ಅಂಕಣ ಸಂಗಾತಿ
ಅನುಭಾವ
ಡಾ.ಸಾವಿತ್ರಿ ಮಹಾದೇವಪ್ಪ ಕಮಲಾಪುರ
ಅಕ್ಕಮಹಾದೇವಿಯವರ ವಚನ
ಹೆದರದಿರು ಮನವೆ ಬೆದರದಿರು ತನುವೆ
ನಿಜವನರಿತು ನಿಶ್ಚಿಂತನಾಗಿರು
ಫಲವಾದ ಮರನ ಕಲ್ಲಲಿ ಇಡುವುದೊಂದು
ಕೋಟಿ ಎಲವಾದ ಮರನ ಕಲ್ಲಲಿ ಇಡುವರೊಬ್ಬರ ಕಾಣೆ
ಭಕ್ತಿಯುಳ್ಳವರ ಬೈವರೊಂದು ಕೋಟಿ
ಭಕ್ತಿಯಿಲ್ಲದವರ ಬೈವರೊಬ್ಬರ ಕಾಣೆ
ನಿಮ್ಮ ಶರಣರ ನುಡಿಯ ಎನಗೆ ಗತಿ ಸೋಪಾನ ಚೆನ್ನಮಲ್ಲಿಕಾರ್ಜುನ
ಅಕ್ಕಮಹಾದೇವಿಯವರು 12 ನೇ ಶತಮಾನದ ಶ್ರೇಷ್ಠ ಶರಣೆ.ಹಾಗೂ ಮೊದಲ ಕವಿಯತ್ರಿಯವರಾಗಿ ,ಬದುಕಿನ ಜಂಜಾಟದಿಂದ ದೂರ ಸರಿದವರು.
ದೂರುವರು ಹೇಗಿದ್ದರೂ ದೂರುವರು.
ದುರಿತ ಪಾಪವ ಬಿಡದೇ ಹಂಗಿಸುವ ಮನದವರ ಬಗ್ಗೆ ಚಿಂತಿತನಾಗದೇ ಕೊರಗದಿರು ಮನವೇ ,ಎಂದು ತನ್ನನ್ನು ತಾನೇ ಸಮಾಧಾನ ಪಟ್ಟುಕೊಳ್ಳುವ ಅಕ್ಕನವರ ವಚನ ಅನುಭಾವದ ಅಡುಗೆಯ ಪ್ರಸಾದದ ಶ್ರೀಫಲ.
ಮೆಲ್ಲಿದಷ್ಟು ಮೆಲ್ಲಬೇಕು ಎನ್ನುವ ಅಸಂತೃಪ್ತ ಕಾಣುವ ಮನ .
ಹೇ ಮನವೇ ಏಕೆ ? ಚಿಂತೆಯ ಮಾಡಿ ನೀನು ಕೊರಗುವೆ .ಚೆನ್ನಮಲ್ಲಿಕಾರ್ಜುನನನ್ನು ಹುಡುಕುವ ಪರಿಯಲಿ ಅನೇಕ ನಿಂದನೆಗಳನ್ನು ಅನುಭವಿಸಿ ದಿಕ್ಕರಿಸಿ ಬಂದೆ ಲೌಕಿಕ ಗಂಡನಾದ ಕೌಶಿಕನನ್ನು .ಇನ್ನೂ ಮುಂದೆ ಹೆದರಲಾರೆ, ಬೆದರಲಾರೆ ನಿಜದ ಅರಿವು ತಿಳಿದು ಸಾಗುವೆ .ನಿಶ್ಚಿಂತೆಯಿಂದ ಎನ್ನುವ ಅಕ್ಕನವರ ಮನದ ಗಟ್ಟಿ ನಿರ್ಧಾರಕ್ಕೆ ಶರಣೆನ್ನಲೇಬೇಕು .
ಅತ್ಯಂತ ಚಿಕ್ಕ ವಯಸ್ಸಿನಲ್ಲಿಯೇ ಅಗಾಧವಾದ ಅಧ್ಯಾತ್ಮದ ಔಚಿತ್ಯವನ್ನು ತೋರ್ಪಡಿಸುವ ರೀತಿ ಅಮೋಘ.
