ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಜನಿಸಿದ್ದು ಕತ್ತಲ ಗುಡಿಸಲಲಿ
ಬೆಳೆದದ್ದು ಗುಡ್ಡ ಗಹ್ವರಗಳ‌ ನಡುವೆ
ಸುತ್ತೆಲ್ಲ‌ ಕಾಡು‌ ಮೇಡು
ಕಲ್ಲು‌ಮುಳ್ಳುಗಳ ತುಳಿದೆ
ಗಟ್ಟಿ ಗೊಂಡಿತು ಜೀವ
ಹಸಿ ಹಾಲು‌ ಕುದಿಸದೆ ಕುಡಿದ ನೆನಪು
ಕಂಬಳಿ ಹೊದ್ದ ಅಪ್ಪ, ಸೀರೆ ಸುತ್ತಿಕೊಂಡ ಅವ್ವ
ಬೇಕಿರಲಿಲ್ಲ ನಯ ನಾಜೂಕು
ಎಳೆದೊಯ್ದರು ಗುಡ್ಡ ಮೇಡುಗಳ ನಡುವೆ
ಮುಂದೆ ಬ್ಯಾ ಅನ್ನುವ ಕುರಿಗಳ‌ ಮಂದೆ
ಓಡುತ್ತ ನಡೆದ ಬಾಲವಿಲ್ಲದ ನಾಯಿ ಹಿಂದೆ ಹಿಂದೆ


ಆ ಕುರಿಯ ಹಿಡಿ,ಈ ಮರಿಯ ಕಟ್ಟು
ಆ ಗೊಡ್ಡ  ಕಾಲಲ್ಲಿ ಅಮುಕು
ಓಡುತ್ತದೆ ಬಿಡಬೇಡ..
ಉರುಳದಂತೆ ನೋಡಿಕೊ ಹಾಲ ಹರವಿ
ದಿನವೆಲ್ಲ ತಿರುಗಿ
ನೆಲಕ್ಕೆ ಮೈ ಹಚ್ಚಿದರೆ ಸಾಕು ಸವಿ ನಿದ್ದೆ
ಹುಳ ಹುಪ್ಪಡಿ‌ ಜೋಗುಳ..
ಕಂಬಳಿಯಲಿ ಕಾಲು ಹುದುಗಿಸಿ
ಚಿಂತೆಯೆ ಇರದ ಗೊರಕೆ


ಏಳು ಸೂರ್ಯನೊಡನೆ ಜಿದ್ದಿಗೆ ಬಿದ್ದು
ಏಳುವದು
ಏಳದಿರೆ ನಡಕೊಂದು ಒದೆ ಬೀಳುವದು
ತಟ್ಟಿ ಗೂಡಿಸು ,ಮರಿಗಳ ಬಿಡು.ನೀರು‌ ಕುಡಿಸು
ಅದೇ ಪಾಠ, ಹೋಂ ವರ್ಕು
ಕನಸಲಿ ಬರದ ಸೂಟು ಬೂಟು
ಅಂತೂ ಪುಣ್ಯವಂತರೊಬ್ಬರ ಮಾತು ಕೇಳಿ
ಮಣಿದ ಜಲ್ಲಿ ಮೀಸೆ
ದೂಡಿತು ಶಾಲೆಯಂಬ ಕಿರು ಕೋಣೆಗೆ
ಬಾಗದ ಬೆರಳು,ನರ್ತಿಸದ ಕೊರಳು
ಸುತ್ತ ನರ್ತಿಸಿದಂತೆ ನಡೆವ ಜೋಡಿ ಹೆರಳು
ಹಾಗೊಮ್ಮೆ ಹೀಗೊಮ್ಮೆ  ದೂಕುತ್ತ
ದೊರೆತಿತು ಪಾಟಿ ಚೀಲದ ಕರುಣೆ
ಒಂದಕ್ಕೆ ಅಂಟಿಕೊಂಡರೆ ಬಿಡದ ಜಿಗುಣೆ
ಆಯಿತು ಪುಸ್ತಕದ ಹುಳ..
ಸಾಟಿಯಾಗಲಿಲ್ಲ ಯಾರೊಬ್ಬರೂ
ದಾಟುತ್ತ ಜಿಗಿಯುತ್ತ, ದೂರದೂರ
ಕ್ರಮಿಸಿ ಏರಿದೆತ್ತರ,ಇಲ್ಲ ಗಡಿ ಅಂತರ


