ಕಾವ್ಯ ಸಂಗಾತಿ
ಶಕುಂತಲಾ ಎಫ್ ಕೋಣನವರ
ರಂಗೋಲಿ ಜೊತೆಗೆ
ಮುಂಬೆಳಕು ಅಂಬರವ ಚುಂಬಿಸುವ ವೇಳೆ
ಅಂಗಳದಿ ರಂಗೋಲಿ ಇಡಲು ಹರುಷ
ತಂಗಾಳಿ ಸುಳಿದು ರವಿಕಿರಣ ಸೋಕಿ
ಮೈ ಮನದ ಮಬ್ಬು ಹರಿವ ರಸ ನಿಮಿಷ
ಇಂದೇಕೋ ಬಾಲ್ಯಕ್ಕೆ ಜಾರಿತ್ತು ಮನಸು;
ಎಣಿಸೆಣಿಸಿ ಚುಕ್ಕಿಗಳ ಇಡುತಲಿರುವಾಗ
ಡಬ್ಬದಲ್ಲಿ ತುಂಬಿಟ್ಟ ಅಕ್ಕಿಹಿಟ್ಟಿನಿಂದ
ಇಟ್ಟಂತ ರಂಗೋಲಿ ಕಣ್ಣ್ಮುಂದೆ ಸುಳಿಯಿತೀಗ
ಹೆತ್ತಮ್ಮ ತೊಳೆದಕ್ಕಿ ಸೂಜಿಮಲ್ಲಿಗೆಯಂತೆ: ಒಣಗಿಸಿ ಬೀಸಿದ ನುಣುಪಾದ ಹಿಟ್ಟು
ನುಣುಚುತಿತ್ತು ಎರಡು ಬೆರಳುಗಳ ಹೊಸೆತದಲಿ
ಎಳೆಗೆ ಎಳೆ ಸೇರುತಿತ್ತು ಅರಿಷಿಣವ ತೊಟ್ಟು
ತಪ್ಪುತ್ತಿತ್ತು ಲೆಕ್ಕಾಚಾರ ಚುಕ್ಕಿಗೆ ಚುಕ್ಕಿ ಸೇರಿಸುವಾಗ
ಇಡೀ ಅಂಗಳಕೆ ಮರಳಿ ಗಂಗಾಭಿಷೇಕ
ಒಪ್ಪವಾಗಿ ಚುಕ್ಕಿ ಇರಿಸಿ
ಎಳೆಎಳೆಯಾಗಿ ಚಿತ್ತಾರ ಬಿಡಿಸಿದಾಗ
ಅವ್ವಾ ನಡುವೆ ಹೂವಿಟ್ಟು
ನಗುವುದ ಒಮ್ಮೆ ನೋಡಬೇಕು!
ಗಳಿಗೆ ಜಾರಿ ಗಾಳಿ ಬೀಸೆ ಇಣುಕಿ ನೋಡಲು,
ಕಾಗೆ ಹಿಂಡು ಬಿಡಿಸುತಿತ್ತು ಹೊಸ ವಿನ್ಯಾಸದ ರಂಗೋಲಿ
ರೇಖೆಗಳೆಲ್ಲ ಮಾಯವಾಗಿ ಎಲ್ಲೆಂದರಲ್ಲಿ ಹರಡಿದ ಚಿತ್ತಾರ
ಹಕ್ಕಿಯ ಉದರಕೆ ತಣಿವು ಇದೂ ಒಂದು ರೀತಿಯಲಿ
ಇಷ್ಟೆಲ್ಲಾ ನೆನಪು ಜೋಳಿಗೆಯಲಿರುವಾಗ
ಬಾಲರವಿ ಬೆಳೆದು ಬೆಳಗುತ್ತಿದ್ದ
ಚುಕ್ಕಿಗೆ ಚುಕ್ಕಿ ಸೇರಿಸಿ ರಂಗು ತುಂಬುತ
ವಲ್ಲಿ ವಲ್ಲಿಗಳ ಹೆಣೆದು ರಂಗೋಲಿ ಮುಗಿಸಿದೆ .. ಕಲ್ಲು ಹಿಟ್ಟಿನಿಂದ
ಶಕುಂತಲಾ ಎಫ್ ಕೋಣನವರ
Sooo nice