ಕಾವ್ಯ ಸಂಗಾತಿ
ಬೆಳಕು-ಪ್ರಿಯ
ವಾಕಿಂಗ್ ಪದ್ಯಗಳು
01
ಬೇಲಿ ಸಾಲಿನ ನೀಲಿ ಹೂವು
ಕರಿಜಾಲಿಯ ಮೊನಚು ಮುಳ್ಳು
ಅತ್ಯಾಪ್ತರೆ ಮುಂಚಿನಿಂದ
ತಂಪೀಯುವ ಗಾಳಿಯದೇ
ಇಲ್ಲಿ….
ದೂರಗೊಳಿಸುವ ಹುನ್ನಾರ
02
ಬೆಳಗಿನುರುಳಿಗೆ ಕೊರಳೊಡ್ದುವ
ಇರುಳ ಕವಳದ ಬೆರಗಿಗೆ
ಮರುಳಾಗಿ ಬೆರಳ ಬೆಸೆದ
ಪಾರಿಜಾತ,
ಮುಂಜಾನೆಗೆ ಮಣ್ಣ ತಬ್ಬಿತ್ತು
03
ಯಾರದೋ ಪಾದದಡಿ
ದುಡಿಯುತ್ತಲೇ ಮಡಿದ
ಕಪ್ಪು ಇರುವೆಯೊಂದರ
ಹೆಣವೊಂದು,
ರಸ್ತೆಯಲ್ಲಿ ಅನಾಥವಾಗಿತ್ತು
04
ಕೇರಿಯುದ್ದಕ್ಕೂ ಕರಗಳಗಲಿಸಿದ
ಕಾಂಕ್ರಿಟು ರಸ್ತೆ ದವಡೆಯಲಿ
ಬಡಪಾಯಿ ಬೋರ್ಡೊಂದು
‘ಕಾಡು ಬೆಳೆಸಿ-ನಾಡು ಉಳಿಸಿ’
ಅಕ್ಷರಗಳನೊತ್ತು ತಿಣುಕಾಡುತಿತ್ತು
05
ನೈರುತ್ಯ,ಆಗ್ನೇಯ ಎನ್ನುತ್ತಾ
ಮೂಲೆ ತಡುಕುತಿದ್ದವನ
ಮಹಲಿನೆದುರು
ಬಯಲಿನಲಿ ಒಲೆಯೂಡಿದ
ಬಡವನೊಬ್ಬ ಜೋಪಡಿಯಲಿ
ಸುಖ ನಿದ್ದೆಯಿಂದೆದ್ದ
ಬೆಳಕು-ಹೊಸದುರ್ಗ
ji