ಪುಸ್ತಕ ಸಂಗಾತಿ
ಮಮತಾ ಶಂಕರ್ ಅವರಿಂದ
ದೇವಿ ಕುರುಬತಿ.
ಡಾ. ಎಚ್ ಎನ್ ಶುಭದಾ
ಅವರ ಕಾದಂಬರಿ ಅವಲೋಕನ
ಸುಂದರ ಮೊಗದ ಅದಕ್ಕೂ ಮಿಗಿಲಾಗಿ ಸುಂದರ ಮಾನವೀಯ ಗುಣಗಳುಳ್ಳ ಮುಖ ಪುಸ್ತಕ ಪರಿಚಯದಿಂದ ಆತ್ಮೀಯರು, ಹಿರಿಯರು ಆದಂತಹ ಶ್ರೀಮತಿ ಡಾ. ಎಚ್ ಎನ್ ಶುಭದಾ ಮೇಡಂ ಇವರು ಪ್ರೀತಿಪೂರ್ವಕವಾಗಿ ಕಳಿಸಿಕೊಟ್ಟ ಅವರ ಕೃತಿ ದೇವಿ ಕುರುಬತಿ ನನ್ನ ಕೈ ಸೇರಿ ಮೂರು ನಾಲ್ಕು ತಿಂಗಳೇ ಆಗಿರಬಹುದು. ಯಾವುದೋ ಕೆಲಸದ ಒತ್ತಡಗಳ ನಡುವೆ ಕೇವಲ ಎಂಟು ಹತ್ತು ಪುಟಗಳ ಓದಿ ಹಾಗೆಯೇ ಪುಸ್ತಕ ಇಟ್ಟು ನೆನಪಾದರು ಬರೆಯಲಾಗದೆ ಕೇವಲ ಒಂದೆರಡು ಟಿಪ್ಪಣಿಗಳ ಮಾಡಿ ಹಾಗೆ ಇಟ್ಟಿದ್ದೆ. ಅದಕ್ಕೆ ಈಗ ಕಾಲ ಕೂಡಿ ಬಂದು ಎರಡೇ ದಿನದಲ್ಲಿ ಪುಸ್ತಕ ಕೈ ಬಿಡದೆ ಓದಿಸಿಕೊಂಡು ಹೋಯಿತು.
ಕನ್ನಡ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ, ಶಿಕ್ಷಣ ಶಾಸ್ತ್ರದಲ್ಲಿ ಡಾಕ್ಟರೇಟ್ ಪದವಿ ಪಡೆದು ವಿಶೇಷ ಮಕ್ಕಳನ್ನು ಮುಖ್ಯ ವಾಹಿನಿಗೆ ತರುವ ಆಶಯದಿಂದ ಬಾಂಧವ್ಯ ಸಮನ್ವಯ ಶಾಲೆಯ ಸ್ಥಾಪನೆ ಮಾಡಿರುವ ಶುಭದಾ ಶಿಶು ಶಿಕ್ಷಣ ಹಾಗೂ ಶಾಲಾ ಶಿಕ್ಷಣದಲ್ಲಿನ ವಿನೂತನ ಸೃಜನಶೀಲ ಪ್ರಯೋಗ ಮತ್ತು ರಾಷ್ಟ್ರೀಯ ಪ್ರಶಸ್ತಿಗಳು ರಾಷ್ಟ್ರಪತಿಗಳ ಪದಕಗಳು ಕರ್ನಾಟಕ ಸರ್ಕಾರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ರಾಜ್ಯ ಪ್ರಶಸ್ತಿಗಳ ಸನ್ಮಾನವನ್ನು ಪಡೆದಂತಹವರು ಎಂದು ಈ ಪುಸ್ತಕದ ಆರಂಭದಲ್ಲಿ ಈ ರೀತಿಯ ಇವರ ಪರಿಚಯ ನೋಡಿಯೇ ನನಗೆ ಹೆಮ್ಮೆ ಎನಿಸಿ ಗೌರವ ಮೂಡಿತ್ತು. (ಇವರ ವೃಕ್ಷಪ್ರೀತಿ, ಮಕ್ಕಳ, ಶಿಕ್ಷಣ ಕುರಿತಾದ ಅನೇಕ ಲೇಖನಗಳನ್ನು, ಕವಿತೆ, ಅನುವಾದಗಳನ್ನು ಅಲ್ಲಲ್ಲಿ ಓದಿ ಇವರ ಬಗ್ಗೆ ಒಂದು ಪ್ರೀತಿ ಅಭಿಮಾನ ಗೌರವ ಬೆಳೆದಿತ್ತು ನನಗೆ) ಶಿಕ್ಷಣ ಶಾಸ್ತ್ರ, ಚರಿತ್ರೆ, ಸಾಹಿತ್ಯ, ಪ್ರಪಂಚದ ಪ್ರಾಚೀನ ಸಂಸ್ಕೃತಿಗಳ ಅಧ್ಯಯನ ಹಾಗೂ ಕಲೆ ಕೇವಲ ನನ್ನ ಆಸಕ್ತಿ ಎಷ್ಟೇ ಅಲ್ಲ ಇವೆಲ್ಲ ನನ್ನ ಬದುಕನ್ನು ಆವರಿಸಿಕೊಂಡು ಸಂತೋಷ ಕೊಟ್ಟಿವೆ ಎಂದು ಸ್ವತಃ ಲೇಖಕಿಯೇ ಆರಂಭದಲ್ಲಿ ಹೇಳಿರುವುದು ಓದಿದಾಗ ಈ ಪುಸ್ತಕ ಬರೆಯಲು ಇವರು ಹೇಗೆ ತಯಾರಿ ನಡೆಸಿರಬಹುದು ಎಂಬ ಕುತೂಹಲ ನನ್ನಲ್ಲಿ ಇತ್ತು.
