ಅಂಕಣ ಸಂಗಾತಿ
ಗಜಲ್ ಗಂಧ
ವೈ ಎಂ ಯಾಕೊಳ್ಳಿ
ವಾರದ ಗಜಲ್
ಅರುಣಾ ನರೇಂದ್ರ
ಗಜಲ್
ನನ್ನ ಹೊರತು ಮಧುರ ಪ್ರೀತಿ ಎಲ್ಲೂ ಸಿಗದಿರಲಿ ಈ ಲೋಕದಲ್ಲಿ
ನನ್ನ ಹಾಗೆ ನಿನ್ನ ಪ್ರೀತಿಸುವವರು ಯಾರೂ ಇರದಿರಲಿ ಈ ಲೋಕದಲ್ಲಿ
ನನ್ನೆದೆ ಪಿಸು ಮಾತು ಕೇಳಿಸಿಕೊಳ್ಳದ ಕಿವುಡು ತರವಲ್ಲ ನಿನಗೆ
ನೀ ಕೈಯೊಡ್ಡಿ ಬೇಡಿದರೂ ಚಿಟಿಕೆ ಪ್ರೀತಿ ದಕ್ಕದಿರಲಿ ಈ ಲೋಕದಲ್ಲಿ
ನಾ ಹಂಚಿಕೊಳ್ಳಲೆಂದು ಕಾಪಿಟ್ಟುಕೊಂಡ ಭಾವಗಳಿಗೀಗಿ ಜೀವವಿಲ್ಲ
ಮನದ ದದ್೯ಗಳಿಗೆ ಮುಲಾಮು ಹಚ್ಚುವರು ಇಲ್ಲದಿರಲಿ ಈ ಲೋಕದಲ್ಲಿ
ಕನಸು ಸತ್ತು ಶವವಾಗುವ ಹೊತ್ತು ಮನಸು ನಿನ್ನ ಹಿಂದೆಯೇ ಇತ್ತು
ಒಂಟಿತನ ಕಾಡುವಾಗ ಯಾರೂ ಹಿಂತಿರುಗಿ ನೋಡದಿರಲಿ ಈ ಲೋಕದಲ್ಲಿ
ಅರುಣಾಳ ಕೊನೆ ಉಸಿರು ನಿನ್ನ ಕರೆಯುತಿತ್ತು ನೀನು ಓಗೊಡಲೇ ಇಲ್ಲ
ಬಾಳಿನುದ್ದಕೂ ನಾ ಕರೆದಂತೆ ಮತ್ತಾರೂ ನಿನ್ನ ಕರೆಯದಿರಲಿ ಈ ಲೋಕದಲ್ಲಿ
*****
ಅರುಣಾ ನರೇಂದ್ರ
ವಿಶ್ಲೇಷಣೆ
ನನ್ನ ಹೊರತು ಈ ಮಧುರ ಪ್ರೀತಿ ಎಲ್ಲೂ ಸಿಗದಿರಲಿ
ಶ್ರೀಮತಿ ಅರುಣಾ ನರೆಂದ್ರ ಅವರ ಒಂದು ಗಜಲ್ ಓದು
ಶ್ರೀಮತಿ ಅರುಣಾ ನರೇಂದ್ರ ಅವರು ನಮ್ಮನಡುವಿನ ಪ್ರಸಿದ್ದ ಗಜಲ್ ಕವಯಿತ್ರಿ. ಗಜಲ್ ಮಾತ್ರವಲ್ಲ ಮಕ್ಕಳ ಸಾಹಿತ್ಯ, ಹೈಕು, ಆಧುನಿಕ ವಚನ,ತತ್ವಪದ ಹೀಗೆ ಅನೇಕ ಪ್ರಕಾರಗಳಲ್ಲಿ ಅವರದು ಅಪರಿಮಿತ ಸಾಧನೆ.ಈಚೆಗೆ ತಂದ ತತ್ವಪದ ಸಂಕಲನ, ಹೊರಬರಬೇಕಿರುವ ಗಜಲ್ ಸಂಕಲನಗಳು ಇನ್ನೂ ಅವರ ಸಂಪದದಲ್ಲಿರುವ ಸಾಹಿತ್ಯದ ಅನೂಹ್ಯ ಶ್ರೀಮಂತಿಕೆಗೆ ನಿದರ್ಶನವಾಗಿವೆ. ನಿತ್ಯವೂ ಅವರು ಬರೆಯುವ ಗಜಲ್ ಗಳು ಅನುಪಮ.ಇಂದು ಅವರು ಬರೆದ ಗಜಲ್ ಓದಿದ ನಂತರ ಅದರ ಕುರಿತು ಬರೆಯದಿರಲು ಸಾಧ್ಯವೇ ಇಲ್ಲ ಎನಿಸಿ ನನ್ನ ಮನದ ಮಾತುಗಳನ್ನು ಹಂಚಿಕೊಳ್ಳುತ್ತಿರುವೆ.
