯೇ ಕೆಲವು ಸೀಟುಗಳನ್ನು ಹೊಂದಿವೆ.

This image has an empty alt attribute; its file name is download-2-11.jpg

ಇದೆಲ್ಲಕ್ಕೂ ಮುಖ್ಯವಾದದ್ದು ನಮ್ಮ ಸಂವಿಧಾನದಲ್ಲಿ ಸರ್ವ ಜನರಿಗೂ ಸಮಾನವಾಗಿ ಕಲ್ಪಿಸಲ್ಪಟ್ಟ ಮತದಾನ ಪ್ರಕ್ರಿಯೆ. ಪ್ರಜೆಗಳಿಂದ, ಪ್ರಜೆಗಳಿಗಾಗಿ ಮತ್ತು ಪ್ರಜೆಗಳಿಗೋಸ್ಕರ ಎಂಬ ಧ್ಯೇಯ ವಾಕ್ಯವನ್ನು ಹೊಂದಿರುವ ನಮ್ಮ ಭಾರತ ದೇಶದಲ್ಲಿ ವಿವಿಧ ಹಂತಗಳಲ್ಲಿ ಪ್ರಜೆಗಳೇ ತಮ್ಮ ಪ್ರತಿನಿಧಿಗಳನ್ನು ಚುನಾಯಿಸುತ್ತಾರೆ. ಹೀಗೆ ಅತಿ ಹೆಚ್ಚು ಸಂಖ್ಯೆಯಲ್ಲಿ ಚುನಾಯಿಸಲ್ಪಟ್ಟ ಪಕ್ಷವು ಅಧಿಕಾರಕ್ಕೆ ಬಂದು ಅದಕ್ಕಿಂತ ಕಡಿಮೆ ಸೀಟುಗಳನ್ನು ಗಳಿಸಿದ ಪಕ್ಷವು ವಿರೋಧ ಪಕ್ಷವಾಗಿ ಕಾರ್ಯನಿರ್ವಹಿಸುತ್ತವೆ. ಆಡಳಿತ ಪಕ್ಷವು ರಾಜ್ಯದ ಅಧಿಕಾರ ವರ್ಗದ ಸಹಯೋಗದೊಂದಿಗೆ ಆಡಳಿತಾತ್ಮಕ ನಿರ್ಣಯಗಳನ್ನು ಕೈಗೊಂಡರೆ ವಿರೋಧ ಪಕ್ಷವು ಕಾವಲು ನಾಯಿಗಳ ರೀತಿಯಲ್ಲಿ ಸರ್ಕಾರದ ಆಡಳಿತವನ್ನು ವಿಮರ್ಶೆ ಮಾಡುವ,  ಟೀಕಿಸುವ ಮತ್ತು ಸರ್ಕಾರದ ಆಡಳಿತ ವಿರೋಧಿ ಧೋರಣೆಗಳ ವಿರುದ್ಧ ಅಹವಾಲು ಸಲ್ಲಿಸುವ ಕಾರ್ಯನಿರ್ವಹಿಸುತ್ತದೆ. ಹೀಗೆ ಒಂದಕ್ಕೊಂದು ಪೂರಕವಾಗಿ ಆಡಳಿತ ಮತ್ತು ವಿರೋಧಪಕ್ಷಗಳು ದೇಶದ, ರಾಜ್ಯದ ಅಭಿವೃದ್ಧಿ ಗೆ ತಮ್ಮ ಕಾಣಿಕೆಯನ್ನು ಸಲ್ಲಿಸುತ್ತವೆ.

