ಪುಸ್ತಕ ಸಂಗಾತಿ
ಪಾರ್ವತಿ ಎಸ್ ಬೂದೂರು
ಡಾ.ಸಿದ್ಧರಾಮ ಹೊನ್ಕಲ್
“ಶಾಯಿರಿಲೋಕ”
ಡಾ.ಸಿದ್ಧರಾಮ ಹೊನ್ಕಲ್ ರ ಶಾಯಿರಿಲೋಕ
ಕರದೊಳಗೊಂದು ಕಂದಿಲು ಹಿಡಿದು, ರಾಶಿ ಹೂಗಳ ಚೆಲುವನೆ ಮುಡಿದು, ಅದ್ಯಾವುದೋ ಗಾಢ ಚಿಂತನೆಯಲಿ ಜಗವನೆ ತೊರೆದು, ಆ ಚಂದಿರನಿಗೆ ಕಾದ ಚಕೋರಿಯಂತಹ ಚೆಲುವೆಯ ಚಿತ್ರ ಟಿ ಎಫ್ ಹಾದಿಮನಿಯವರ ಕುಂಚದಲ್ಲಿ ಅರಳಿರುವ ಮುಖಪುಟ ನನ್ನನು ತಟ್ಟನೆ ಸೆಳೆಯಿತು. ಈ ಸುಂದರವಾದ ಮುಖಪುಟದ ಅಡಿಯಲಿ ಪ್ರೇಮದ ಹುಡಿ ಮೈಮನಕೆ ಹರಡಿಕೊಳ್ಳುವ ಕನ್ನಡ ಶಾಯಿರಿಗಳು ಎಂದಿರುವ ಸಾಲುಗಳು ನನ್ನೊಳಗಿನ ನನ್ನನೂ ಬಹುವಾಗಿ ಆವರಿಸಿದ್ದು ಸುಳ್ಳೇನಲ್ಲ!
ಈ ಕೃತಿಯು ಶಿವಮೊಗ್ಗದ ಗೀತಾಂಜಲಿ ಪ್ರಕಾಶನದವರಿಂದ ೨೦೨೩ ರಲ್ಲಿ ಮುದ್ರಿತವಾಗಿದೆ. ಕವಿದ ಗಾಢ ಇರುಳನು ತಡೆವ ಬೆಳದಿಂಗಳಂತೆ, ದೇವಲೋಕದಿಂದ ಧರೆಗಿಳಿದ ಚೆಲುವಿನ ಗಣಿಯಂತಿರುವ ಅಪ್ಸರೆಯ ಚಿತ್ರವದು. ಚೆಲುವೆಯ ಬಲದಲೊಂದು ಶಾಂತವಾಗಿ ಹರಿಯುವ ಕೊಳವೊಂದರ ಹಸಿರು ಹಾಸಿದ ಹಾದಿಯು ಓದುಗರನು ಕೈ ಬೀಸಿ ಕರೆಯುತ್ತದೆ. ಎಡದಲಿ ಭರಣಿಗಳಿಂದ ಹೊಮ್ಮಿದ ಸೌಗಂಧ, ಏಕಾಂತದಲಿ ಲೀನವಾಗಲು ಪ್ರೇರೇಪಿಸುವಂತಹ ಅತಿ ಸುಂದರ ವರ್ಣ ರಂಜಿತ ಮುಖಪುಟವಿದು. ಅರ್ಪಣೆ ಪುಟದಲಿ ಚಂದದ ನವಿಲಿನ ಚಿತ್ರವೊಂದು ಮನವನು ಮೆಲ್ಲನೆ ಸೂರೆಗೊಳಿಸುವ ಸೌಂದರ್ಯದ ಪ್ರತೀಕವಾಗಿದೆ. ಚೆಲುವಿನ ಸಿರಿಯ ದ್ಯೋತಕವಾಗಿ ಉದಿಸಿದ ಸಾಲುಗಳೇ ಈ ಶಾಯಿರಿಗಳು.
