ಕಾವ್ಯ ಸಂಗಾತಿ
ನಾಡೋಜ ಬರಗೂರರ ಕುರಿತು ಒಂದು ಕಾವ್ಯ-
ಡಾ.ಸಿದ್ಧರಾಮ ಹೊನ್ಕಲ್
ನಾಡೋಜ
ಬರಗೂರು ರನ್ನು
ಕಂಡಾಗಲೆಲ್ಲ
ಹಲವರಿಗೆ
ಬೆಂಕಿ
ನೆನಪಾಗುತ್ತದೆ ;
ಹೌದು
ಅವರು ಸದಾ
ಬೆಂಕಿ
ನುಂಗುತ್ತಾರೆ
ಒಡಲಾಳದಿಂದ
ಹೂ..ಸುರಿಸುತ್ತಾರೆ…
ಕಾಗೆ ಕಾರುಣ್ಯದ
ಕಣ್ಣಿನ ಇವರು
ಒಡನಾಟಕ್ಕೆ ಬಂದ
ಎಲ್ಲರಿಗೂ
ಸದಾ
ಕರುಳಬಳ್ಳಿಯಲಿ
ಕಟ್ಟಿ ಹಾಕುತ್ತಾರೆ…
ನಮ್ಮವರೆಂಬ
ಅಪಾರ ಮಮತೆ
ಕಾಳಜಿಯ ತೋರಿ
ಬಾಂಧವ್ಯದ ಬಳ್ಳಿಗೆ
ನೀರೆರೆಯುತ್ತಾರೆ
ಬೆನ್ನುತಟ್ಟಿ ಬೆಳೆಸುತ್ತಾರೆ..
ಪ್ರೀತಿ ವಿಶ್ವಾಸ
ಅಭಿಮಾನದಿ
ಹತ್ತಿರ ಇಟ್ಟುಕೊಂಡು
ಸಕಲ ಜನಾಂಗದ
ಶಾಂತಿಯ ತೋಟವೇ
ಇವರಾಗುತ್ತಾರೆ…
ಬೆವರೇ ನನ್ನ
ದೇವರೆಂದವರು
ಆ ಮೂಲಕವೇ
ಶ್ರಮ ಸಂಸ್ಕೃತಿಯ
ದೇವತಾ ಮನುಷ್ಯರಾಗುತ್ತಾರೆ….
ಇವರು ಬರೆದ ಕಥೆ ಕವನ
ಕಾದಂಬರಿ ಒಟ್ಟಾರೆ
ಅದೇನೇ ಬರೆದರೂ
ಮಾತಾಡಿದರು
ಚಲನಚಿತ್ರ ತೋರಿದರು
ಪ್ರತಿಯೊಂದರಲ್ಲಿ
ಜನಮುಖಿ ಆಶಯದ
ಮಾನವೀಯ ಮೌಲ್ಯಗಳನ್ನು
ಬಿತ್ತುತ್ತಾರೆ
ಆ ಮೂಲಕವೇ
ದೀವ್ಯಾನುಭವದ
ಅನುಭೂತಿ ತೋರುತ್ತಾರೆ…
ಡಾ.ಬರಗೂರರು ಸದಾ
ತಮ್ಮದೇ ಆದ
ವಿಶಿಷ್ಟತೆಯಿಂದ
ಮನಸ್ಸಿಗೆ ತಟ್ಟುತ್ತಾರೆ
ಹಾಗೇನೇ ಸದಾ ಚಿಂತನೆಗೆ
ಹಚ್ಚುತ್ತಾರೆ…..
ಈ ನಮ್ಮ ಪ್ರೊ.ಬರಗೂರರು
ಕೇವಲ ಒಂದು ವ್ಯಕ್ತಿಯಲ್ಲ
ಅವರೊಂದು ಈ ನಾಡು ಕಂಡ
ಶ್ರೇಷ್ಠ ಸ್ವಾಭಿಮಾನದ ಶಕ್ತಿ ಹಾಗೂ
ಸಂಕೇತವಾಗುತ್ತಾರೆ…..
ನಮ್ಮೆಲ್ಲರೊಳಗೆ ಬಿತ್ತಿದ
ವಿಚಾರದ ಬೀಜವಾಗುತ್ತಾರೆ…
ಆ ಮೂಲಕವೇ ಅಂದಿಗೂ
ಇಂದಿಗೂ ಮುಂದೆಂದಿಗೂ
ಒಂದು ಸಾತ್ವಿಕ ಸಾಕ್ಷಿಪ್ರಜ್ಞೆಯೇ ಆಗಿ
ಈ ಜಗದ ನಮ್ಮೆಲ್ಲರಲ್ಲಿರುತ್ತಾರೆ…
ಈ ನಮ್ಮ ಪ್ರೀತಿಯ ಬರಗೂರರು
ನಮ್ಮಲ್ಲಿ ಬೆಳೆಯುತ್ತಲೇ
ಮತ್ತೆ ಮತ್ತೆ ಬಿತ್ತುತ್ತಲೇ
ಹೋಗುತ್ತಾರೆ…
—————————
ಡಾ.ಸಿದ್ಧರಾಮ ಹೊನ್ಕಲ್