ಇದು ಚುನಾವಣೆಯ ಮತ್ತು ಸರ್ಕಾರದ ಕುರಿತ ಮಾತಾದರೆ ಮತದಾನ ಎಂಬುದು ಪ್ರಜೆಗಳಿಗಿರುವ ಅತ್ಯಂತ ಮಹತ್ವದ ಹಕ್ಕು ಮತ್ತು ಕರ್ತವ್ಯವೂ ಹೌದು. ಅದರಲ್ಲೂ ತನಗೆ ಸೂಕ್ತವೆನಿಸಿದ ವ್ಯಕ್ತಿಯನ್ನು ಯಾವುದೇ ತಂಟೆ ತಕರಾರುಗಳಿಲ್ಲದೆ ಗೌಪ್ಯ ಮತದಾನದ ಮೂಲಕ ಆಯ್ಕೆ ಮಾಡುವ ಹಕ್ಕು, ಮತದಾರರಿಗೆ ಇದೆ. ಮತದಾನವು ಪ್ರಜಾಪ್ರತಿನಿಧಿ ಸರ್ಕಾರದ ಆಧಾರ ಸ್ತಂಭ.
ತನಗೆ ಸೂಕ್ತವೆನಿಸಿದ, ಮೆಚ್ಚುಗೆಯಾದ ನಾಯಕತ್ವವನ್ನು ಆಡಳಿತಕ್ಕೆ ತರುವಲ್ಲಿ ಮತದಾನ ಪ್ರಮುಖ ಪಾತ್ರ ವಹಿಸುತ್ತದೆ. ಮತದಾನವು ಪ್ರಜಾ ಸಮ್ಮತಿಯ ಹಕ್ಕನ್ನು ಪ್ರತಿಪಾದಿಸುತ್ತದೆ ಮತ್ತು ಸರ್ಕಾರ ರಚಿಸುವಲ್ಲಿ ನ್ಯಾಯಬದ್ಧ ನಿರ್ಣಯವನ್ನು ಮಂಡಿಸುತ್ತದೆ. ನಿಯಮಿತವಾಗಿ ನಿಗದಿತ ಸಮಯದಲ್ಲಿ ಚುನಾವಣೆಗಳು ನಡೆದರೆ ಆ ಸರ್ಕಾರವನ್ನು ನ್ಯಾಯಯುತ ಸರ್ಕಾರ ಎಂದು ಕರೆಯಬಹುದು.

ಮತ ಚಲಾವಣೆಯು
* ಸರ್ಕಾರದ ಆಡಳಿತಾತ್ಮಕ ಸಫಲತೆ ಮತ್ತು ವಿಫಲತೆಯನ್ನು, ಸರ್ಕಾರದ ನೀತಿ ನಿಯಮಾವಳಿಗಳಿಂದ ಉಂಟಾಗುವ ಸಾಧಕ ಬಾಧಕಗಳನ್ನು ಮೌಲ್ಯಮಾಪನ  ಮಾಡುವ ಮಹತ್ತರ ಜವಾಬ್ದಾರಿಯಾಗಿದೆ.

*ಮತದಾನವು ರಾಷ್ಟ್ರದ ಭವಿಷ್ಯವನ್ನು ನಿರ್ಧರಿಸಲು ಅವಕಾಶ ನೀಡುತ್ತದೆ.

 *ಮತದಾನದ ಮೂಲಕ ಸೂಕ್ತ ವ್ಯಕ್ತಿಯನ್ನು ಆರಿಸುವ ಮೂಲಕ ಆಡಳಿತಾತ್ಮಕ ಜವಾಬ್ದಾರಿಯನ್ನು ಸುಸೂತ್ರವಾಗಿ ಚುನಾಯಿತಪಕ್ಷಕ್ಕೆ ವರ್ಗಾಯಿಸಲು ಅನುಕೂಲವಾಗುತ್ತದೆ.

. ವಿದ್ಯುನ್ಮಾನ ಮತ ಯಂತ್ರದಲ್ಲಿ ಚುನಾವಣೆಗೆ ಸ್ಪರ್ಧಿಸಿರುವ ಉಮೇದುವಾರರನ್ನು ಪಕ್ಕದಲ್ಲಿಯೇ ಇರುವ ಕೆಂಪು ಗುಂಡಿಯನ್ನು ಒತ್ತುವ ಮೂಲಕ ನಮ್ಮ ಮತವನ್ನು ಚಲಾಯಿಸಬಹುದು.ಮತದಾರರು ತನಗೆ ಸೂಕ್ತವೆನಿಸಿದ ವ್ಯಕ್ತಿಯನ್ನು ಚುನಾಯಿಸುವ ಇಲ್ಲವೇ ಯಾರನ್ನೂ ಚುನಾಯಿಸದೆ ಇರುವ
  (ನೋಟ… ನನ್ ಆಫ್ ದ ಅಬೋವ) ಅಧಿಕಾರವನ್ನು ಹೊಂದಿರುತ್ತಾರೆ.