ಹೆದರದಿರು ಮನವೆ ಬೆದರದಿರು ತನುವೆ*
ನಿಜವನರಿತು ನಿಶ್ಚಿಂತನಾಗಿರು
ಚೆನ್ನಮಲ್ಲಿಕಾರ್ಜುನನೆನ್ನುವ ಅರಿವಿನ ಕುರುವು ಲಿಂಗ.
ಭವ ಬಂಧನದಿಂದ ಕಳಚಿ ನಡೆಯುವ ಅಕ್ಕನ ಗಟ್ಟಿ ನಿರ್ಧಾರಕ್ಕೆ .ತನ್ನ ಮನಕ್ಕೆ ತಾನೇ ಧೈರ್ಯ ತಂದು ಕೊಂಡು .ಸಾಗುವ ಪರಿ .ಹೆದರಿದರೆ ಸಾಗದು ಮಾರ್ಗ. ನಿಶ್ಚಿಂತಳಾಗಿ ಹೊರ ನಡೆಯುವ ಅದ್ಭುತ ಪಯಣ ಅಕ್ಕನದು .ಅದು ಬ್ರಹ್ಮ ಜ್ಞಾನ.
ಬಯ್ಯುವರು ,ಟೀಕಿಸುವರು ,ದೂಷಿಸುವರು ,ಹಿಂಸಿಸುವರು ಇವುಗಳೆಲ್ಲದರ ಪರಿವೇ ಇಲ್ಲದೇ ಸಾಗುವ ಪಥವೇ ಬ್ರಹ್ಮ ಜ್ಞಾನ.ಆ ಬ್ರಹ್ಮ ಜ್ಞಾನದಲ್ಲಿ ಸಾಗುವ ಅಕ್ಕನ ಮನ ಹೆದರದೇ ,ಬೆದರದೇ ನಿಶ್ಚಿಂತವಾಗಿದೆ ಅಕ್ಕನವರ ಭಾವ.
ಫಲವಾದ ಮರನ ಕಲ್ಲಲಿ ಇಡುವುದೊಂದು ಕೋಟಿ .ಎಲವಾದ ಮರನ ಕಲ್ಲಲಿ ಇಡುವರೊಬ್ಬರ ಕಾಣೆ
ಹಣ್ಣು ಬಿಟ್ಟ ಮರಕ್ಕೆ ಏಟು .ಕೈಯಿಂದ ನಿಲುಕದಿದ್ದರೂ, ಕಲ್ಲಿನಿಂದ ಆದರೂ ಹೊಡೆದು ಹಣ್ಣನ್ನು ಬೀಳುಸುವರು .ಹಾಗೇ ಅಕ್ಕಮಹಾದೇವಿಯವರ ಮನ ಆಗಿದೆ .ಅದೆಷ್ಟು ಕಲ್ಲಿನ ಪೆಟ್ಟು ತಿಂದಿದ್ದಿರಬಹುದು.ಎಷ್ಟೊಂದು ನೋವು ಆಗಿರಬಹುದು ಅಕ್ಕನ ಮನಕ್ಕೆ .ಮನುಷ್ಯರು ಅಲ್ಲವೇ ? ಸಿಹಿಯಾದ ಹಣ್ಣಿಗೆಯೇ ,ಫಲಬಿಟ್ಟ ಮರಕ್ಕೆ ತಾನೇ ಕಲ್ಲನ್ನು ಎಸೆಯುವರು .ಹಣ್ಣು ಬಿಡದ ಮರ ಕೇವಲ ಎಲೆಯಿಂದ ತುಂಬಿದ ಮರಕ್ಕೆ ಯಾರೂ ಕಲ್ಲಿನಿಂದ ಹೊಡೆದು, ಎಲೆಯನ್ನು ಬೀಳಿಸುವ ಮೂರ್ಖ ಕೆಲಸಕ್ಕೆ ಕೈ ಹಾಕಲಾರರು.
ಭಕ್ತಿಯುಳ್ಳವರ ಬೈವರೊಂದು ಕೋಟಿ
ಭಕ್ತಿಯಿಲ್ಲದವರ ಬೈವರೊಬ್ಬರ ಕಾಣೆ
ಭಕ್ತಿಯಿಂದ ನಡೆಯುವ ಜನರ ಮೇಲೆಯೇ ಅಪವಾದ .
ಅಂಥವರ ಮೇಲೆಯೇ ಕೋಟಿ ಜನರ ಕಂಗಳು. ಭಕ್ತಿಯಿಂದ ನಡೆಯುವ ಭಕ್ತರು ಕಂಡರೆ
ದೂಷಿಸುವರು ,ತೆಗಳುವರು .
ಒಬ್ಬೊಬ್ಬರದು ಒಂದೊಂದು ತರ ಮನ .ಯಾರು ದೇವರನ್ನು ಪೂಜಿಸುವರೋ ,ಭಕ್ತಿಯಿಂದ ಕಾಣುವರೋ, ಅವರಿಗೇನೆ ದೂಷಣೆಗಳು ಜಾಸ್ತಿ ಈ ಸಮಾಜದಲ್ಲಿ .
ಭಕ್ತಿಯಿಲ್ಲದವರ ಬಗ್ಗೆ ಬೈಯ್ಯಲಾರರು ಜನಗಳು .
ನಿನ್ನ ಬಗ್ಗೆ ಅಪಾರವಾದ ಭಕ್ತಿ ಇರುವುದರಿಂದಲೇ ನನಗೆ ಹೀಗಾಗಿದೆ ಚೆನ್ನಮಲ್ಲಿಕಾರ್ಜುನಾ ಎನ್ನುವರು ಅಕ್ಕ .
ನಿಮ್ಮ ಶರಣರ ನುಡಿಯ ಎನಗೆ ಗತಿ ಸೋಪಾನ ಚೆನ್ನಮಲ್ಲಿಕಾರ್ಜುನಾ
ಮನದ ಚಂಚಲತೆಯ ದುಃಖಕ್ಕೆ ಚೆನ್ನಮಲ್ಲಿಕಾರ್ಜುನಾ ನಿಮ್ಮ ಶರಣರ ಅರಗಳಿಗೆಯ ನುಡಿ ಮಾತಿಗೆ ಎನ್ನ ಮನ ಶಾಂತಿ ಪಡೆಯಬಹುದು .ನನಗೆ ನಿಮ್ಮ ಶರಣರ ಸಂಗದಲ್ಲಿ ಇರಿಸು ಹೇ ಚೆನ್ನಮಲ್ಲಿಕಾರ್ಜುನಾ .ಅವರು ದೂಷಿಸಲಾರರು .ಅವರು ಕಲ್ಲನ್ನು ಎಸೆಯಲಾರರು. ನಿಂದಿಸಲಾರರು .ಶಾಂತಿಪ್ರೀಯರು ಸಮಾಧಾನ ಚಿತ್ತರು .ಅವರ ಮಾತುಗಳೇ ನನ್ನ ಬದುಕಿಗೆ ಮೆಟ್ಟಿಲು.ಎನ್ನುವರು ಅಕ್ಕ .
ಶರಣರ ನಡೆ ಪರುಷ. ಶರಣರ ನುಡಿ ಪರುಷ. ಇಂಥಹ ಶರಣರ ಸಂಗದಲ್ಲಿ ಇರುವಂತೆ ಮಾಡು ಹೇ ಚೆನ್ನಮಲ್ಲಿಕಾರ್ಜುನಾ ಎನ್ನುವರು .
ಒಟ್ಟಿನಲ್ಲಿ ಅಕ್ಕನವರು ಅನಂತ ಕಾಲದಿಂದ ಒಲಿದ ಚೆನ್ನಮಲ್ಲಿಕಾರ್ಜುನನನ್ನು ಹುಡುಕಿಕೊಂಡು ಹೋಗುವ ಅಕ್ಕ ನ ರೀತಿಯೇ ,ಒಂದು ರೀತಿಯ ಅನುಭಾವಿಕ ಅನ್ವೇಷಣೆಯ ಪ್ರತೀಕವಾಗಿದೆ.
ಡಾ ಸಾವಿತ್ರಿ ಕಮಲಾಪೂರ