ಅಂಕಣ ಬರಹ
ವಿಜ್ಞಾನ ವೈವಿಧ್ಯ
ಶಿವಾನಂದ ಕಲ್ಯಾಣಿ
ಸಂತಾನೋತ್ಪತ್ತಿ ನಡವಳಿಕೆಯ ಸಿಗ್ನಲ್ ಗಳು
ಪ್ರಾಣಿ ಸಂಕುಲದ ಪ್ರಭೇದವೊಂದರ ಉಳಿವು ಅದರ ಸಂತಾನೋತ್ಪತ್ತಿಯ ನಡವಳಿಕೆಯನ್ನು ಅವಲಂಬಿಸಿದೆ. ಇದಕ್ಕಾಗಿ ಕಣ್ಸನ್ನೆ ಬಾಯ್ಸನ್ನೆಗಳಿಂದ ಮನುಷ್ಯ ತಾನು ಲೈಂಗಿಕ ಸಂಪರ್ಕವೇರ್ಪಡಿಸಿಕೊಳ್ಳುವಂತೆ ಇತರೆ ಪ್ರಾಣಿಗಳು ಸಹಿತ ಲೈಂಗಿಕ ಆಕರ್ಷಣೆ ಬಳಸಿ ಪ್ರಣಯ ಪ್ರದರ್ಶನಕ್ಕಿಳಿಯುತ್ತವೆ.
ಬಹುತೇಕ ಪ್ರಾಣಿಗಳು ತಮ್ಮ ಪ್ರಣಯ ಪ್ರದರ್ಶನವನ್ನು ದೃಷ್ಟಿ ಗೋಚರ ಇಲ್ಲವೇ ಶ್ರವಣ ಮಾಧ್ಯಮದಲ್ಲಿ ಉಂಟುಮಾಡುತ್ತವೆ.
ಪ್ರಣಯಕ್ಕೆ ಸಿದ್ಧವಾದ ಗಂಡು ನವಿಲು ವರ್ಣರಂಜಿತ ತನ್ನ ಗರಿಗಳನ್ನು ಬೆನ್ನ ಮೇಲೆ ಹರಡಿಕೊಂಡು ಹೆಣ್ಣು ಇರುವೆಡೆಗೆ ಕುಣಿಯುತ್ತ ಬರುತ್ತದೆ.
ಓತಿಕಾಟದಂತಹ ಸರೀಸೃಪಗಳು ತಮ್ಮ ದೇಹದ ಬಣ್ಣವನ್ನು ರಂಗುರಂಗಾಗಿ ಬದಲಿಸಿ, ಗಂಡುಗಳನ್ನು ಆಕರ್ಷಿಸುತ್ತವೆ. ಆಸ್ಟ್ರೇಲಿಯಾದ ಕುಂಜ ಪಕ್ಷಿ ಬೋವರ್ ತನ್ನ ಪ್ರೇಮವನ್ನು ತೋಡಿಕೊಳ್ಳುವ ಪರಿ ಅತಿ ಸ್ವಾರಸ್ಯಕರ.
ಗಂಡು ಕುಂಜವು ಕಸ ಕಡ್ಡಿಗಳಿಂದ ಸುಂದರ ವಿನ್ಯಾಸದಲ್ಲಿ ಪ್ರೇಮ ತೋರಿಸುವ ಸ್ವಾಗತ ಮಂಟಪವೊಂದನ್ನು
ಹೆಣೆದು, ಕಟ್ಟಿ ಸಿದ್ಧಪಡಿಸುತ್ತದೆ.ಇದರಿಂದ ಹೆಣ್ಣು ಕುಂಜ ಆಕರ್ಷಣೆಗೆ ಒಳಪಡುತ್ತದೆ. ಇಂಥ ಪ್ರೇಮ ಲಗ್ನದ ಮಂಟಪಕ್ಕಾಗಿ ಅದು ಒಂದು ಮೀಟರ್ ವ್ಯಾಸದ ಸೂಕ್ತ ಸ್ಥಳವನ್ನು ಆರಿಸಿ ಚೊಕ್ಕಟ ಗೊಳಿಸುತ್ತದೆ. ನಂತರ ದಾರಿಯಲ್ಲಿ ಸಿಗುವ ಕಸ- ಕಡ್ಡಿ ದಾರ – ಬಳ್ಳಿಗಳನ್ನಾಯ್ದು ಮರದ ನಾರಿನಿಂದ ಚಿಕ್ಕ ಕೊಂಬೆಗಳನ್ನು ಸೇರಿಸಿ ಬಿಗಿಯುತ್ತದೆ. ಹುಳುಗಳು, ಬೆಳ್ಳನೆಯ ಎಲುಬುಗಳು, ಬಣ್ಣ ಬಣ್ಣದ ಸಣ್ಣ ಕಲ್ಲುಗಳು, ಚಿಪ್ಪುಗಳು,ಹಣ್ಣುಗಳು….., ಇವುಗಳಿಂದ ಮಂಟಪದ ಸುತ್ತಲಿನ ಭಾಗವನ್ನು ಅಲಂಕಾರಗೊಳಿಸುತ್ತದೆ. ಪ್ರಥಮ ರಾತ್ರಿಗೆ ಪರಿಕರಗಳನ್ನು ಸಿದ್ಧಗೊಳಿಸುವಂತೆ,ಸಂಭ್ರಮದ ಈ ಎಲ್ಲಾ ವ್ಯವಸ್ಥೆಗಳು ಕಂಡು ಬಂದ ಮೇಲೆ ಹೆಣ್ಣು ಕುಂಜ ಲತಾ ಮಂಟಪದ ಕಡೆಗೆ ವಾರೆ ನೋಟ ಬೀರುತ್ತದೆ. ಪಕ್ಷಿ ನೋಟದ ಸೂಕ್ಷ್ಮ ತನಿಕೆಯಿಂದ ತೃಪ್ತ ವ್ಯವಸ್ಥೆಯನ್ನು ಖಚಿತ ಪಡಿಸಿಕೊಂಡು ಗಂಡು ಹಕ್ಕಿಯನ್ನು ಕೂಡುತ್ತದೆ.
ಡ್ರಾಸೋಫಿಲಾದಂತಹ ಹೆಣ್ಣು ಸೊಳ್ಳೆಗಳು ಹಾರಾಡುವಾಗ ಉಂಟಾಗುವ ವಿಶೇಷ ಧ್ವನಿಯು ಗಂಡು ಸೊಳ್ಳೆಯನ್ನು ಆಕರ್ಷಿಸುತ್ತದೆ.
ಹೆಣ್ಣು ಕಪ್ಪೆಯನ್ನು ಆಕರ್ಷಿಸಲು ಗಂಡು ಮಂಡೂಕ ವಟಗುಟ್ಟುವುದರ ಗುಟ್ಟೆ ಲೈಂಗಿಕತೆ.
ಬೆಕ್ಕು ಮತ್ತು ನಾಯಿಯಂತಹ ಕೆಲ ಪ್ರಾಣಿಗಳು ನಿರ್ದಿಷ್ಟ ಸ್ಥಳದಲ್ಲಿ ಮೂತ್ರ ಮಾಡಿ ತಮ್ಮ ಇಚ್ಛಾ ಶಕ್ತಿಯನ್ನು ವ್ಯಕ್ತಪಡಿಸುತ್ತವೆ.ಗಂಡುಗಳು ಅದನ್ನು ಮೋಹಿಸಿ ಆಸೆಯನ್ನ ಅರಿತುಕೊಂಡು ಹೆಣ್ಣಿನ ಕೂಟಕ್ಕೆ ಅರಸಿ ಹೋಗುತ್ತವೆ. ಕಸ್ತೂರಿ ಮೃಗದಂತಹ ಪ್ರಾಣಿಗಳು ಒಂದು ಬಗೆಯ ಹಾರ್ಮೋನನ್ನು ಹೊರಸ್ರವಿಸುವುದರ ಮೂಲಕವೂ ಪಕ್ಷಿಗಳು ವಸಂತ ಕಾಲದಲ್ಲಿ ಕೂಗಿ ಕೊಳ್ಳುವುದರ ಮೂಲಕವೂ………ಪ್ರಣಯದಾಟಕ್ಕೆ ಸಿದ್ಧಗೊಳ್ಳುತ್ತವೆ. ಪ್ರಕೃತಿಯ ಈ ವ್ಯವಸ್ಥೆಗಳು ಜೀವ ಸಂಕುಲದ ಲೈಂಗಿಕ ಆಸೆಯನ್ನು ಪೂರೈಸುವಲ್ಲಿ, ಪ್ರಭೇದದ ಸಂತಾನವನ್ನು ಮುಂದುವರಿಸುವಲ್ಲಿ ವಹಿಸಿದ ಪಾತ್ರ ನಿಜವಾಗಿಯೂ ಅಚ್ಚರಿ ಮೂಡಿಸುವಂತಹದು.
ಶಿವಾನಂದ ಕಲ್ಯಾಣಿ
Informative article