ಕಾವ್ಯ ಸಂಗಾತಿ
ಸಿದ್ದಲಿಂಗಪ್ಪ ಬೀಳಗಿ
ತನಗಗಳು
೧
ಕಾಡುತಿದೆ ಮನವ
ಏಕಾಂತದ ವಿರಹ
ಕೆಂಡವಾಗಿದೆ ದೇಹ
ನೀನಿರದೇ ಸನಿಹ
೨
ಅಂಡ ಪಿಂಡವಾಗಲು
ಒಂದು ಬೀಜವು ಸಾಕು
ಹೆಣ್ಣು ಗಂಡೆಂಬ ಭೇದ
ಮನದಿಂದ ಬೀಸಾಕು
೩
ನೀನಿರದ ಮನೆಯು
ಚುಕ್ಕೆ ಇರದ ಬಾನು
ನಾನಾಗುವೆ ನೀರಿಂದ
ಹೊರತೆಗೆದ ಮೀನು
೪
ಗೊರಕೆಯ ಸದ್ದಿಗೆ
ದೂರ ಓಡಿತು ನಿದ್ದೆ
ಬೆಳಕು ಮೂಡಲದು
ಕಣ್ಣು ತಿಕ್ಕುತ ಎದ್ದೆ
೫
ಬೆಚ್ಚನೆಯ ಸ್ಪರ್ಶವು
ಎಷ್ಟೊಂದು ಹಿತಕರ
ಮುದುಡಿದ ಮನಕೂ
ಅರಳುವ ಕಾತರ
೬
ವಿವರಿಸಲಾಗದು
ವಿರಹದ ಗಳಿಗೆ
ನುಂಗಿದಂತೆ ಒಮ್ಮೆಲೆ
ನೂರು ಕಹಿ ಗುಳಿಗೆ
ಸಿದ್ದಲಿಂಗಪ್ಪ ಬೀಳಗಿ.ಹುನಗುಂದ