ಹಾಲು ಹಿಂಡುವ ಅಪ್ಪ,ರೊಟ್ಟಿ ತಟ್ಟುವ ಅವ್ವ
ಕಸ ಬಳಿಯುವ ತಮ್ಮ ತಂಗಿ
ಎಲ್ಲರ ಕಣ್ಣಲು ಹೊಸ ಕನಸು
ಒಗೆದು ಮಡಿಸಿದ ಅಂಗಿ ,ಗೆರೆ ಬಿದ್ದ ಪ್ಯಾಂಟು
ಇರಲಿಲ್ಲ ಕಳೆದು ಬದಲಿಸಲು ಇನ್ನೊಂದು ಜೊತೆ
ದೂರದೂರಿಗೆ ಪಯಣ
ಕಾಣದ, ಕೇಳದ, ಜನ
ಗಾಭರಿ ತಳಮಳ, ಮತ್ತೆ‌ ಮರೆತ‌ ಕುರಿಮರಿ ನೆನಪು
ಆದರೂ ಕಾಲ ಓಡಿತು..

ಬರು ಬರುತ್ತ ಅದೇ ಮರೆತು, ಇದೇ ನಿಜವೆನುತ
ಅಕ್ಷರದ ಸಹವಾಸ,,ದಾಸ
ಪುಸ್ತಕಾಲಯದ ಗೋಡೆಯ‌ ಮೇಲೆ ತೂಗು ಹಾಕಿದ
 ದಪ್ಪ ಪುಸ್ತಕ ಹಿಡಿದ ಬಾಬಾಸಾಬರ ಚಿತ್ರ
ಬೇರೆ ದಾರಿಯ ಕನಸು ಊಡಿದ ಪುಣ್ಯಾತ್ಮ
ಕಣ್ಣ ಮುಂದಿನ ಬೆಳಕು

ಅಯ್ಯೊ ಹಾಗಲ್ಲ ಹೀಗೆ, ಅಯ್ಯೊ ಮಂಕೆ
ಇದು ನಗರ, ಇರಲಿಕಿ ತುಸು ನಾಜೂಕು
ಮಿದು ಬೆರಳ ಸೋಕಿಸಿ ಮುನ್ನಡೆಸಿತೊಂದು ಜೀವ
ಕೃತಜ್ಞತೆಯಿಂದ ಸ್ವೀಕೃತ ಒಲವ ಭಾವ
ಆದರದು ಅಲ್ಲ ಗಮ್ಯ…
ಗುರಿ ಬೇರೆ ಇದೆ ನಿನದು ,ಸಾಗು ದೂರ
ಹಿಮಾಲಯವೆ ಮುಂದಿದೆ
ಗುರುವೆಂಬ ಮಹಾಮಾನವನ ಎಚ್ಚರದ ಸೂತ್ರ
ದೂರ ಸರಿಸಿ‌ ಕಿರು ಬೆರಳ
ಹರಿಸಿದ ಕಣ್ಣಿರ ಮರೆತು
ಕ್ಷಮಿಸು ಎಂಬುದೆ ಉತ್ತರ
ದೂರ ದಾರಿಯ ಹಿಡಿದು ನಡೆದ ಪಯಣ..

ಪಡೆದ ಡಿಗ್ರಿಗೆ ದೊರೆಯಿತೇನೋ ಮನ್ನಣೆ,
ಇರಲಿಲ್ಲ ಕಾಂಚಾಣವೆಂಬ ಮಾಯಾಂಗನೆಯ
ಸಾಹಚರ್ಯ,
ಅರೆಕಾಲಿಕ ಉಪನ್ಯಾಸಕ
ತಥ್ ಕ್ಲಾಸಿಗೆ ಬರುವ ಹುಡುಗ ಹುಡುಗಿಯರಷ್ಟೂ
ಸಿಸ್ಟಮೆಟಿಕ್ ಇಲ್ಲದ ಜೀವನ
ಇದೆಂಥ ನೌಕರಿ,ಆದರೂ ನಡೆದೆ ಇತ್ತು ಚಾಕರಿ

