ಕಾವ್ಯ ಪ್ರಸಾದ್ ಅವರ ಕವಿತೆ-ಶೃಂಗಾರ ಕಾವ್ಯದ ಅಪ್ಪಟ ಬಂಗಾರ

ಶೃಂಗಾರ ಕಾವ್ಯದ ಅಪ್ಪಟ ಬಂಗಾರವಾದೆ ನೀನು
ಆ ಶೃಂಗಾರವನ್ನು ಆರಾಧಿಸುವ ರಸಿಕ ನಾನು!
ನಿನ್ನ ಪ್ರೀತಿ ಸ್ನೇಹ ನನಗೆ ಶೃಂಗಾರಕ್ಕಿಂತ ಮಿಗಿಲು
ನನ್ನ ಜೀವನವೇ ನಿನಗಾಗಿ ಮೂಡಿಪಾಗಿಟ್ಟಿರಲು!!

ನಿನ್ನ ನಗು ಪೌರ್ಣಮಿಯ ಚಂದಿರನನ್ನು ನಾಚಿಸುವಂತಿದೆ
ಅರಳಿದ ಕಮಲದಂತೆ ನಿನ್ನ  ನಯನಗಳು ಕಾಣುತಿದೆ!
ನಿನ್ನ ಮುದ್ದಾದ ಮೊಗವು ನನ್ನನ್ನು ಆಕರ್ಷಿಸುತ್ತದೆ
ಆ ಕಾಡಿಗೆಯ ಕಂಗಳು ನಕ್ಷತ್ರ ತಾರೆಯ ಹೊಳಪಿನಂತಿದೆ

ನಾಸಿಕದ ನತ್ತು ಮಿಂಚಂತೆ ಪ್ರಕಾಶವಾಗಿ ಕಾಣುತಿದೆ
ಮೃದುವಾದ ಕೆನ್ನೆಯ ಗಲ್ಲವು ನಾಚಿ ನೀರಾಗಿದೆ!
ನೀನಿಟ್ಟ ಸಿಂಧೂರ ರಾತ್ರಿಯ ಚಂದಿರನ ಕರೆಯುತಿದೆ
ನಿನ್ನ ಅಂದವನ್ನು ಕಂಡು ಪ್ರಕೃತಿಯು ಬೆರಗಾಗಿ ನಿಂತಿದೆ!!

ನಿನ್ನ ಕಾಲು ಗೆಜ್ಜೆಯ ನಾದದಲ್ಲಿ ಸಾಂಗತ್ಯದ ಮೆರುಗು
ಮಾತಿಲ್ಲದ ಮೌನದ ಭಾಷೆಯ ಸಾಹಿತ್ಯದ ಬೆಡಗು!
ನೀನುಟ್ಟ ಸೀರೆ ಸಂಸ್ಕೃತಿಯ ಸಂಸ್ಕಾರದ ಬೆಳಗು
ಅಂದದ ಸಿಂಗಾರಕ್ಕೆ ಇವಳು ಸ್ಪೂರ್ತಿಯ ಸೊಬಗು!!

———————————

Leave a Reply

Back To Top