ಕಾವ್ಯ ಸಂಗಾತಿ
ರೇಷ್ಮಾ ಕಂದಕೂರ
ಬರಿದೆ ಕಾನನ
ಬರಿದೆ ಕಾನನ ಬದುಕು
ತೀರದ ದಾಹದೊಳು
ಬಂದು ಹೋಗುವ ದಾರಿಯಲಿ
ಕುಂದೆಂದು ಜರಿಯದಿರು.
ಸಂಧಿಸುವ ಹಲವರಲಿ
ಕೆಲವರು ನಿನ್ನವರು
ಕಾಲದ ಮಹಿಮೆ ಇದು
ಕೃತಕ ಬಾಳಿದು ನೆನಪಿರಲಿ.
ಬೆಂದು ಹೋಗುವುದು ಸಹಜ
ನೊಂದು ನುಡಿಯದಿರು
ಬಾಂಧವ್ಯದ ಬೆಸುಗೆ
ಸ್ವಾರ್ಥಕೆ ಕಳಚುವುದು ತಿಳಿದಿರಲಿ
ನೆರೆ ತೊರೆ ಆಗಾಗ
ಬೀಗದೆ ಬಾಗಿಬಿಡು
ತೇಗದಂತೆ ಹೊರಳಿ
ಅವೇಗಕೆ ಕಡಿವಾಣ ಹಾಕುತ.
ಕಾರ್ಯಶೀಲದಿ ಮುನ್ನಡೆಯುತ
ಇರುವುದರಲಿ ತೃಪ್ತಿ ಹೊಂದುತ
ಬಾರದಕ್ಕೆ ಚಿಂತಿಸಿ ಫಲವಿಲ್ಲ
ಬಂದುದ ಅನುಭವಿಸಿ ನಡೆ ಸುಖವೆಲ್ಲ.
ರೇಷ್ಮಾ ಕಂದಕೂರ