 ಎಲ್ಲರಿಗೂ ಮತದಾನದ ಹಕ್ಕನ್ನು ಕೊಡುವುದರ ಕುರಿತು ಅಂಬೇಡ್ಕರ್ ಮತ್ತು ಗಾಂಧಿಯವರ ಮಧ್ಯದಲ್ಲಿ ಭಿನ್ನಾಭಿಪ್ರಾಯ ಇತ್ತು. ಅಂಬೇಡ್ಕರ್ ಎಲ್ಲರಿಗೂ ತಮ್ಮ ನಾಯಕನನ್ನು ಚುನಾಯಿಸುವ ಹಕ್ಕು ದೊರೆಯಲಿ ಎಂದು ವಾದಿಸಿದರೆ ಅಶಿಕ್ಷಿತ ಜನರಿಂದ ಈ ಹಕ್ಕಿನ ಉಲ್ಲಂಘನೆಯಾಗುವುದು ಎಂಬುದು ಗಾಂಧಿಯವರ ವಾದವಾಗಿತ್ತು. ಕೊನೆಗೂ ಅಂಬೇಡ್ಕರ್ ಅವರ ವಾದಕ್ಕೆ ಮನ್ನಣೆ ದೊರೆತು ಭಾರತ ದೇಶದ ಪ್ರತಿಯೊಬ್ಬ ಪ್ರಜೆಗೂ ಸೂಕ್ತ ವಯಸ್ಸಿನಲ್ಲಿ ಮತದಾನ ಮಾಡುವ ಹಕ್ಕು ದೊರೆತಿತ್ತು.
ಆದರೆ ಇಂದು ಮತದಾನ ಕುರಿತಾದ ಜನರ ಉಪೇಕ್ಷಿತ ಭಾವವನ್ನು ಕಂಡಾಗ ಗಾಂಧಿಯವರ ವಾದ ಸರಿಯಾಗಿತ್ತು ಎಂಬ ಭಾವ ಮನದಲ್ಲಿ ಕ್ಷಣ ಕಾಲ ಮೂಡಿ ಮರೆಯಾಗುತ್ತದೆ. ವಿದ್ಯಾವಂತರು, ಸುಶಿಕ್ಷಿತರು ಎಂದು ನಾವು ಕರೆಯುವ ಸೋ ಕಾಲ್ಡ್ ನಾಗರಿಕರು ಮತಗಟ್ಟೆಗೆ ಬಂದು ತಮ್ಮ ಹಕ್ಕನ್ನು ಚಲಾಯಿಸುವುದಿಲ್ಲ. ನಾವು ಹಾಕವ ಒಂದು ಮತದಿಂದ ದೇಶದ ಭವಿಷ್ಯವೇನು ಬದಲಾಗದು ಎಂಬ ಉಪೇಕ್ಷೆ,  ಅಧಿಕಾರ ದೊರೆತ ನಂತರ ಬದಲಾಗುವ ರಾಜಕಾರಣಿಗಳ ಗೋಸುಂಬೆತನ ಚುನಾವಣಾ ಪ್ರಕ್ರಿಯೆಯ ಕುರಿತಾದ ತಪ್ಪು ಸಂದೇಶಗಳು, ಅಧಿಕಾರದ ಲಾಲಸೆಗಾಗಿ ಹಣ, ಹೆಂಡ ಮತ್ತು ಹೆಣ್ಣು ಮಕ್ಕಳಿಗೆ ಸೀರೆ ಬಟ್ಟೆಗಳ ಆಮಿಷ ಒಡ್ಡುವ ರಾಜಕಾರಣಿಗಳು, ಶತಾಯಗತಾಯ ಅಧಿಕಾರ ದೊರೆಯಲೇಬೇಕೆಂಬ ಹಪಹಪಿತನ ಅಸಹ್ಯ ಭಾವನೆಯನ್ನು ಉಂಟುಮಾಡುತ್ತದೆ. ತಿಳುವಳಿಕೆ ಇಲ್ಲದ ಮತ್ತು ಮತದಾನದ ಮಹತ್ವ ಅರಿಯದ ಜನ ಒಂದು ದಿನದ ಮೋಜಿಗಾಗಿ ತಮ್ಮ ವೋಟನ್ನು ಮಾರಿಕೊಳ್ಳುತ್ತಾರೆ. ಇನ್ನು ಪ್ರಜ್ಞಾವಂತ ಜನ ಮತ ಹಾಕಲು ಸಿಗುವ ಒಂದು ರಜೆಯ ಜೊತೆ ಇನ್ನೊಂದೆರಡು ರಜೆಗಳನ್ನು ಕ್ರೋಢೀಕರಿಸಿ ಪ್ರವಾಸ ಮತ್ತು ರಜೆಯ ಮಜಾ ಅನುಭವಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾರೆ. ಯಾರು ರಾಜ್ಯವಾಳಿದರೆ ತಮಗೆ ಬರುವ ಕಿರೀಟವಾದರೂ ಏನು ಎಂದು ಹೇಳುವ ಈ ಜನ ಮುಂದೆ ಲೋಕಭಿರಾಮವಾಗಿ ಮಾತನಾಡುವಾಗ ಈ ದೇಶದ ವ್ಯವಸ್ಥೆಯನ್ನು, ರಸ್ತೆಯ ದುರವಸ್ಥೆಗಳನ್ನು ಅನಾರೋಗ್ಯಕರ ರಾಜಕೀಯ ಬೆಳವಣಿಗೆಗಳನ್ನು ದೂಷಿಸುತ್ತಾರೆ.
 ಎಲ್ಲವನ್ನು ಮನಗೊಂಡು 2011ರಲ್ಲಿ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಅವರ ಅಧ್ಯಕ್ಷತೆಯಲ್ಲಿ ಕೇಂದ್ರ ಸಚಿವ ಸಂಪುಟ ಸಭೆ ನಡೆದು ರಾಷ್ಟ್ರೀಯ ಮತದಾನ ದಿನಾಚರಣೆಯನ್ನು ಆಚರಿಸುವ ಮಹತ್ವದ ನಿರ್ಧಾರವನ್ನು ಕೈಗೊಂಡು  ದೇಶದ ಅಭಿವೃದ್ಧಿಗಾಗಿ  ಯುವಜನರ ಗುಣಾತ್ಮಕ ಭಾಗವಹಿಸುವಿಕೆಯ ಮೂಲಕ 18 ವರ್ಷಕ್ಕೊ ಮೇಲ್ಪಟ್ಟ ಯುವ ಮತದಾರರನ್ನು ಈ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಉತ್ತೇಜಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.