ಪ್ರೇಮಕಾವ್ಯದ ಹುಟ್ಟಿಗೆ ಪ್ರೇರಣೆಯಾದ ಹೂವಂತ ಕೋಮಲ ಹೃದಯಗಳಿಗೆ ಅರ್ಪಿಸಿಕೊಂಡ ಈ ಕೃತಿಗೆ ಶ್ರೀಮತಿ ಡಾ. ಪ್ರೇಮಾ ಹೂಗಾರ ರವರ ಬೆನ್ನುಡಿ, ಡಾ. ಗುರುರಾಜ ಅರಕೇರಿಯವರ ಆಶಯ ನುಡಿ ಹಾಗೂ ಅಸಾದುಲ್ಲಾ ಬೇಗ್ ರವರ ಮುನ್ನುಡಿ ಇವೆ. ಇವುಗಳೊಂದಿಗೆ ಕೃಷ್ಣಮೂರ್ತಿ ಕುಲಕರ್ಣಿ ಮತ್ತು ಮರುಳಸಿದ್ದಪ್ಪ ದೊಡ್ಡಮನಿಯವರ ಬರಹಗಳೂ ಇವೆ.
ಶಾಯಿರಿ ಎಂಬುವದೊಂದು ಕಾವ್ಯದ ಸಮುದ್ರದಂತೆ. ಮನಸ್ಸಿನಾಳದ ಭಾವನೆಗಳನ್ನು ವೈವಿಧ್ಯಮಯವಾಗಿ, ರೋಮಾಂಚನವಾಗಿ ಅಭಿವ್ಯಕ್ತಗೊಳಿಸುವ ಈ ಉರ್ದು ಕಾವ್ಯವನ್ನು ಶ್ರೀಯುತ ಇಟಗಿ ಈರಣ್ಣನವರು ಮೊಟ್ಟ ಮೊದಲ ಬಾರಿಗೆ ಕನ್ನಡ ಸಾರಸ್ವತ ಲೋಕಕೆ ಪರಿಚಯಿಸಿaದರು. ಮಸ್ನವಿ, ಮರ್ಸಿಯಾ, ಖಸಿದಾ, ನಜಮ್, ಗಜಲ್ … ಹೀಗೆ ಶಾಯಿರಿಯ ಹಲವು ಪ್ರಕಾರಗಳು ಉರ್ದು ಸಾಹಿತ್ಯದಲ್ಲಿವೆ. ಇದಿಷ್ಟು ಪುಸ್ತಕದ ಹೊರ ಚಿತ್ರಣವಾದರೆ ಒಳಪುಟಗಳೆಡೆಗೆ ಹೆಜ್ಜೆ ಹಾಕೋಣ ಬನ್ನಿ..
ಪುಟ 29ರ 1ನೇ ಶಾಯಿರಿ,
“ನಿನ್ನ ಮುಖದಾಗ ಅದೇನು ಪ್ರಶಾಂತ ತೇಜಸ್ಸೈತಿ ಸಖಿ
ಜೋಡಿ ಕಣ್ಣಾಗ ಆ ತಾಜ್ ಮಹಲ್ ಕಾಣಾಕತ್ತೈತಿ ಸಖಿ”
ಹದಿಹರೆಯದ ಯುವಕರಿಗಂತು ಓಹೊ! ಇದು ನನ್ನೆದೆಯಲಿ ಮಿಡಿವ ಮಿಡಿತವಿದು ಎನಿಸಿದರೆ, ಇತರ ಓದುಗರ ಮನಕೆ ಮುತ್ತಿಗೆ ಹಾಕಿ ಹೃದಯ ಮುಟ್ಟಿದ, ಎದೆ ತಟ್ಟಿದ ಶಾಯಿರಿಯಾಗಿ ಗತದ ಗೆಳತಿಯ ಮೊಗವನು ಮೆಲ್ಲನೆ ಅಕ್ಷಿಪಟಲದಲ್ಲಿ ತೇಲಿಸುತ್ತದೆ. ‘Face is the index of the mind’ (ಮೊಗವು ಮನದ ಕನ್ನಡಿ) ಎನ್ನುವಂತೆ ಅದರಲ್ಲೂ ಪ್ರೇಮ ಭರಿತ ಎದೆಗೆ ಕಾಡಿದ ಮೊಗವಂತೂ ಶಾಶ್ವತ ಚೆಲುವಿನ ಗಣಿಯಾಗಿ ಒಲವಿನ ಸೌಗಂಧವನೆ ಸೂಸುವದು. ಮಂಜಿನ ಮಣಿಗಳಿಂದ ಪೋಣಿಸಿದ ಸರದಂತೆ ಕ್ಷಣಭಂಗುರತೆಯನು ಸೃಜಿಸದೆ ನಿತ್ಯ ನಿರಂತರ ಸೊಬಗನು ಸೃಷ್ಟಿಸುವುದೆಂದು ಕವಿಯು ತಾಜಮಹಲಿಗೆ ಹೊಲಿಸಿರುವುದು ಔಚಿತ್ಯಪೂರ್ಣವಾಗಿದೆ.