ಎಲ್ಲಿತ್ತೋ ಹೇಗಿತ್ತೋ ಕರುಣೆಯಂಬ ದಿವ್ಯ ಹಸ್ತ
ಅಂತೂ ಬಂದಿತು ಸರಕಾರಿ ಸಂಬಳದ ಸಾಹಚರ್ಯ
ನಂತರದ್ದೆಲ್ಲ ಅನಾಯಾಸ..
ಜೊತೆಯಾಗಿ ಬಂದ ಸಂಗಾತಿ ಅಷ್ಟಿಷ್ಟು ಸಂಸ್ಕಾರ ನೀಡಿ
ಬಾಳು ನೇರಗೊಳಿಸಿ ದಳು, ಅವಳ‌ ಮಾತೇ ವೇದವಾಕ್ಯ
ಈಗಲಾದರೂ ನಾಲ್ಕು ಮಂದಿಯ ಮುಂದೆ ಚಂದವಾಗಿರು
ಈಗ ನಿನಗಿಲ್ಲ ಕುರಿಗಳ ಸಾಂಗತ್ಯ
ಬೇರೊಂದಿದೆ ನಿನ್ನ‌ಲೋಕ
ಹೇಳಿದ್ದಕೆಲ್ಲ ಹೂಂಗುಟ್ಟಿ
ನಡೆಯಿತು ಸರಿದಾರಿಯಲ್ಲೇ ಸಾರೋಟು

ಗಿಡ ಕುಡಿಯೊಡೆದು
ಟೊಂಗೆ ಚಿಗುರಿ, ಮನೆಯ ಅಂಗಳ
ತುಂಬ ನಕ್ಷತ್ರದಾಟ, ಸಂತಸ ಚೆಲ್ಲಾಟ,
ಬಾಳೆ ಸಂಗೀತ ಕೂಟ,
ಬೆಳೆ ಬೆಳೆಯುತ್ತ ಬಾಲ ಚಂದ್ರರು
ಪಟವ ಏರುತ್ತ ನಡೆದರು ತಮ್ಮ ಗಮ್ಯ ಅರಸಿ
ಹಿಡಿದ ಸರಿದಾರಿಗೆ ಮನಸು ಸಂತೃಪ್ತ
೧೦
ಅಯ್ಯೋ ಮುಗಿಯಿತೇ ಇಷ್ಟು ಬೇಗ ಅರುವತ್ತು!
ಮೊನ್ನೆಯೇ  ಸೇರಿದ್ದೆಯಲ್ಲ‌ ಮಾರಾಯ ನೌಕರಿ!
ಕಾಲರಾಯನಿಗಿಲ್ಲ ಯಾವ ಮರುಕ,ಮುಲಾಜು
ನಡೆವುದೊಂದೆ ಅವನ ದಾರಿ

ಅಂತೂ ದಾಟಿಯೆ ಬಿಟ್ಟಿತು ಅರವತ್ತರ ವಸಂತ
ಉಳಿದದ್ದು ಇನ್ನೆಷ್ಟು , ಯಾರಿಗೆ ಗೊತ್ತು?
ಇರಲಿ ಈವರೆಗೆ ಇರಿಸಿದನಲ್ಲ ಅದೇ ಸಂತಸ.

ಅವರಿವರ ನಾಲ್ಕು ಸಾಲು ಓದಿ
ಬರೆದದ್ದು ನನ್ನದೆಂದು ಬಿಂಬಿಸಿ
ಸಾಹಿತಿ, ಕವಿ ಎಂಬ ಉಪಾಧಿ ತಲೆಗೇರಿದ್ದೂ ನಿಜ
ಮಾನ ಸಂಮಾನ,ಪ್ರಶಸ್ತಿ ಪುರಸ್ಕಾರ ಗರಿ
ಗುಂಗಿನಲಿ
ಮರೆತೆ ಹೋದವು ಕಟ್ಟಿ ಬೆಳೆಸಿದ್ದ ಕುರಿಮರಿ
 ಆಡುಗಳ ಮಂದೆ,ಓಡಾಡಿದ ಕಾಡು ಮೇಡು
ಈಗ ನೆನಪೂ ಇರದ ಕೃತಘ್ನ
ಅಪ್ಪ ಅವ್ವ ಮಣ್ಣಲ್ಲಿ ಕುಡಿಯೊಡೆದು ಹೆಮ್ಮರ
ಅವರವರ ದಾರಿಯಲಿ ಒಡಹುಟ್ಟಿದವರು ವ್ಯಸ್ತರು

ಆಗಾಗ ವಯದಿ ಹಿಡಿದು ನಡೆಸಿದ ಕಿರುಬೆರಳ
ಹಳವಂಡ ,, ಒಮ್ಮೊಮ್ಮೆ ಅಂಥದೆ‌ ಭಾವಗಳ ಜೊಂಪು
ಕೊಡಲಾಗದು ಭಾವಗಮ್ಯಕೆ ತಲೆದಂಡ..
ಮತ್ತೆ ಎಚ್ಚರಾಗಿ ಸರಿದಾರಿಯಲೆ ಪಯಣ
ಅವರಿವರ ಕಣ್ಣಲ್ಲಿ ತಪ್ಪೇ ಮಾಡ ಪುಣ್ಯಾತ್ಮ.

