ಕಾವ್ಯ ಸಂಗಾತಿ
ಗಜಲ್ ಜುಗಲ್ ಬಂದಿ
ವೈ.ಎಂ.ಯಾಕೊಳ್ಳಿ/ಅರುಣಾ ನರೇಂದ್ರ
ಕಾಯುವದಕೇನೂ ಬೇಜಾರಿಲ್ಲ ನೀ ಬರುವಿಯಾದರೆ
ಬೇಯುವದಕೇನೂ ಆತಂಕವಿಲ್ಲ ನೀ ಇರುವಿಯಾದರೆ
ಜಗವು ಸುಡುವ ಅಗ್ಗಿಷ್ಟಿಕೆಯಾಗಿದೆ ನನಗು ನಿನಗೂ ಗೊತ್ತು
ನಿನ್ನೊಂದು ಸಾಂತ್ವನದ ಹಸ್ತ ಸಾಕು ನೀ ನೀಡುವಿಯಾದರೆ
ಅವರವರದೇ ಅವಸರದಲಿ ಮುಳುಗಿರುವ ಲೋಕ ಸಹನೆ ಇರದು
ಮತ್ತೇನು ಬೇಕು ನನ್ನನಿನ್ನ ಇರುವಿಕೆಯಷ್ಟೇ ಸಾಕು ನೀ ಕೊಡುವಿಯಾದರೆ
ಉರಿವ ಅಲೆಗಳ ಬೀಸಿ ಕೊಲ್ಲಲೆಳಸುವವರು ಸುತ್ತ ತುಂಬಿಹರು
ತಣ್ಣನೆಯ ಸಾಗರ ಹರಿಸಲು ವಾರಿಧಿ ತಯಾರು ನೀ ಬರುವುದಾದರೆ
ಜೋಗಿ ಮತ್ತೇನು ಬೇಡನವ ಸದಾ ಪ್ರೇಮದ ಭಿಕ್ಷುಕ ಜೋಳಿಗೆಗೆ ಬೊಗಸೆ ಒಲವು
ಸದಾ ಹರಿದು ಬರುವ ನಿನ್ನ ಪ್ರೀತಿಯೆ ಸಾಕು ಸದಾ ನೀ ಹರಿಯುವಿಯಾದರೆ
ವೈ.ಎಂ.ಯಾಕೊಳ್ಳಿ
ಈ ರಾತ್ರಿ ವಿಶೇಷವಾಗಿದೆ ನೀ ಬರುವುದಾದರೆ
ಈ ದೇಹ ಬಳ್ಳಿಯಾಗಿದೆ ನೀ ಅಪ್ಪುವುದಾದರೆ
ಆಗಸದ ತುಂಬಾ ಉಕ್ಕುವ ಹಾಲ ಬೆಳದಿಂಗಳು
ಬಯಕೆ ಬಾಯಾರಿದೆ ನೀ ಪ್ರೀತಿ ಎರೆಯುವೆಯಾದರೆ
ಭದ್ರ ಬಾಹುವಿನಲ್ಲಿ ನನ್ನ ಬಚ್ಚಿಟ್ಟುಕೊಂಡು ಬಿಡು
ಈ ತನು ಕೆಂಡವಾಗಿದೆ ನೀ ತಣಿಸುವುದಾದರೆ
ಕೋಮಲ ಮೈ ಬಳುಕಾಡಿದೆ ನಿನ್ನ ಮೃದು ಸ್ಪರ್ಶಕೆ
ಕರಗಿ ಹೋಗುವೆ ಮೈಗೆ ಮೈ ಹೆಣೆಯುವುದಾದರೆ
ಕಣ್ಣ ದೀಪವ ಮಾಡಿ ಕಾದಿರುವಳು ಅರುಣಾ ನಿನಗಾಗಿ
ಜಗದ ಹಂಗು ತೊರೆವೆ ನೀ ತಲೆ ನೇವರಿಸುವುದಾದರೆ
ಅರುಣಾ ನರೇಂದ್ರ