ಪುಟ 30 ರ 4ನೇ ಶಾಯಿರಿ
“ನಾ ಬ್ಯಾಡ ಅಂದದ್ದ ಬೇಕಂತದ
ಬೇಕು ಅಂದದ್ದು ಬ್ಯಾಡ ಅಂತದ
ಈ ಮನಸು ಅಷ್ಟು ಕೋಡಿ ಅದಾ
ಶರ್ಮಗೇಡಿ ಅದಾ”
ದೇಶಿ ಭಾಷಾ ಸೊಗಡಿನಲಿ ಹೊನ್ಕಲ್ ರು ಮನಸಿನ ಮರ್ಕಟತೆಯನು ತಾರ್ಕಿಕವಾಗಿ ವಿಶ್ಲೇಷಿಸಿದ್ದಾರೆ. ಎಲ್ಲ ಮನುಜರಿಗೆ ಎರಡು ತೆರನಾದ ಮನಸ್ಸಿರುತ್ತದೆ. ಒಂದು ಬಹಿರ್ ಮುಖ, ಮಗದೊಂದು ಅಂತರ್ ಮುಖ. ಹೊರಮನದಲಿ ಆ ಕ್ಷಣ ಘಟಿಸಿದ ಘಟನೆಗೆ ಸ್ಪಂದಿಸಿ ಅದರಿಂದ ಅಂತರ ಕಾಯ್ದುಕೊಂಡಿದ್ದರೂ, ಒಳಮನ ಸದಾ ಅದರ ಗತದ ಸವಿ ಗಳಿಗೆಗಳನು ನೆನೆದು ಸಂಭ್ರಮಿಸುತ್ತದೆ ಎನ್ನುವದನೆ ಈ ಶಾಯಿರಿ ದಾಖಲಿಸುತ್ತದೆ. 5, 6ನೇ ಶಾಯಿರಿಯಲ್ಲಿ ಮನಸು ಕಲ್ಲಿನಂತೆ ಕಠೋರವಾಗಿ ಕಂಡರೂ ಅದು ಮೇಣದಂತೆ ಕರಗುವದೆಂದು ತುಂಬಾ ಆಪ್ತವಾಗಿ ವಿಶ್ಲೇಷಿಸಿದ್ದಾರೆ.
ಪುಟ 52 ರ 40ನೇ ಶಾಯಿರಿ
“ಅಗಲಿಕೆ ಸಂತೋಷವಾಗಿದ್ದರೆ
ಆ ಜೀವಗಳದ್ದು ಪ್ರೇಮವೆ ಅಲ್ಲ“
ಕಾಳಜಿ,ಕನವರಿಕೆ,ಸಮರ್ಪಣೆ, ಸೇವೆ, ತೀವ್ರತೆ ಎಲ್ಲವುದರ ಮೊತ್ತವೆ ಪ್ರೇಮವಾದರೆ. ಹಂಬಲ,ಹಾತೊರಿಯುವಿಕೆಯು ಎಂದೆಂದಿಗೂ ಕೊಚ್ಚಿ ಹೋಗದ ನವಿರುತನವು ಪ್ರೇಮದ ನೈಜ ಅನುಭೂತಿಯಾಗಿದೆ.
