ಲೀಲಾಕುಮಾರಿ ತೊಡಿಕಾನ ಅವರ ಕವಿತೆ-ʼಎಲ್ಲೆ ಮೀರಿದವರುʼ

ಹಗೆಯೊಳು ಬಿಗಿಗೊಂಡ ಜಗದ ಹೊಗೆಯೋಡಿಸಿ
ಬಗೆಬಗೆಯಲಿ ಮೊಗೆಮೊಗೆದು ನಗೆತುಂಬಿ
ಖುಷಿ ಬುಗ್ಗೆ ಚಿಮ್ಮಿಸಿ, ಹೃದಯ ಸುಮವರಳಿಸಿ
ಬಿಸಿಲ ಬೇಗೆಗೆ ನೆರಳಾದ ಹೆಮ್ಮರ!

ಜಾತಿ- ಧರ್ಮದ ಎಲ್ಲೆ ಮೀರಿ ಅಡ್ಡಗೋಡೆಗಳ ಹಾರಿ
ಪರಿಧಿಯೊಳಗಿನ ಸಂಬಂಧಗಳ ಶರಧಿಯಾಚೆಗೆ ಚಾಚಿ
ದ್ವೇಷ ರುಜಿನಕ್ಕೆ ಪ್ರೀತಿ ಔಷಧಿ ಹಚ್ಚಿ
ತಮ‌ ತುಂಬಿದ ಹೃದಯಗಳ ಬೆಳಗಿದ ನೇಸರ!

ಕಪ್ಪುಚುಕ್ಕಿಯೂ ಬಳಿಸುಳಿಯದ ಶ್ವೇತಪುಟದ ಬದುಕು
ಅರಿವಿನ ಭಾರಕ್ಕೆ ಬಾಗಿ ಬಾಗಿ
ಬೀಗುವವರಿಗೆ ಪಾಠವಾಗಿ ಮಾನವತೆಯ ಉಸಿರಾಡಿ
ಹಬ್ಬುವ ಬಳ್ಳಿಗಳಿಗೆ ಆಸರೆಯ ಹಂದರ!

ಕಹಿಬೇವಿನ ರಸ ಕುಡಿದೂ ಮನಸು ಕಹಿಯಾಗಿಸದೆ
ಒಲವಾ ಬುತ್ತಿಯ ಸಿಹಿ ಉಣಿಸಿದ ಕಾಯಕಯೋಗಿ ತ್ರಿವಿಧ ದಾಸೋಹಿ
ಜ್ಞಾನ ದೀವಿಗೆ ಬೆಳಗಿ, ಅಕ್ಷರ ಮಾಲೆಗಳ ತೊಡಿ ತೊಡಿಸಿ
ಮಕ್ಕಳ ಸಿಂಗರಿಸಿದ ಕಲೆಗಾರ!

ಸದ್ದು ಮಾಡುವ ಚಿಲ್ಲರೆಗಳ ಮಧ್ಯದಲ್ಲಿ
ಬೆಲೆಬಾಳುವ ನೋಟಿನಂತಿದ್ದು, ನೆಲೆಬೆಲೆ ಉಳಿಸಿ
ಹೆಗ್ಗುರುತು ಮೂಡಿಸಿದ ನಡೆದಾಡುವ ದೇವರು
ಬೆಳದಿಂಗಳ ನಗುವಲ್ಲಿ ಕಾಣ್ಬ ಬಾಂದಳದ ಚಂದಿರ!

ಹೃದಯಗಳ ಮೀಟುತ್ತಲೇ ಭೂಸೀಮೆಯ ದಾಟಿ
ಪರಲೋಕ ಸೇವೆಗೆಂಬಂತೆ ಸದ್ದಿಲ್ಲದೆ
ಎದ್ದು ತೆರಳಿ ಸುದ್ದಿಯಾದವರು ಶಿವಕುಮಾರರು
ಸದ್ಗುಣಗಳ ಆಗರ; ನೆನಪೊಂದೇ ಅಮರ!


2 thoughts on “ಲೀಲಾಕುಮಾರಿ ತೊಡಿಕಾನ ಅವರ ಕವಿತೆ-ʼಎಲ್ಲೆ ಮೀರಿದವರುʼ

  1. ಎಷ್ಟು ಸೊಗಸಾಗಿ ಪದಗಳನ್ನು ಕುಣಿಸಿದ್ದೀರಿ ಲೀಲಾ ಅವರೇ, ವಾಹ್!

Leave a Reply

Back To Top