ಕಾವ್ಯ ಸಂಗಾತಿ
ಮಧು ವಸ್ತ್ರದ
ಗಜಲ್-
ಆಗಸದ ಆದಿತ್ಯ ಪಥ ಬದಲಿಸಿದ ಘಳಿಗೆಯಲಿ ಶುಭ ಹಾರೈಸಿದೆ ಈ ಸಂಕ್ರಾಂತಿ
ಆಗಾಮಿ ದಿನಗಳ ಸುಗ್ಗಿ ಸಂತಸ ಸಂಭ್ರಮಗಳ ನೂರ್ಮಡಿಸಿದೆ ಈ ಸಂಕ್ರಾಂತಿ
ಮೇಘಗಳಿಂದಾಚೆ ಬಂದ ನೇಸರ ಇಳೆಗೆ ಎಳೆ ಬಿಸಿಲಿನ ಹೊದಿಕೆ ಹೊದಿಸಿಹನು
ಮಾಘದ ಚಳಿಗೆ ನಲುಗಿದ ಭೂರಮೆಯನು ಹಿತವಾಗಿ ಸ್ಪರ್ಶಿಸಿದೆ ಈ ಸಂಕ್ರಾಂತಿ
ರವಿ ಭುವಿಯರ ದಿವ್ಯ ಪ್ರಾಕೃತಿಕ ಪರಿವರ್ತನೆ ಸನಾತನ ಸಂಸ್ಕೃತಿಯನು ಸಾರಿದೆ
ಅವನಿಯ ಪ್ರತಿ ಜೀವದ ಜೀವನಕೆ ಭಾಗ್ಯದ ಕೊಡುಗೆಯಿತ್ತು ಮೆರೆಸಿದೆ ಈ ಸಂಕ್ರಾಂತಿ
ಕಗ್ಗತ್ತಲಲಿ ಕಾಡಿದ ಕಂಟಕಗಳೆಲ್ಲ ದೂರವಾಗಿ ಎಲ್ಲೆಡೆ ಹೊಂಬೆಳಕು ತುಂಬಿದೆ
ಕಗ್ಗಾಲವ ನೀಗಿಸಿ ಶಾಂತಿ ಸಮೃದ್ಧಿಗಳ ಹೊನ್ನ ಮಳೆ ಸುರಿಸಿದೆ ಈ ಸಂಕ್ರಾಂತಿ
ಜೀವವಿತ್ತ ಪಂಚಭೂತಗಳನ ಸ್ಮರಿಸಿ ನಮಿಸಿ ಆರಾಧಿಸುವ ಪುಣ್ಯಕಾಲವಿದು
ಭಾವ ಬಂಧದ ಅಮೂಲ್ಯ ಜ್ಞಾನಜ್ಯೋತಿಯ ಪ್ರಜ್ವಲಿಸಿದೆ ಈ ಸಂಕ್ರಾಂತಿ
ಬಾಳೆ,ಕಬ್ಬು, ಎಳ್ಳು ಬೆಲ್ಲ ಬೀರಲು ಹೊರಟ ಹೆಣ್ಣುಮಕ್ಕಳ ಸಡಗರಕೆ ಎಣೆಯಿಲ್ಲ
ಜೋಳದ ರೊಟ್ಟಿ, ಮಾದೆಲಿ, ಬುತ್ತಿಯೂಟದ ಸವಿಯ ಹೆಚ್ಚಿಸಿದೆ ಈ ಸಂಕ್ರಾಂತಿ
ಕಷ್ಟಗಳ ಗೆಲುವ ಛಾತಿ, ಕಲಿತ ನೀತಿ ಬಾಳ್ವ ರೀತಿ ಎಲ್ಲವೂ ಮಧುವಿನಂತಾಗಲಿ
ಇಷ್ಟ ಕಾಮನೆಗಳ ಪೂರೈಸುತ ಆನಂದವನು ಚಿರವಾಗಿಸಿದೆ ಈ ಸಂಕ್ರಾಂತಿ..
ಮಧು ವಸ್ತ್ರದ ಮುಂಬಯಿ..