ಪ್ರೀತಿ ಗಜಲ್ ಕಾವ್ಯದ ಆತ್ಮ. ಅದರಲ್ಲಿಯೂ ವಿರಹ ಗಜಲ್ ಕಾವ್ಯದ ಜೀವ.ತನ್ನಪ್ರೇಮ ತನ್ನದಾಗದೆ ಹೋದಾಗ
ಜೀವ ಹಿಂಡುವ ಸಾಲುಗಳೇ ಗಜಲ್ ಆಗುತ್ತವೆ ಎನ್ನುವದಕೆ ಈ ಗಜಲ್ ಸಾಕ್ಷಿಯಾಗಿದೆ.
ಅರುಣಾ ಅವರ ಗಜಲ್ ನಕಾರಾತ್ಮಕ ಭಾವದಿಂದಲೇ ಆರಂಭವಾಗಿದೆ. ತನ್ನಿಂದ ಮಾತ್ರ ನಿನಗೆ ಪ್ರೀತಿ ದೊರಕಲಿ ಅದು ಬೇರೆಲ್ಲೂ ಸಿಗದಿರಲಿ ಎಂಬ ಅನನ್ಯ ಭಾವ ನಿವೇದನೆ ಇಲ್ಲಿದೆ. ಮತ್ಲಾದಲ್ಕಿಯೆ ಗಜಲ್ ನ ಜೀವ ಬನಿಗೊಂಡಿದೆ.
ನನ್ನ ಹೊರತು ಮಧುರ ಪ್ರೀತಿ ಎಲ್ಲೂ ಸಿಗದಿರಲಿ ಈ ಲೋಕದಲ್ಲಿ
ನನ್ನ ಹಾಗೆ ನಿನ್ನ ಪ್ರೀತಿಸುವವರು ಯಾರೂ ಇರದಿರಲಿ ಈ ಲೋಕದಲ್ಲಿ
ಈ ಶೇರ್ ಅಷ್ಟೇ ಸಾಕು ಇಡೀ ಗಜಲ್ ನ ಆತ್ಮವನ್ನು ಅಮರಗೊಳಿಸುವದಕ್ಕೆ.ತನ್ನ ಪ್ರೀತಿ ತನಗೆ ಮಾತ್ರವೇ ಇರಲಿ ಎನ್ನುವ ಅತಿಶಯ ಸ್ವಾರ್ಥ ಪ್ರೀತಿಯದು.ಅದು ಸ್ವಾರ್ಥವೂ ಅಲ್ಲವೇನೋ.. ಇದು ಪ್ರೀತಿಯ ತಹತಹವೇ ಆಗಿದೆ.ತನ್ನ ಹೊರತುಪಡಿಸಿ ನಿನಗೆ ಜಗತ್ತೇ ಇರಬಾರದು ಎನ್ನುವ ಮನ ಇಲ್ಲಿನದು. ಆದರೆ ನಿಜವಾದ ಕಷ್ಟದ ಮಾತೆಂದರೆ ಮನದ ಮಾತುಗಳನ್ನು ಕೇಳಿಸಿಕೊಳ್ಳಬೇಕಾದ ಅವನು ಏಕೊ ಅಲಕ್ಷಿಸುವ ಸಂಶಯ ಬಂದಿದೆ .ಅದಕ್ಕೆ ಕವಿ ಜೀವ