ಪ್ರತಿ ವರ್ಷ ಜನವರಿ 25ನೇ ದಿನಾಂಕವನ್ನು ರಾಷ್ಟ್ರೀಯ ಮತದಾರರ ದಿನಾಚರಣೆ ಎಂದು ಆಚರಿಸುತ್ತಿದ್ದು ಈ ಆಚರಣೆಯ ಹಿಂದಿನ ಮುಖ್ಯ ಉದ್ದೇಶ ಹೊಸ ಮತದಾರರನ್ನು ಪ್ರೋತ್ಸಾಹಿಸುವುದು, ದಾಖಲಾತಿಯನ್ನು ಗರಿಷ್ಠ ಗೊಳಿಸುವುದು ಮತ್ತು ಮತದಾನ ಮಾಡುವುದು ತಮ್ಮ ಮೂಲಭೂತ ಹಕ್ಕು ಎಂಬ ಮೌಲ್ಯದ ಅರಿವನ್ನು ಮೂಡಿಸುವುದು. ಮತದಾನ ಮಾಡುವ ಮೂಲಕ ಓರ್ವ ವ್ಯಕ್ತಿ ದೇಶದ ಭವಿಷ್ಯದ ಹಿನ್ನೆಲೆ ಹೇಗೆ ಪ್ರಭಾವ ಬೀರಬಹುದು ಎಂಬುದನ್ನು ಒತ್ತಿ ಹೇಳುವ ಮೂಲಕ ನಾವು ಮತದಾನ ಮಾಡುವ ಮೂಲಕ ಆಯ್ಕೆ ಮಾಡಿಕೊಳ್ಳುವ ವ್ಯಕ್ತಿ ದೇಶದ ಸಮಗ್ರ ಅಭಿವೃದ್ಧಿಗೆ ಹೇಗೆ ಕಾರಣನಾಗುತ್ತಾನೆ ಎಂಬುದರ ಕುರಿತು ಯುವ ಜನರಲ್ಲಿ ಯಾವುದೇ ಹಿಂಜರಿಕೆ ಇಲ್ಲದೆ ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಿ ತಮ್ಮ ಹಕ್ಕನ್ನು ಚಲಾಯಿಸಲು ಪ್ರೋತ್ಸಾಹಿಸುತ್ತದೆ.

 ಚುನಾವಣಾ ಪ್ರಕ್ರಿಯೆಗಳು ಮತ್ತು ಕಾರ್ಯವಿಧಾನಗಳಲ್ಲಿನ ಶ್ರೇಷ್ಠತೆ, ಪ್ರಾವೀಣ್ಯತೆ ಮತ್ತು ನಾವೀನ್ಯತೆಗಾಗಿ ರಾಷ್ಟ್ರೀಯ ಪ್ರಶಸ್ತಿಗಳನ್ನು ನೀಡಲಾಗುತ್ತದೆ. ಈ ಪ್ರಶಸ್ತಿಗಳು ಚುನಾವಣಾ ಯಂತ್ರಗಳು, ಸರ್ಕಾರಿ ಇಲಾಖೆ, ಅರೆ ಸರ್ಕಾರಿ ಕಚೇರಿಗಳು, ಸಂಘ ಸಂಸ್ಥೆಗಳು ಮತ್ತು ಮಾಧ್ಯಮಗಳ ಕೊಡುಗೆಯನ್ನು ಗುರುತಿಸಿ ಪ್ರಶಸ್ತಿ ನೀಡುವ ಮೂಲಕ ಅವರಲ್ಲಿನ ಮತದಾನ ಜಾಗೃತಿಯ ಸಬಲೀಕರಣಕ್ಕೆ ಮತ್ತಷ್ಟು ಪ್ರೋತ್ಸಾಹ ನೀಡುತ್ತದೆ.

