ಕಾವ್ಯ ಸಂಗಾತಿ
ಜಹಾನ್ ಆರಾ. ಕೋಳೂರು
ಕನವರಿಕೆ ಕಾದಾಟ
ನಿದ್ದೆಯ ಮಂಪರು
ಕನವರಿಕೆಯ ಒಗಟುಗಳು
ಮುಂಜಾನೆಯ ಮಬ್ಬಿನಲಿ
ಸಿಹಿ ಅಪ್ಪುಗೆಯ ಕತ್ತು ಹಿಸುಕಿ
ನರಳಾಡುತಿದೆ ಸುಖವೆಲ್ಲ
ನಡೆದುದ್ದಾದರೂ ಎಲ್ಲಿ
ಬಿಸಿಲ ಧಗೆಯ ದಾರಿಯಲ್ಲಿ
ಉರಿದು ಬೀಳುವ ಸೂರ್ಯನ ಜೊತೆಗೆ
ಧೂಳು ತುಂಬಿದ ಗಾಳಿಯಲ್ಲಿ
ಕಾರ್ಮೋಡಗಳಿಂದ ತುಂಬಿ ಸೋರುವ
ಆಕಾಶದ ಕೆಳಗೆ
ಒಂದು ಕಲ್ಲು ಬೆಂಚು ಆಸರೆಯಾದರೂ
ಯಾರದೋ ಶವವನ್ನು
ಹೊಟ್ಟೆಯಲ್ಲಿ ಇಟ್ಟುಕೊಂಡು
ಮೇಲ್ಭಾಗದಲ್ಲಿ ಧೂಳು ಮೆತ್ತಿಕೊಂಡು
ಮಲಗಿರಬಹುದು ಅನಿಸುತ್ತಲೇ
ಯಾವುದೋ ಹೃದಯದ ಅಳು ಕೇಳುತ್ತದೆ.
ಅಕಾಲದಲ್ಲಿ ಅವನಿಗೆ ಬರುವ ಕರೆಗಳು
ಅನುಮಾನದ ಬೀಜ ಬಿತ್ತುವ
ಕಾಯಕದಲ್ಲಿ ನಿರತವಾಗಿವೆ
ಅದೆಷ್ಟೊ ಕೈಗಳು
ಮೌನದಲ್ಲಿಯೇ ಅವನೂ ನೀರೆರೆಯುತ್ತಿದ್ದಾನೆ.
ಮತ್ತೆ ಮತ್ತೆ ಚದುರಂಗದ ಆಟದಲ್ಲಿ
ಸೈನಿಕರಿಂದ ಚೆಕ್ಮೆಟ್ ಎನಿಸಿಕೊಳ್ಳುವುದು
ನಿಜಕ್ಕೂ ಹೀನಾಯಕರ
ರಾಜನಾದವನಿಗೆ ರಾಜನೇ
ಎದುರಾಳಿಯಾಗಬೇಕು
ಬೆಳಕು ಬಿಟ್ಟು ಕತ್ತಲೆಯ ಹಿಂದೆ ಹೋದವನಿಗೆ
ಸೈನಿಕ ದೊಡ್ಡವನೇ ಸರಿ
ಒಂದು ಹುಲ್ಲುಗರಿಕೆ ಸಾಕು
ದಮನಮಾಡಲು.
ಅನುಮಾನವನ್ನೇ ಉಸಿರಾಡುವವರಿಗೆ
ಪ್ರೀತಿಯಿಂದ ಬಡಿಸಿದ ಅಡುಗೆಯ
ಘಮಲು ಮೂಗಿಗೆ ತಾಕುವುದಿಲ್ಲ
ಹೊಟ್ಟೆ ಬಿರಿಯಬೇಕು ಅಷ್ಟೇ
ಮತ್ತದೇ ಕತ್ತಲೆ ಆಟ
ಮತ್ತದೇ ಬೆತ್ತಲೆ ಊಟ
ರಸಗಳಿಲ್ಲದ ಪಾಕ..
————————————————–
ಜಹಾನ್ ಆರಾ. ಕೋಳೂರು
Super medam it’s always be support mam❤️