ಜಯಶ್ರೀ ಎಸ್ ಪಾಟೀಲ ಧಾರವಾಡ ಅವರ ಕವಿತೆ-“ಮತ್ತೆ ಅರಳಲಿ”

ಸೋತೆನೆಂದು ಕುಗ್ಗಬೇಡವೆ ಮಗಳೆ
ಮರಳಿ ಪ್ರಯತ್ನವ ಮಾಡುತ ಬೆಳೆ
ತುಂಬಿ ಹರಿಯಲಿ ಗೆಲುವಿನ ಹೊಳೆ
ಮತ್ತೆ ಅರಳಲಿ ಮೊಗದಲಿ ಹೂ ಕಳೆ

ಪರರ ನಿಂದನೆಗಳನು ನಿರ್ಲಕ್ಷಿಸು
ಭಯ ಭೀತಿ ದುಗುಡಗಳನು ತ್ಯಜಿಸು
ಮುಂದೆ ಸಾಗು ಬಿಡುತ ಮುನಿಸು
ಮತ್ತೆ ಅರಳಲಿ ನೀನು ಕಂಡ ಕನಸು

ನೋಡುವ ದೃಷ್ಟಿ ಉತ್ತುಂಗದಲ್ಲಿರಲಿ
ಕಾಯಕದಲಿ ಸತತ ಪರಿಶ್ರಮವಿರಲಿ
ಮನದಲ್ಲಿ ಗೆಲ್ಲುವೆನೆಂಬ ಛಲವಿರಲಿ
ಮತ್ತೆ ಅರಳಲಿ ನಿನ್ನ ಕಾರ್ಯ ಶೈಲಿ

ತಂಪಾಗಿ ಆರಿಸು ಮನದ ಉರಿ
ನಿತ್ಯವು ಮೂಡಲಿ ಸಾಧನೆಯ ಗರಿ
ಪ್ರತಿ ಹೆಜ್ಜೆಗು ನಿನ್ನದಾಗಲಿ ಜಯಭೇರಿ
ಮತ್ತೆ ಅರಳಲಿ ನಿನ್ನ ಪ್ರತಿಭೆಯ ಸಿರಿ

ಬುದ್ಧ ಬಸವರ ಪಥದಲಿ ಸಾಗುತ
ದ್ವೇಷ ಮರೆತು ಪ್ರೀತಿಯ ಹಂಚುತ
ಪರಿಶುದ್ಧ ಕಾಯಕದಲಿ ತೊಡಗುತ
ಮತ್ತೆ ಅರಳಲಿ ಅರಿವಿನ ಜ್ಞಾನಾಮೃತ

ದೂರ ಸರಿಯಲಿ ದುಃಖ ನೋವು
ಹೆಚ್ಚಲಿ ಸುಖ ಸಂತೋಷ ನಲಿವು
ತುಟಿಯಂಚಲ್ಲಿ ಇರಲಿ ಸದಾ ನಗುವು
ಮತ್ತೆ ಅರಳಲಿ ಬಾಡಿದ ಮೊಗವು


Leave a Reply

Back To Top