ಇವರ ಈಜಿಪ್ಟ್ ಅನ್ನು ನೋಡುವ ಹಂಬಲದಿಂದ ಅಲ್ಲಿಗೆ ಹೋಗುವ ಮೊದಲು ಈಜಿಪ್ಟಾಲಜೀ ಎಂಬ ಜ್ಞಾನದ ಶಾಖೆಯ ಅಧ್ಯಯನ ನಡೆಸುತ್ತಾರೆ., ಆ ದೇಶದ ಪುರಾಣ ಪುಣ್ಯ ಕಥೆಗಳು, ಜಾತ್ರೆ, ಬಲಿಗಳ ಮಟ್ಟಿಗೆ ಒಂದಷ್ಟು ಅಧ್ಯಯನ ಮಾಡಿರುತ್ತಾರೆ, ಅಲ್ಲಿನ ರಾಜವಂಶಗಳ ಚರಿತ್ರೆಯ ಬಗ್ಗೆಯೂ ತಿಳಿದುಕೊಳ್ಳುತ್ತಾರೆ. ಅಲ್ಲಿ 3000 ವರ್ಷಗಳ ಹಿಂದಿನ ಕುರುಬ ವಂಶದ ಪೆರೋ ಗಳು 300 ವರ್ಷಗಳಿಗೂ ದೀರ್ಘಕಾಲ ದೇಶ ಆಳಿದ್ದರು ಎಂದು ಅಲ್ಲಿನ ಕುರುಬರ ಆಡಳಿತದ ಹೆಜ್ಜೆಗಳು ಚರಿತ್ರೆಯಲ್ಲಿ ಮೂಡಿವೆ ಎಂದು ತಿಳಿದುಕೊಂಡರು. ಇದರಲ್ಲಿ ಅವರಿಗೆ ತುಂಬಾ ಆಕರ್ಷಣೀಯವೆನಿಸಿದ್ದು ದಂತಕತೆಯಾದ ಒಬ್ಬರಾಣಿ ಕುರಿತು. ಅವರ ಈ ಆಸಕ್ತಿ ಪುಸ್ತಕ ರೂಪದಲ್ಲಿ ನಮಗೆ ದೊಡ್ಡದೊಂದು ಕೊಡುಗೆಯಾಗಿ ಸಿಕ್ಕಿರುವುದು ನಮ್ಮ ಅದೃಷ್ಟವೆಂದೇ ಹೇಳಬೇಕು. ನೈಲ್ ನದಿಯ ದಂಡೆಗುಂಟ ಹರಡಿಕೊಂಡಿರುವ ಈ ಕಥೆಯಲ್ಲಿ ವಾಸ್ತವಾಂಶಗಳು, ಚರಿತ್ರೆಯ ಆಧಾರ ಹಾಗೂ ಕಥೆಗತಿಯೊಬ್ಬಳ ಕಲ್ಪನೆಯೂ ಇದೆ ಎಂದು ಲೇಖಕಿ ಹೇಳಿದ್ದಾರೆ. ಆದರೆ ಈ ಎಲ್ಲವನ್ನು ಮೀರಿ ನಾವು ಈ ಕಥೆಯಲ್ಲಿ ಮುಳುಗಿ ಹೋಗುವಷ್ಟು ಮಟ್ಟಿಗೆ ಕಥೆ ಯಶಸ್ವಿಯಾಗಿ ರೂಪುಗೊಂಡಿದೆ. ಇದರಲ್ಲಿ ಯಾವುದು ವಾಸ್ತವ, ಯಾವುದು ಕಲ್ಪನೆ, ಯಾವುದು ಕಥೆಗಾರ್ತಿಯ ಕಲೆ ಎಂದು ನಮ್ಮ ಊಹೆಗೂ ಸಿಲುಕದಂತೆ ಕಥೆಯನ್ನು ಹೆಣೆದಿರುವ ಪರಿ ಅತ್ಯಂತ ಮನೋಜ್ಞವಾಗಿದೆ.