ಅಡುಗೆಯಲ್ಲಿರುವ ರುಚಿಯನು ಹೇಗೆ ವರ್ಣಿಸಲಾಗದೊ ಹಾಗೆ ಕೇವಲ ಹೆಸರು ಕೊಡಬಹುದು ಹಾಗೆ ಪ್ರೇಮದ ಇರುವು ಅದು.ಎದೆಯ ಖಜಾನೆಯಲಿ ಎಂದಿಗೂ ಖಾಲಿಯಾಗದ ಜೋಳಿಗೆಯೆ ಪ್ರೇಮವಾದರೆ, ಪ್ರೀತಿಯ ಪ್ರತ್ಯೇಕತೆಯಿಂದ ಆವಿರ್ಭವಿಸಿದ ನೋವೆ ವಿರಹ. ಅಗಲಿಕೆ ಸಂತೋಷವಾಗಿರುವದು ಎಂದೆಂದಿಗೂ ಅಸಾಧ್ಯದ ಸಂಗತಿ ಎನ್ನುವದು ಸಾರ್ವಕಾಲಿಕ ಸತ್ಯವಾಗಿದೆ. ಅರಿಷಡ್ವರ್ಗ ಗುಣಗಳಾದ ಕಾಮ, ಕ್ರೋಧ ಮೋಹ, ಮದ, ಮತ್ಸರ, ಲೋಭದ ನೆರಳು ಸೋಕಿ ಅಗಲಿದ ಪ್ರೇಮದಲಿ ನೋವು ತಾಕದಿರೆ ಅದು ಪ್ರೇಮವೆಗಾದಿತೆಂಬ ಸುಂದರ ಸತ್ಯದ ನುಡಿಯಿದು.
ಪುಟ 114ರ 147ನೇ ಶಾಯಿರಿ ನಾ ನಿನ್ನ ಮರಿಬೇಕು ಅಂತ ಅನ್ಕೋಲಾರದ ದಿನಾನೆ ಇಲ್ಲ ದಿನಾ ದಿನಾನೂ ಅನ್ಕೋತೇನೇ ಹಂಗೆ ಅನ್ಕೋವಾಗಲೆ ನಿನ್ನ ನೇನಪಿನಾಗ್ಲೆ ಮುಳುಗಿರುತ್ತೇನೆ
ನನ್ನ ಭಾವನೆಗಳು ನನ್ನ ಲೆಕ್ಕಣಿಕೆ ಅರಿತುಕೊಂಡಿದೆ ಫರಾಜ್.
ನಾನು ಪ್ರೀತಿ ಎಂದು ಬರೆದರೆ ಅದು ನಿನ್ನ ಹೆಸರನ್ನು ಬರೆಯುತ್ತದೆ.
ಅಹಮ್ಮದ ಫರಾಜರವ ಆಶೆಯವನೆ ಅಭಿವ್ಯಕ್ತಪಡಿಸಿದ ನುಡಿಯಂತೆ ಭಾಸವಾಯಿತೆನಗೆ.
ಹಸುಳೆಗಳು ಹಂಬಲಿಸುವ ತಾಯಿಯ ಮಮತೆ. ಪ್ರೇಮಿಗೆ ಕಾಡಿಸುವ ಪ್ರೀತಿಯ ಕೊರತೆ. ವಯಸ್ಕರು ಪರಿತಪಿಸುವ ತಮ್ಮ ಕರುಳ ಕುಡಿಗಳ ಒರತೆ ಹೀಗೆ ಭರಿಸದ ಸಾಲು ಸಾಲು ಕೊರತೆಗಳೆ ಕಾಡುವ ಕಾಡಿಸುವ ನೆನಪುಗಳ ಮೂಲವನು ