ಮಾಲಾ ಚೆಲುವನ ಹಳ್ಳಿ ಅವರ ಕವಿತೆ-ಪ್ರಣಯ ರಾಗ

ಮುನ್ನೋಟ ಎದುರಿರಲು ಜಗವೆಂಬ
ರಂಗದಿ ಜೊತೆಯಾದೆಯಲ್ಲ
ಕಣ್ಣೋಟ ಬೆರೆತಿರಲು ಮೈ ತುಂಬ
ರೋಮಾಂಚನವು ನಲ್ಲ

ಬರಿದಾದ ಎದೆನೆಲಕ್ಕೆ ಒಲವಿನ
ಸುರಿಮಳೆಯ ಸುರಿಸಿರುವೆ
ಬರಡಾದ ಹೃದಯವ ಕೊನರಿಸಿ
ಪ್ರೀತಿ ಬಳ್ಳಿಯ ಹಬ್ಬಿಸಿರುವೆ

ಕಾದು ಕನವರಿಸುತಿರುವ ಜೀವಕ್ಕೆ
ಪ್ರೇಮದೋಲೆ ಬರೆದವನು
ವಾದದಲ್ಲಿ ಸೋತಿರಲು ತೋಳ್ತೆಕ್ಕೆ
ಯಲಿ ಬಂಧಿಸಿ ರಮಿಸಿದವನು

ನಲುಗಿರುವ ಪಲ್ಲಂಗ ಹೇಳುತಿದೆ
ಪ್ರಣಯ ರಾಗದ ಕಥೆಯ
ತಾರೆಗಳ ತಂದಿರಿಸಿ ಅನುರಾಗಕೆಂದೆ
ಒಪ್ಪಿ ಅಪ್ಪಿದೆ ಆ ನಿನ್ನ ನಡೆಯ

ಶೃಂಗಾರ ಭಾವದ ರಸಿಕನು ನೀನು
ಬಾಳೆoಬ ಪಥದಿ ಕೈ ಹಿಡಿದೆ
ಬಂಗಾರದೊಡವೆ ಬೇಡವೆಂದವನು
ಬಳಸಿ ಮುತ್ತಲಿ ಶೃಂಗರಿಸಿದೆ.

———————–

2 thoughts on “ಮಾಲಾ ಚೆಲುವನ ಹಳ್ಳಿ ಅವರ ಕವಿತೆ-ಪ್ರಣಯ ರಾಗ

Leave a Reply

Back To Top