ಐಗುಪ್ತದ ನೀಲನದಿಯನ್ನು (ಅಂದರೆ ಈಗಿನ ಈಜಿಪ್ಟ್, ನೈಲ್ ನದಿ)ಆವರಿಸಿದ ಬೆಳದಿಂಗಳ ಪ್ರಶಾಂತ ರಾತ್ರಿಯಲ್ಲಿ ಐಗುಪ್ತದ ಅರಮನೆಯ ಅಂತಃಪುರದಲ್ಲಿ ರಾಜಮಾತೆ ಅಶಾಂತಳಾಗಿರುವುದರಿಂದ ಆರಂಭಗೊಳ್ಳುವ ಕತೆ ಕುತೂಹಲನ್ನು ಮುಂದುವರೆಸಿಕೊಂಡು ಹೋಗುತ್ತದೆ. ಅಲ್ಲಿಂದಲೇ ಆಕೆಯ ಗಂಡನ ಪರಿಚಯ ಅವನ ಗುಣಗಳು ಮತ್ತು ಅಲ್ಲಿಯ ಶಾಸನಗಳು ಧರ್ಮಗಳು ಇತ್ಯಾದಿಯಾಗಿ ಅಂದಿನ ಸಾಮಾಜಿಕ ಮತ್ತು ಆರ್ಥಿಕವಾದಂತಹ ಮತ್ತು ರಾಜಮನೆತನದ ಆಡಳಿತ ಕುರಿತಾಗಿಯೂ ಕಥೆ ಬಿಚ್ಚಿಕೊಳ್ಳುತ್ತಾ ಹೋಗುತ್ತದೆ. ಸಂಪ್ರದಾಯ ಶೀಲೆಯಾದ ಹೆಣ್ಣು ಮಗಳೊಬ್ಬಳು ಪಟ್ಟದ ರಾಣಿಯಾಗಿ ಆಡಳಿತವನ್ನು, ಐಗುಪ್ತದ ಅರಮನೆಯನ್ನು, ಅಂತಃಪುರವನ್ನು ಕೈವಶ ಮಾಡಿಕೊಂಡು ಗಂಡನ ಮರಣದ ನಂತರ ಮಗನನ್ನು ಪಟ್ಟಕ್ಕೆ ಇರಿಸಿ ಐಗುಪ್ತವು ರಾಜನಿಲ್ಲದಂತೆ ಒದ್ದಾಡುವುದರಿಂದ ಕಾಪಾಡಿರುತ್ತಾಳೆ. ತನ್ನ ಮಗ ಪೆರೊಪೇಪಿಗೆ ಅನೆಪ್ ಎಂಬ ಮುದ್ದು ಸೊಸೆಯನ್ನು ಮದುವೆ ಮಾಡಿ ಅರಮನೆಯ ಸಂಪ್ರದಾಯವನ್ನು ಕಾಪಾಡಿರುತ್ತಾಳೆ.
ಈ ಕಾದಂಬರಿಯ ಉದ್ದಕ್ಕೂ ಆ ಕಾಲದ ಸಾಮಾಜಿಕ ಆರ್ಥಿಕ ಸ್ಥಿತಿಗತಿಗಳು, ಅರಮನೆಯ ಚಿತ್ರಣ, ಹೆಣ್ಣಿನ ಸ್ಥಾನಮಾನ, ಆಕೆಯ ಒಂಟಿತನ, ಪರಿಸ್ಥಿತಿಗಳಿಂದ ಬದಲಾಗುವ ಸ್ತ್ರೀ ಸಂವೇದನೆಗಳು, ಮನಸ್ಥಿತಿಗಳು ನೋಡಿದಾಗ ಈ ಕಾಲಕ್ಕೂ ಅದು ಮುಂದುವರೆದುಕೊಂಡು ಬಂದಿರುವುದು ಚೋದ್ಯವೇ ಎನಿಸುತ್ತದೆ.
