ಕಾವ್ಯ ಸಂಗಾತಿ
ಶೋಭಾ ಮಲ್ಲಿಕಾರ್ಜುನ್
ನಿಶೆ ತೊರೆದ ಉಷೆ
ಫಲ್ಗುಣಿಯ ನಿಶೆಯಲಿ
ಹಳೆ ದಿರಿಸ ಸರಿಸಿ
ಚೈತ್ರದ ಉಷೆಯಲಿ
ಚಿಗುರನೇ ಧರಿಸಿ
ಎದೆಗಡಲ ಕಡೆದು
ಭಾವಗಳ ಉಕ್ಕಿಸಿ
ಹಗಲಿರುಳ ಓಟದಲಿ
ಕಾಲವನೇ ಮರೆಸಿ
ಸಾಗಿ ಬಂದಿದೆ ಬದುಕ ಬಂಡಿ
ನವ ವಸಂತವ ಮೆರೆಸಿ
ಹಳೆಯ ಕಹಿಯನು ಮರೆತು
ಇಳೆಯ ಸವಿಯಲಿ ಬೆರೆತು
ಕಳೆದ ಹೆಜ್ಜೆಗಳ ಅನುಭವಗಳ ಕಲಿತು
ಭರವಸೆಯ ಬದುಕಾಗಲಿ ಎಲ್ಲರೊಂದಿಗೆ ಕಲೆತು
ಮತ್ಸರವು ಮಣಿಯಲಿ
ತಾಮಸವು ತಣಿಯಲಿ
ಬಸಿರೊಂದೆ ಆಗದ
ಬಂಧಗಳೂ ಬೆಸೆಯಲಿ
ಕಣ್ಣ ತುಂಬೆಲ್ಲ ಮೊಳೆಯಲಿ
ಕನಸು ಕಾಣುವ ಹಂಬಲ
ಮೊಳಗಲಿ ಛಲದೊಂದಿಗೆ
ದೃಢ ಮನದ ಬೆಂಬಲ
ದಿಟ್ಟ ಹೆಜ್ಜೆಗಳರಸಲಿ ಯಶಸ್ಸಿನ ಪಥ
ದಿಟ್ಟಿ ನೆಟ್ಟಗಿರಲಿ ಸಮರ್ಪಕ ಗುರಿಯತ್ತ
ಹೊತ್ತಿಸೋಣ ಸದ್ಗುಣಗಳ ಹಣತೆಯ
ಬೆಳಗಿಸೋಣ ವೈಜ್ಞಾನಿಕ ಪ್ರಗತಿಯ
ಸಾಧನೆಗಳ ಸರಕಿಗೆ
ಸೊಡರ ಸಂತೆಯಾಗಲಿ
ಈ ನವ ವರುಷ
ಜಗದ ಅಣು ರೇಣು ತೃಣಕಾಷ್ಠದ ಸೃಷ್ಟಿಗೂ ಹರುಷ
ಶೋಭಾ ಮಲ್ಲಿಕಾರ್ಜುನ್