ಈಗ  ಏರಿದ ಗಾಳಿಪಟ
ಹಿಡಿದ ದಾರವನರಸಿ ಹೋದ ಬಾಳ ನಯನಗಳು
ಮತ್ತೆ ಬಂದಾರೆಂದು‌ ಕಾಯುತ್ತ
ಕಟ್ಟಿಸಿದ ಅಂತಸ್ತಿನ ಮನೆಯಲಿ
ಕೂತದ್ದು ಎರಡೇ  ಜೀವ..

ಈ ಕಾಯುವಿಕೆಯನಿತ್ತ ದೇವರಿಗೆ
ಹೆತ್ತು ಹೊತ್ತವರಿಗೆ
ಅಕ್ಕರದ ಬಿಕ್ಕೆ ಇತ್ತ ಮಾಸ್ತರರಿಗೆ
ಬಾಳನಿತ್ತ ಒಡೆಯರಿಗೆ
ಸಹಿಸಿಕೊಂಡ ಗೆಳೆಯರಿಗೆ
ಈಗ ಎರಡು ಕೃತಜ್ಞತೆಯ ಹನಿ…

ಏನೊ?  ಎಂತೋ?
ಕಾಲು ,  ನಡ ಗಟ್ಟಿಯಿರುವಾಗಲೇ
ಎದ್ದು ನಡೆದರೆ ಸಾಕು‌ ಮಾರಾಯ…
ಎರಡು ಅಕ್ಕಿ‌ಕಾಳು‌ ತಲೆ ಮೇಲೆ ಹಾಕಿ..
ಓಹ್ ..ಯಾರಿಗಿಲ್ಲ ಇಂಥ ನೂರು ಆಸೆ
ಈ ಆಸೆಯ ಹರಿಗೋಲು ಹಾಕುತ್ತ
ನಡೆದಿದೆ ಹರಿವ ಹಳ್ಳದ ಗುಂಟ ದೋಣಿ
ನಡೆಸಿದ ,ನಡೆಸುತ್ತಲೆ ಇರುವ ಆ ಧಣಿಗೆ ಋಣಿ…


About The Author

3 thoughts on “ವೈ .ಎಂ.ಯಾಕೊಳ್ಳಿ ಕವಿತೆ,ಬಾಳಸಂಪುಟವೆಂಬ ಕವಿತೆಯೆ ನಿನಗೆ ಋಣಿ”

  1. ನಡೆದು ಹಾದಿಯಗುಂಟ ಹಾಸಿದ ಹೂ ಮುಳ್ಳ ಮೇಲಿನ ಪಯಣ ಮನಮುಟ್ಟುವಂತಿದೆ.
    ಅಧ್ಬುತ ಸರ್.

  2. ಡಾ. ಮೀನಾಕ್ಷಿ ಪಾಟೀಲ್ ವಿಜಯಪುರ

    ಬಾಲ್ಯದಿಂದ ಇಲ್ಲಿ ಯ ವರೆಗಿನ ತಮ್ಮ ಬಾಳ ಪಯಣದ ಅನುಭವವನ್ನು ಅತ್ಯಂತ ಆಪ್ತವಾಗಿ ಅಭಿವ್ಯಕ್ತಿಸಿದ್ದೀರಿ ಸುಂದರವಾಗಿ ಮೂಡಿಬಂದಿದೆ ದೀರ್ಘ ಕವನ. ಕಥನ ಕಾವ್ಯದ ರೀತಿಯಲ್ಲಿ ಓದುಗರ ಮನಸ್ಸನ್ನು ಸೆರೆಹಿಡಿದಿದ್ದು ವಿಶೇಷವಾಗಿತ್ತು ಅದ್ಭುತ ಅನುಭವ ಸರ್ ಧನ್ಯವಾದಗಳು

Leave a Reply

You cannot copy content of this page

Scroll to Top