ವಂಶ ಪಾರಂಪರ್ಯವಾಗಿ ಒಲಿದ ವಿದ್ಯೆ ರತ್ನ ಶಾಸ್ತ್ರದಲ್ಲಿ ನುರಿತ ರತ್ನ ಪರೀಕ್ಷಕಳಾದ ರಾಜಮಾತೆ ನುಕಿಯಾ ಳ ರತ್ನಗಳ ಕುರಿತಾದ ಅವಳ ಜ್ಞಾನದ ಬಗೆಗಿನ ವಿವರಣೆ ಈ ಕತೆಯಲ್ಲಿ ಒಂದು ಕುತೂಹಲವನ್ನು ಮೂಡಿಸುತ್ತದೆ. ಈಗಲೂ ನಮಗೆ ಯಾವ ರತ್ನಗಳು ಯಾರಿಗೆ ಶುಭ ಮತ್ತು ಯಾವ ರತ್ನಗಳು ನಮ್ಮನ್ನು ದುಷ್ಟ ಶಕ್ತಿಗಳಿಂದ ಕೆಟ್ಟ ಜನರಿಂದ ಕೆಡಕುಗಳಿಂದ ಕಾಪಾಡುತ್ತವೆ ಮತ್ತು ಯಾವುದು ನಮ್ಮ ರಕ್ಷಕ ದೇವತೆಗಳಾಗಿ ನಮ್ಮೊಂದಿಗೆ ಇರುತ್ತವೆ ಎಂದು ಈಗಲೂ ನಾವು ನಂಬುತ್ತೇವೋ ಅದೆಲ್ಲವೂ ಆ ಕಾಲದಲ್ಲೂ ಚಾಲ್ತಿಯಲ್ಲಿದ್ದದ್ದು ವಿಸ್ಮಯವೆನಿಸುತ್ತದೆ. ಈಕೆಯ ಈ ರತ್ನ ಪರೀಕ್ಷೆಯ ಜ್ಞಾನ ಈ ಕಥೆಯ ಕೊನೆಯಲ್ಲಿ ಕೂಡ ಒಂದು ವಿಶಿಷ್ಟ ಪಾತ್ರ ವಹಿಸುವುದು ಕಥೆಗಾರ್ತಿಯ ಕಥೆ ಹೆಣೆಯುವ ಕುಸುರಿ ಕೆಲಸಕ್ಕೆ ವಾಹ್ ಎನ್ನುವಂತಿದೆ.
ಮಹಾ ಕುರುಬತಿಯಾದ ಅನೆಪ್ ಳನ್ನು ದೇವಿ ಕುರುಬತಿಯಾಗುವಲ್ಲಿ ಅವಳ ಗಟ್ಟಿತನ, ಸಮರ್ಪಣೆ, ತ್ಯಾಗ ತನ್ನವರಿಗಾಗಿ ಅವಳ ಚಿಂತನೆ ಎಲ್ಲವೂ ಎಷ್ಟು ಪಾತ್ರವಹಿಸಿದೆಯೋ ಅಷ್ಟೇ ಮತ್ತು ಅದಕ್ಕೂ ಸ್ವಲ್ಪ ಮೇಲಾಗಿಯೇ ಎನ್ನಬಹುದಾದಂತಹ ಕಾರ್ಯ ಮತ್ತು ಜಾಣ್ಮೆ ಅನೆಪ್ ಅವಳ ಅತ್ತೆ ನುಕಿಯಾಳ ಪಾತ್ರ ಕೂಡ ಅಷ್ಟೇ ಗಟ್ಟಿತನದಿಂದ ಕೂಡಿದೆ. ತನ್ನ ಸ್ವಶಕ್ತಿಯಿಂದ ಹಾಗೂ ಸ್ವಯಂ ಪ್ರಭೆಯಿಂದ ಬೆಳಗುವಂತೆ ಅನೆಪ್ ತನ್ನ ಜನರಿಗೆ ದೇವಿಯಾಗಿ ಬೆಳೆದು ಬರುವ ಪ್ರಕ್ರಿಯೆ ಒಂದಾದರೆ ಅದಕ್ಕೆ ಪೂರಕವಾಗಿ ಆಕೆಯನ್ನು ದೇವಿಯಾಗಿ ಮಾರ್ಪಡಿಸುವಲ್ಲಿ ಅಥವಾ ದೇವಿಯಾಗಿ ತನ್ನ ಐಗುಪ್ತದ ಜನರಿಗೆ ಕೆತ್ತಿ ಕೊಡುವಲ್ಲಿ ನುಕಿಯಾಳ ಪಾತ್ರವೂ ಇದೆ. ಅವಳ ಸಹಕಾರ ಮತ್ತು ಶಕ್ತಿಯಿಂದ ಅನೆಪ್ ದೇವಿಯಾಗಿ ರೂಪಗೊಂಡಳು ಎಂಬುದನ್ನು ಅಲ್ಲಗಳೆಯಲಾಗುವುದಿಲ್ಲ. ಹಾಗಾಗಿ ದೇವಿ ಕುರುಬತಿಯಾದ ಅನೆಪ್ ಳಷ್ಟೇ ನುಕಿಯಾ ಕೂಡಾ ಗಟ್ಟಿ ಹೆಣ್ಣು ಮಗಳಾಗಿ, ರಾಜ್ಯದ, ತನ್ನ ಜನರ ಹಿತ ಚಿಂತಕಿಯಾಗಿ ಮನ ಗೆಲ್ಲುತ್ತಾಳೆ.
ಈ ಕಾದಂಬರಿಯ ಇನ್ನೊಂದು ಚೆಂದದ ಕುಸುರಿ ಕೆಲಸ ಎಂದರೆ ದಾಸಿಯರ,ಗಣಿಕೆಯರ, ಅಡುಗೆ ಮಾಡುವವರ ಕುರಿತಾದ ವಿವರಗಳನ್ನು ಚಿತ್ರಿಸುವಾಗ ಕಣ್ಣೆದುರು ಬಂದಂತೆ ಭಾಸವಾಗುತ್ತದೆ. ಪೆರೋಪೇಪಿಯ ಸಾವು, ಸಾವಿನ ಚಿತ್ರಣ ಶವ ಸಂರಕ್ಷಣೆಯ ವಿವರಣೆ ಬಹಳ ಅದ್ಭುತವಾಗಿದೆ. ಈಗಲೂ ಆಸ್ಪತ್ರೆಯಲ್ಲಿ ಕೊಡುವ ಡಿಸ್ಚಾರ್ಜ್ ಸಮ್ಮರಿ ಶೀಟ್ ನಂತೆ ಅಂದಿನ ರಾಜನ ಸಾವಿನ ಕುರಿತ ಸಂಪೂರ್ಣ ವಿವರಣೆಯನ್ನು ಪ್ರಜೆಗಳ ಎದುರು ಹಂಚಿಕೊಳ್ಳುವ ರೀತಿ ನಿಜವಾಗಿಯೂ ಪೇಷಂಟ್ನ ಹಿಸ್ಟರಿ ಶೀಟ್ ತರದ ವಿವರಣೆ ಎಂದೇ ಅನಿಸುತ್ತದೆ. ಅವನ ಗೋರಿ ನಿರ್ಮಾಣದ ಸಮಯ, ಗೋರಿಯೊಳಗಿನ ಚಿತ್ರಣ, ಆ ಶಾಶ್ವತ ಮನೆಯ ನಿರ್ಮಾಣಕ್ಕೆ ಅಲ್ಲಿನ ಬಡ ಜನರ ಬದುಕು ಶೋಷಣೆ, ಬವಣೆ, ಗೋರಿ ಮನೆ ಕಾರ್ಯದ ನಿರ್ಮಾಣದ ವಿವರಣೆ ಅಲ್ಲಿ ದುಡಿಯಬೇಕಾದ ಪ್ರತಿ ಮನೆಯ ಗಂಡಸಿನ ದುಡಿತ ಮನೆಯ ಕಷ್ಟ ಆಗಿನ ದೌರ್ಜನ್ಯ ಮೌನವಾದ ತ್ಯಾಗದ ಕುರಿತು ಬೆಳಕು ಚೆಲ್ಲುವಂತಿದೆ. ಅಲ್ಲಿನ ರಾಜನೀತಿ, ಸಾಂಪ್ರದಾಯಿಕ ರೀತಿನೀತಿಗಳನ್ನು ಮೀರಲಾಗದ ಅಲ್ಲಿನವರ ಮನಸ್ಥಿತಿ ಎಲ್ಲಾ ಎಲ್ಲಾ ವಿಷಯಗಳ ವಿವರಣೆ ಎಷ್ಟು ಸೊಗಸಾಗಿದೆ ಎಂದರೆ ಸ್ವತಃ ಕಥೆಗಾರ್ತಿಯೇ ಪ್ರತ್ಯಕ್ಷದರ್ಶಿಯಾಗಿ ನೋಡಿ ಬಂದು ನಮಗೆ ಹಂಚಿಕೊಳ್ಳುತ್ತಿದ್ದಾರೇನೋ ಅನ್ನುವ ಹಾಗಿದೆ.
ಇನ್ನು ಮಹಾಕುರುಬತಿಯಾದ ಅನೆಪ್ ದೇವಿ ಕುರುಬತಿಯಾಗಲು ತಯಾರಾಗುವ ಹಂತದವರೆಗೆ ಆಕೆ ಹೇಗೆ ದೇವಿ ಕುರುಬತಿಯಾದಳು ಎಂದು ಸಾಬೀತುಪಡಿಸಲು ಎಷ್ಟೊಂದು ಚೆಂದದ ವಿವರಗಳಿವೆ ಎಂದರೆ ಅವಳನ್ನು ದೇವಿ ಕುರುಬತಿ ಎಂದು ನಾವೂ ಒಪ್ಪಿಕೊಳ್ಳಬೇಕು ಹಾಗೆ ವಿವರಣೆ ಇದೆ. ತನ್ನ ರಾಜ್ಯದ ಜನತೆಯ ಒಳಿತಿಗಾಗಿ ಹೇಗೆ ದಾರಿ ಕಂಡುಕೊಂಡಳು ಎಂಬುದನ್ನು ವಿಷದವಾಗಿ ವಿವರಿಸಿದ್ದಾರೆ ಎನ್ನಬಹುದು. ಆಕೆ ಆಯ್ದುಕೊಂಡ ಮಾರ್ಗ ನಿಜಕ್ಕೂ ಅಭಿನಂದನೀಯ. ತನ್ನ ಗಂಡನ ಮರಣದ ನಂತರ ತನ್ನ ಅತ್ತೆ ತನಗೆ ವಹಿಸಿದ ರಾಜ್ಯಭಾರದ ಜವಾಬ್ದಾರಿಯನ್ನು ಆಕೆ ಎಷ್ಟು ಅಚ್ಚುಕಟ್ಟಾಗಿ ನಿಭಾಯಿಸಿದನೆಂದರೆ ಅವಳ ಅತ್ತೆಗೆ ತನ್ನ ಆಯ್ಕೆಯ ಬಗ್ಗೆ ಹೆಮ್ಮೆ ಎನ್ನುವಂತೆ ಮಾಡಿದಳು. ಒಂದು ಹೆಣ್ಣಾಗಿ, ಮಗುವಿನ ತಾಯಿಯಾಗಿ ವಿಧವೆ ರಾಣಿಯಾಗಿ ಅಧಿಕಾರ ಸ್ವೀಕಾರ ಮಾಡಿ ತನ್ನ ಜನರ ಒಳಿತಿಗಾಗಿ ಆಕೆ ಮಾಡಬೇಕಾದ ಕೆಲಸಗಳ ಕಡೆಗೆ ಗಮನಹರಿಸುವುದು ಕಡು ಕಷ್ಟವೇ ಸರಿ. ಆಕೆ ಎಲ್ಲ ಗೊಂದಲಗಳನ್ನು ಮೀರಿ ತನ್ನ ಬುದ್ಧಿವಂತಿಕೆಯಿಂದ ತುಂಬಾ ಸಶಕ್ತರಾಣಿಯಾಗಿ ಹೇಗೆ ಬೆಳೆದಳೆಂದರೆ ಯಾವ ರಾಜನೂ ಮಾಡಲಾಗದಂತಹ ಆಡಳಿತದ ಸುಧಾರಣೆಗಳನ್ನು ಧರ್ಮದ ಚೌಕಟ್ಟಿನಲ್ಲೇ ಸಂಪ್ರದಾಯಗಳನ್ನು ಮುರಿಯದಲೇ ಜನರ ಮನಸ್ಸನ್ನು ಗೆಲ್ಲಲು ಜನರ ಬಳಿಗೇ ಹೋಗಿ ಅವರ ನಿಜವಾದ ಕಷ್ಟ ಸುಖಗಳನ್ನು ಹತ್ತಿರದಿಂದ ತಾನೇ ಅರಿತು ಅವರ ಕಷ್ಟಗಳನ್ನು ದೂರ ಮಾಡಲು ಅವಳು ಕೈಗೊಳ್ಳುವ ಒಂದೊಂದು ಕಾರ್ಯಗಳು ಅವಳನ್ನು ಯಶಸ್ಸಿನ ಮೆಟ್ಟಿಲು ಏರಲು ಸಹಾಯ ಮಾಡುತ್ತವೆ. ಹಾಗೆಯೇ ತನ್ನ ಜನರ ಕಲೆಗಳನ್ನು ಆಕೆ ಗುರುತಿಸಿ ಗೌರವಿಸಿ ಅದಕ್ಕೆ ವ್ಯಾಪಾರದ ಸ್ಪರ್ಶ ಮಾಡಿ ಜನರಿಗೂ ತನ್ನ ದೇಶಕ್ಕೂ ಆರ್ಥಿಕ ಅಭಿವೃದ್ಧಿಯಾಗುವಂತೆ ಅವಳು ವಿದೇಶಿ ವಿನಿಮಯಗಳ ವ್ಯಾಪಾರವನ್ನು ಕೂಡ ಕೈಗೊಳ್ಳುವಲ್ಲಿ ಚತುರಮತಿಯಾಗಿ ಕಾರ್ಯನಿರ್ವಹಿಸುವುದು ಬಹಳ ಮೆಚ್ಚಿನ ಅಂಶ. ಒಂದು ಹೆಣ್ಣು ತಾಯಿ ಹೃದಯದಿಂದ ಮಮತೆಯಿಂದ ತನ್ನ ಪ್ರಜೆಗಳನ್ನು ತನ್ನ ಮಕ್ಕಳಂತೆ ಎಂಬ ಮಮಕಾರದಿಂದ ನೋಡುವಲ್ಲಿ ಯಶಸ್ವಿಯಾಗಲು ಸಾಧ್ಯ. ಆಕೆ ತನ್ನ ಜನರಿಗಾಗಿ ಕೈಗೊಂಡ ಮತ್ತು ತನ್ನ ದೇಶ ಆರ್ಥಿಕವಾಗಿ ಸದೃಢವಾಗುವಲ್ಲಿ ಅವಳು ಇಡುವ ಪ್ರತಿಯೊಂದು ದೃಢ ಹೆಜ್ಜೆಗಳನ್ನು ಇಡುವ ಕೆಲಸದ ವಿವರಣೆ ಓದುತ್ತಾ ಹೋದಂತೆ ಆಕೆ ದೇವಿ ಕುರುಬತಿಯಾಗಲು ಜನರು ಎಷ್ಟು ಪ್ರೀತಿ ಮತ್ತು ಮುಕ್ತ ಮನಸ್ಸಿನಿಂದ ಅವಳನ್ನು ದೇವಿ ಕುರುಬತಿಯಾಗಿಸುತ್ತಾರೋ ಅಲ್ಲಿಯವರೆಗಿನ ಪ್ರಕ್ರಿಯೆಯಲ್ಲಿ ಲೇಖಕಿ ಓದುಗರನ್ನು ಕೂಡಾ ದೇವಿ ಕುರುಬತಿಯಾಗಿ ಅನೆಪ್ ಳನ್ನು ಸ್ವೀಕರಿಸುವುದಕ್ಕೆ ತಯಾರು ಮಾಡುತ್ತಾರೆ ಎನ್ನಬಹುದು… ಅತ್ಯಂತ ಪ್ರತಿಭಾ ಶಾಲಿಯಾದ ಎಷ್ಟೊಂದು ವಿದ್ಯೆಗಳನ್ನು ಕಲಿತ, ವೀರ ವನಿತೆಯಾದ ಎಲ್ಲವನ್ನು ನಿಭಾಯಿಸಿ ದೇವಿ ಕುರುಬತಿಯಾದ ಅನೆಪ್ ಎಂಬ ಹೆಣ್ಣು ಮಗಳ ಅಂತ್ಯ ಕಾದಂಬರಿಯಲ್ಲಿ ನಿಜಕ್ಕೂ ಮನೋಜ್ಞವಾಗಿ ಮೂಡಿ ಬಂದಿದೆ.
ಅವರು ಅದೆಷ್ಟು ಸಣ್ಣ ಸಣ್ಣ ವಿಷಯಗಳನ್ನೂ ಮಹತ್ವದ್ದಾಗಿ ಅಷ್ಟೇ ಸೂಕ್ಷ್ಮ ಗ್ರಹಿಕೆಯಿಂದ ಕಟ್ಟಕೊಟ್ಟಿದ್ದಾರೆ ಎಂಬುದನ್ನು ಅರಿಯಲು ಒಮ್ಮೆ ಕಾದಂಬರಿ ಓದಲೇಬೇಕು….