ಇಲ್ಲಿ ಪ್ರಜ್ಞಾವಂತ ನಾಗರಿಕರು ಗಮನಿಸಬೇಕಾದದ್ದು ಇಷ್ಟು….. ಸರಿಯಾದ, ಸೂಕ್ತವೆನಿಸಿದ ವ್ಯಕ್ತಿಯನ್ನು ಆಯ್ಕೆ ಮಾಡದೇ ಇದ್ದಾಗ ಸೂಕ್ತವಲ್ಲದ ವ್ಯಕ್ತಿಗೆ ಅವಕಾಶ ದೊರೆತು ಅವಘಡಗಳಿಗೆ ಕಾರಣವಾಗುತ್ತದೆ. ಕಾರಣ ಮತ ಚಲಾಯಿಸುವ ನಮ್ಮ ಪರಮೋಚ್ಚ ಅಧಿಕಾರವನ್ನು ಚಲಾಯಿಸಿ ದೇಶದ ಭವ್ಯ ಭವಿಷ್ಯಕ್ಕೆ ತಮ್ಮ ಕಾಣಿಕೆಯನ್ನು ಸಲ್ಲಿಸಲಿ. ಮತ ಚಲಾಯಿಸುವ ಮೂಲಕ ತಮ್ಮ ಹಕ್ಕು ಮತ್ತು ಕರ್ತವ್ಯವನ್ನು ನಿರ್ವಹಿಸಲೇಬೇಕಾದ ಅನಿವಾರ್ಯತೆಯನ್ನು ಮನಗಾಣಿಸಲು ವಿವಿಧ ಸರಕಾರಿ ಕಚೇರಿಗಳ ನೌಕರರು ಸಂಘ ಸಂಸ್ಥೆಗಳು ಮತದಾನದ ಹಕ್ಕಿನ ಅರಿವನ್ನು ಮನವರಿಕೆ ಮಾಡಿಕೊಡಲು ಮೆರವಣಿಗೆಗಳನ್ನು ಜಾಥಾಗಳನ್ನು, ಮಕ್ಕಳ ಶಿಬಿರಗಳಲ್ಲಿ ಪಾಲಕರಿಗೆ ವಿಶೇಷವಾಗಿ ಹಮ್ಮಿಕೊಳ್ಳುತ್ತಿದ್ದಾರೆ.
ಜಗತ್ತಿನ ಅತಿ ದೊಡ್ಡ ಪ್ರಜಾತಂತ್ರ ರಾಷ್ಟ್ರವಾದ ಭಾರತದ  ಚುನಾವಣಾ ಸಮರದಲ್ಲಿ ನಮ್ಮ ಹಕ್ಕನ್ನು ಚಲಾಯಿಸಿ ಸೂಕ್ತ ವ್ಯಕ್ತಿಯ ಆಯ್ಕೆ ಮಾಡುವುದು ನಮ್ಮದೇ ಹೊಣೆ, ಕರ್ತವ್ಯವೂ ಕೂಡ ಎಂಬ ಪ್ರಜ್ಞೆಯನ್ನು ತುಂಬಲಾಗುತ್ತದೆ.

ಭಾರತ ದೇಶವೆಂಬ ಬೃಹತ್ ಸಾಗರವನ್ನು ದಾಟುವ ಚುನಾವಣೆ ಎಂಬ ಮಹಾ ಹಡಗನ್ನು ನಡೆಸುವ ನಾವಿಕನ ಆಯ್ಕೆ ಕೇವಲ ನಮ್ಮದು ಮಾತ್ರ ….ಸೂಕ್ತ ವ್ಯಕ್ತಿಯ ಆಯ್ಕೆ ಮಾಡಿ ಪ್ರಜಾತಂತ್ರವನ್ನು ಉಳಿಸೋಣ… ನಾಳಿನ ಭವಿಷ್ಯವನ್ನು ಉನ್ನತವಾಗಿ ಬರೆಯೋಣ ಎಂಬ ಆಶಯದೊಂದಿಗೆ


Leave a Reply

Back To Top