ನನ್ನೆದೆ ಪಿಸು ಮಾತು ಕೇಳಿಸಿಕೊಳ್ಳದ ಕಿವುಡು ತರವಲ್ಲ ನಿನಗೆ
ನೀ ಕೈಯೊಡ್ಡಿ ಬೇಡಿದರೂ ಚಿಟಿಕೆ ಪ್ರೀತಿ ದಕ್ಕದಿರಲಿ ಈ ಲೋಕದಲ್ಲಿ
ಎಂದು ತುಸು ಕೋಪದಲ್ಲಿಯೆ ಆರೋಪಿಸುತ್ತದೆ.ಆ ಆರೊಪ ಸರಿಯಾದದ್ದೂ ಆಗಿದೆ. ಯಾವ ಮನ ತಾನೆ ತನ್ನ ಪ್ರೇಮ ತನ್ನನ್ನು ನಿರ್ಲಕ್ಷಿಸುವುದನ್ನು ಸಹಿಸಲಾರದು.ಮುಂದಿನ ಶೇರ್ ಗಳಲ್ಲಿಯೂ ಈ ಭಾವ ಹರಳುಗಟ್ಟುತ್ತಾ ಹೋಗುತ್ತದೆ. ಅವನಿಲ್ಲದೆ ಆ ಜೀವವೂ ಸತ್ತು ಹೋದಂತಿದೆ.ಅದನ್ನು ಮುಂದಿನ ಶೆರ್ ಗಳು ಸಶಕ್ತವಾಗಿ ಮಂಡಿಸುತ್ತವೆ.ಅವಳು ಹೇಳಬೇಕೆಂದು ಕೊಂಡಿದ್ದ ಸಾಲುಗಳು ಜೀವ ಕಳೆದುಕೊಂಡಿವೆ ಎನ್ನು ವ ಗಜಲ್ ಗೋ
ನಾ ಹಂಚಿಕೊಳ್ಳಲೆಂದು ಕಾಪಿಟ್ಟುಕೊಂಡ ಭಾವಗಳಿಗೀಗಿ ಜೀವವಿಲ್ಲ
ಮನದ ದದ್೯ಗಳಿಗೆ ಮುಲಾಮು ಹಚ್ಚುವರು ಇಲ್ಲದಿರಲಿ ಈ ಲೋಕದಲ್ಲಿ
ತನ್ನ ಮನದ ನೋವನ್ನೂ ಯಾರೂ ಕಡಿಮೆ ಮಾಡದಿರಲಿ ಎಂದು ಶಪಿಸಿಕೊಳ್ಳುತ್ತದೆ. ಇದು ತನ್ನನ್ನೇ ತಾನು ಹಿಂಸಿಸಿಕೊಳ್ಳುವ ಪರಿ. ಅನಿವಾರ್ಯ.ನೋವು ಅಗಾಧವಾದಾಗ ಇಂಥ ಭಾವ ಒಮ್ಮೊಮ್ಮೆ ಮನದಲ್ಲಿ ಕಾಡತೊಡಗುತ್ತದೆ. ಅವನು ಕನಸುಗಳಿಗೆ ಜೀವಕೊಡಲೇ ಇಲ್ಲ ಎಲ್ಲವೂ ಸತ್ತು ಶವವಾದ ದುರ್ಭರ ಘಳಿಗೆ ಅದು ಎನ್ನುವ ಸಾಲುಗಳು ಹೃದಯ ವೇಧಕವಾಗಿವೆ.
ತನಗೆ ಯಾರೂ ಸಾಂತ್ವನವನ್ನು ನೀಡುವದೂ ಬೇಡವಾಗಿದೆ.ಅಗಲಿಕೆ ಎಂಬ ದುಃಖಕ್ಕಿಂತ ಹಚ್ಚಿನ ದುಃಖ ಏನಿದೆ ಈ ಜಗದಲ್ಲಿ. ಅಷ್ಟೇನೋವು ಸಾಕಲ್ಲವೇ. ಅಕ್ಕ ಒಂದೆಡೆ “ಒಲಿದವರ ಕೊಲುವಡೆ ಮಸೆವ ಕೂರಲಗೇಕೆ? ಒಲ್ಲೆನೆಂಬುದೆ ಸಾಕು ” ಎಂದಿದ್ದಾಳೆ. ಅಂತಹ ಬಾವ ತೀವ್ರತೆ ಇಲ್ಲಿನದು.
ಕನಸು ಸತ್ತು ಶವವಾಗುವ ಹೊತ್ತು ಮನಸು ನಿನ್ನ ಹಿಂದೆಯೇ ಇತ್ತು
ಒಂಟಿತನ ಕಾಡುವಾಗ ಯಾರೂ ಹಿಂತಿರುಗಿ ನೋಡದಿರಲಿ ಈ ಲೋಕದಲ್ಲಿ
ನಿನ್ನ ಒಂಟಿತನಕೆ ಯಾರೂ ಜೊತೆಯಾಗದಿರಲಿ ಎನ್ನುವ ತೀವ್ರ ವಿಷಾದದಲ್ಲಿ ಗಜಲ್ ಮುಂದುವರಿಯುತ್ತದೆ. ಮುಕ್ತಾಯವಂತೂ ಅನುಪಮ.ಯಾರೂ ಹಿಂತಿರುಗಿ ನೋಡದಂತೆ, ನೋವಿಗೆ ಜೊತೆ ನೀಡದಂತೆ ಮಾಡು ಎಂದು ಬೇಡಿಕೊಳ್ಳುವ ಇದು ದುಃಖಾತಿಶಯವೇ ಸರಿ.
ಅರುಣಾಳ ಕೊನೆ ಉಸಿರು ನಿನ್ನ ಕರೆಯುತಿತ್ತು ನೀನು ಓಗೊಡಲೇ ಇಲ್ಲ
ಬಾಳಿನುದ್ದಕೂ ನಾ ಕರೆದಂತೆ ಮತ್ತಾರೂ ನಿನ್ನ ಕರೆಯದಿರಲಿ ಈ ಲೋಕದಲ್ಲಿ
ಬಾಳಿನುದ್ದ ಜೊತೆಯಾಗಬಹುದೆಂದಿದ್ದ ಬಂಧವೊಂದು ದೂರವಾದಾಗ ಉಂಟಾಗುವ ದುಃಖವನ್ನು ವ್ಯಕ್ತಮಾಡುವ ಈ ಪರಿಗೆ ಶರಣೆನ್ನಬೇಕಷ್ಟೇ.ಗಜಲ್ ನ ತೀವ್ರ ವ್ಯಾಮೋಹಿಯಾಗಿರುವ ಈ ಕವಯಿತ್ರಿ ಅನೇಕ ಸಲ ಇವರು ಮಾತ್ರ ಬರೆಯಬಲ್ಲರು ಎನ್ನುವಂಥ ವಿರಹಸ ವಿಷಾದದ ಗಜಲ್ ಬರೆಯುತ್ತಾರೆ.ಓದುಗರ ಮನಸು ಕಾಡಿ ರೂಪಕ ನುಡಿಗಟ್ಟು ಕಟ್ಟುವ ವಿಶಿಷ್ಟ ಶೈಲಿಗೆ ನಾವು ಮನ ಸೋಲಲೇಬೇಕು. ಮನವ ಹಿಂಡುವ ಇಂಥ ಸಾಲು ಮಾತ್ರ ಉತ್ತಮ ಗಜಲ್ ಗೆ ನಿದರ್ಶನ ವಾಗಿ ನಿಲ್ಲಬಲ್ಲವು. ನಾನೊಬ್ಬ ಗಜಲ್ ಪ್ರೇಮಿಯಾಗಿ ಇಲ್ಲಿನ ಪ್ರತಿ ಶೇರ್ ಅನುಭವಿಸಿದ್ದೇನೆ. ಅತ್ಮಕ್ಕೆ ಆಘಾತವಾದಾಗ ಮಾತ್ರ ಇಂಥ ಗಜಲ್ ಬರಬಲ್ಲದು ಎಂದು ಮಾತ್ರ ಹೇಳಬಲ್ಲೆ.
ಹಿರುಯರಾದ ಹೈತೊ ಸರ್ ಬರೆದಂತೆ ಓದುತ್ತಾ ಭಾವ ಪರವಶನಾದ ಪರಿ ನನ್ನದು .ಅವರ ಮಾತು ಉಲ್ಲೇಖಿಸದೇ ಇರಲಾರೆ.
“ಎಂಥಹ ಉತ್ಕೃಷ್ಠ ಪ್ರೀತಿಯ ಪರಾಕಾಷ್ಠೆಯನ್ನು ಪ್ರಕಟಿಸಿದಿರಿ ಮೇಡಂ. ಇದು ಬದುಕನ್ನು ಪ್ರೀತಿಸುವ ಭಾಷೆಯ ಚೆಲುವು ಭಾವದ ಗೆಲುವಿನ ಗಜಲ್
ಶಬ್ದಗಳನ್ನು ಸೋಲಿಸಿ ಭಾವವನ್ನು ಗೆಲ್ಲಿಸಿದ ಪರಿ ಆಪ್ತ ಅನಿಸುತ್ತೆ. ಇದು “ಪ್ರಳಯದ ನಡುವಿನ ವಸಂತ” ಈಗಾಗಲೇ ಗಜಲ್ ನೀಡಿದ ಸೊಬಗುˌ ಜೀವನ ದರ್ಶನ ಇನ್ನಿಲ್ಲದಂತೆ ಕಾಡಿತು.
ಗತಿ ವಿಗತಿಗಳ ತುಲನೆ… ಸಂಘರ್ಷಾತ್ಮಕ ಸಂಬಂಧಗಳ ಹಾದಿಯಲ್ಲಿ ನಡೆಯುತ್ತಾ ನಂಜಾದ ಉಸಿರುಗಳ ಎದೆನೆಲ ಬರಡಾಗದಂತೆ ಕಾಪಿಟ್ಟುಕೊಳ್ಳುವ ಭಾವ ತೀವ್ರತೆ ಯಿಂದ ಕಟ್ಟಿದ ಸೇತುಬಂಧ…. ಹತ್ತಿಕ್ಕಲ್ಪಟ್ಟ ಧ್ವನಿಗಳಿಗೆ ಧ್ವನಿಕೊಟ್ಟ ಈ ಗಜಲ್ ನೇಯ್ದಪರಿ ಗಜಲ್ಕಾರ್ತಿಯ ಎದೆಗಡಲು ಅದೆಷ್ಟು ನೋವು ಹೊತ್ತಿರಬೇಕು (ಹೈ.ತೋ)”
ಶರಣಾರ್ಥಿ ಮೆಡಮ್ ನಿಮ್ಮಅನುಪಮ ರಚನೆಗೆ.
ಡಾ.ವೈ.ಎಂ.ಯಾಕೊಳ್ಳಿ