ಹೀಗೆ ಕಾದಂಬರಿ ಒಂದನ್ನು ಹಿಡಿದು ಕುಳಿತು ಸಂಪೂರ್ಣ ಓದಿದ್ದು ಬಹಳ ದಿನಗಳಾಗಿತ್ತು. ಕಾದಂಬರಿ ಎಂದರೆ ಒಂದು ದೊಡ್ಡ ಪುಸ್ತಕ ಓದುವುದಕ್ಕೆ ಬಹಳ ಸಮಯ ಬೇಕು ಎಂದು ದೊಡ್ಡ ಪುಸ್ತಕವನ್ನು ಓದಲು ಹಿಂದೇಟು ಹಾಕುವ ಶಾಲಾ ಮಕ್ಕಳಂತೆ ಸ್ವಲ್ಪ ಹಿಂಜರಿದಿದ್ದೆ. ಆದರೆ ಐಗುಪ್ತದ ಇತಿಹಾಸದ ಐಸಿರಿ ಎಂಬ ದಂತಕತೆಯಾದ ಈಜಿಪ್ಟಿನ ರಾಣಿ ದೇವಿ ಕುರುಬತಿ ಎಂಬ ಕಾದಂಬರಿ ನನ್ನನ್ನು ಒಂದೇ ಓಘದಲ್ಲಿ ಓದಿಗೆ ಕಟ್ಟಿಹಾಕಿಬಿಟ್ಟಿತು ಎನ್ನಬೇಕು. ಇದನ್ನು ಓದಿ ಮುಗಿಸಿದ ನಾಲ್ಕೈದು ದಿನಗಳವರೆಗೂ ನಾನು ಈ ಕಾದಂಬರಿಯ ಗುಂಗಿನಲ್ಲೇ ಇದ್ದೆ. ಹೆಣ್ಣೊಬ್ಬಳ ಆತ್ಮ ಶಕ್ತಿ ಹೇಗೆ ಒಂದು ಸಂದರ್ಭದಿಂದ ಏನೆಲ್ಲವನ್ನು ಸಾಧಿಸಬಹುದು, ಯಾವ ಮಟ್ಟವನ್ನೂ ಏರಬಹುದು, ಏನೆಲ್ಲವನ್ನು ನಿಭಾಯಿಸಬಹುದು ಎಂಬುದರ ಕುರಿತೆ ಯೋಚಿಸುತ್ತಿದೆ. ಹಾಗಾಗಿ ಈ ಕಾದಂಬರಿಯ ಕುರಿತು ನನ್ನ ನಾಲ್ಕು ಅನಿಸಿಕೆಗಳ ಮಾತನ್ನು ಇಲ್ಲಿ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ಇದು ವಿಮರ್ಶೆಯಂತೂ ಖಂಡಿತ ಅಲ್ಲ ಹಾಗೂ ಶುಭದ ಮೇಡಂ ಅಂತವರ ಕಾದಂಬರಿಯನ್ನು ವಿಮರ್ಶಿಸುವಂತಹ ವಿಮರ್ಶಕಿ ನಾನಲ್ಲ, ಆ ಆಸೆಯೂ ನನಗೆ ಖಂಡಿತ ಇಲ್ಲ… ಕಾದಂಬರಿಯ ಒಳ ಹೊರಗಿನ ಚಿತ್ರಣಗಳು, ಕಾದಂಬರಿ ಹೆಣೆಯುವಿಕೆಯ ತಂತ್ರಗಾರಿಕೆ, ಪಾತ್ರಗಳ ವಿವರಣೆ, ಕಥಾವಸ್ತುಗಳು ಕಥೆಗೆ ಸಂಬಂಧಿಸಿದ ಹಿನ್ನೆಲೆ ಅಥವಾ ಕಥೆಯ ಪಾತ್ರಗಳಾಗಲಿ ಸನ್ನಿವೇಶಗಳಾಗಲಿ ಅದನ್ನು ಬಳಸಿಕೊಳ್ಳಬಹುದಾದ ಕಲೆಗಾರಿಕೆ ಕುರಿತು ಹೇಳಲು ನನಗೆ ತಿಳಿಯದು. ಇದು ಕೇವಲ ಕಾದಂಬರಿಯ ಕುರಿತ ನನ್ನ ಅನಿಸಿಕೆ ಅಷ್ಟೇ. ಇದರ ಕುರಿತು ಇನ್ನಷ್ಟು ಹೇಳಬೇಕು ಎಂದೇ ಅನಿಸುತ್ತದೆ. ಸಾಧ್ಯವಾದರೆ ಎಲ್ಲರೂ ಇದನ್ನು ಓದಿದರೆ ನಿಜವಾಗಿಯೂ ನಿಮ್ಮ ಮನಸ್ಸಿಗೂ ಇದು ಹಿಡಿಸೀತು ಎಂಬ ಭಾವನೆ ಅಷ್ಟೇ….
ಇನ್ನಷ್ಟು ಇಂತಹಾ ಚೆಂದದ ಓದನ್ನು ನಮಗೆ ದಕ್ಕಿಸಿಕೊಡಲಿ ಎಂಬ ಆಶಯದೊಂದಿಗೆ ಶುಭದಾ ಮೇಡಂ ಅವರಿಗೆ ಧನ್ಯವಾದಗಳು ಮತ್ತು ಅಭಿನಂದನೆಗಳು….
ಮಮತಾ ಶಂಕರ್