ಅಂಕಣ ಬರಹ
ವಿಜ್ಞಾನ ವೈವಿಧ್ಯ
ಶಿವಾನಂದ ಕಲ್ಯಾಣಿ
ಮಹಾ ತ್ಯಾಗಿ ಅಕ್ಟೋಪಸ್
ನಂಬಲು ಸಾಧ್ಯವೇ ಇಲ್ಲ !
ಅಕ್ಟೋಪಸ್ , ರಕ್ತ ಹೀರಲೆಂದೇ ಅಷ್ಟಾಪಾದಿ ಅಂಗ ವೈಶಿಷ್ಟ್ಯತೆಯನ್ನು ಪಡೆದು, ಬೇಟೆಯನ್ನು ನಿರ್ದಯಿಯಾಗಿ ಅಪ್ಪಚ್ಚಿ ಮಾಡಿಬಿಡುವ ದುರುಳ ದೈತ್ಯ.
ಅದನ್ನೆಂದಾದರೂ ಮಹಾತ್ಯಾಗಿ, ಕರುಣಾಮಯಿ ಎಂದೆಲ್ಲ ಕರೆಯುವುದೇ ? ಛೇ ಛೇ ಅದು ಶಬ್ದ ಸೂತಕವಾದೀತು… ಎನ್ನುತ್ತೇವಲ್ಲವೇ ?
ಪ್ರಾಣಿ ಕತೆಗಳಲ್ಲಿ ಇದು ಹಿಂಸಾ ಜೀವಿಯಂದೇ ಬಿಂಬಿತವಾಗಿರುವಾಗ ಇದು ಮಮಕಾರಿ ಪರವೆಂದು ಇಲ್ಲಿ ನಂಬುವುದಾದರೂ ಹೇಗೆ ?
ಈ ರೀತಿಯ ವೈರುಧ್ಯಗಳನ್ನು ಸುಳ್ಳು ಮಾಡಬಲ್ಲ ಅದರ ಮಾತೃತ್ವದ ಕಥೆ ಮಾತ್ರ ಅನುಕರಣೀಯವಾದದ್ದು, ಮತ್ತು ಕರುಣಾಜನಕವಾದುದ್ದು. ಅದು ವಹಿಸುವ ತಾಯ್ತನದ
ಪಾತ್ರ ಕರುಳು ಮಿಡಿಯುವಂಥದ್ದು. ಅಕ್ಕಿಯ ಕಾಳಿಗಿಂತಲೂ ಚಿಕ್ಕಗಾತ್ರದ ಮೊಟ್ಟೆಗಳನ್ನು ಅದು ಇಡಲು ಆರಂಭಿಸಿದ ತರುವಾಯ ಅವುಗಳನ್ನು ಅದು ಒಂದೊಂದಾಗಿ ಜೊತೆ ಜೊತೆಯಲ್ಲೇ ಪೋಣಿಸಿ ಒಂದು ಮೂಲೆಯಲ್ಲಿ ಸಾವಿರದಷ್ಟು ಮೊಟ್ಟೆಗಳನ್ನು ಪೇರಿಸುತ್ತದೆ. ಹೀಗೆ ಅದು ಒಂದೆರಡು ವಾರಗಳಲ್ಲಿ ಮೂರು ಲಕ್ಷಕ್ಕೂ ಅಧಿಕ ಸಂಖ್ಯೆಯ ಮೊಟ್ಟೆಗಳನ್ನು ರಕ್ಷಣೆಗೆ ಒಳಪಡಿಸುತ್ತದೆ. ಮುಂದಿನ ಮೂರ್ನಾಲ್ಕು ವಾರಗಳವರೆಗೆ ಅಕ್ಟೋಪಸ್ ಹಗಲು ರಾತ್ರಿಗಳೆನ್ನದೆ ಮೊಟ್ಟೆಗಳ ಕಾವಲು ಮಾಡುತ್ತದೆ.
ಬೆಳೆಯುತ್ತಿರುವ ಮೊಟ್ಟೆಗಳನ್ನು ಅನಾಯಾಸವಾಗಿ ನುಂಗಲು ಬರುವ ವೈರಿ ಜಂತುಗಳನ್ನು ದೂರವಿಡಲು ಅದು ಕ್ಷಣ ಮಾತ್ರವೂ ಅತ್ತಿತ್ತ ಸುಳಿದಾಡುವುದಿಲ್ಲ.
ಹಾಗಾಗಿ ಆ ಅವಧಿಯಲ್ಲಿ ಅದು ಹೆಚ್ಚು ಕಡಿಮೆ ಉಪವಾಸದಲ್ಲೇ ಕಾಲ ಕಳೆಯುತ್ತದೆ.
ಮೊಟ್ಟೆಗಳು ಒಡೆದು ಮರಿಗಳು ಒಂದೊಂದಾಗಿ ಹೊರ ಬರುವವರೆಗೂ ಅದು ತನ್ನ ಜವಾಬ್ದಾರಿಯಿಂದ ವಿಮುಕ್ತ ಗೊಳ್ಳುವುದೇ ಇಲ್ಲ. ಕೆಲವೊಮ್ಮೆ ಜಲಾಶಯಗಳ ದಂಡೆಗಳಲ್ಲಿರುವ ಮೊಟ್ಟೆಗಳು ನೀರಿನ ಅಭಾವದಿಂದ ಒಣಗಿ ಹೋಗುವ ಸಂದರ್ಭಗಳು ಉಂಟು. ಆಗ ತಾಯಿ ಅಕ್ಟೋಪಸ್ ಮೊಟ್ಟೆಗಳ ಆರ್ದ್ರತೆ ಕಾಪಾಡಲು ನಿರಂತರವಾಗಿ ಮೊಟ್ಟೆಗಳ ಮೂಲೆಗೆ ನೀರು ಎರೆಯುತ್ತಲೇ ಇರುತ್ತದೆ.
ಇಂತು ತಾಯಿತನದ ಜವಾಬ್ದಾರಿಯ ದೀರ್ಘಾವಧಿಯನ್ನು ನಿರ್ವಹಿಸಿ, ಸಂತಾನ ಏಳಿಗೆಯಾದ ಮೇಲೆ ಅಶಕ್ತಿಯಿಂದ ನಿತ್ರಾಣಗೊಂಡ ತಾಯಿ ಅಕ್ಟೋಪಸ್ ಅಂತಿಮವಾಗಿ
ಅಸುನೀಗಿ ಬಿಡುತ್ತದೆ.
ಶಿವಾನಂದ ಕಲ್ಯಾಣಿ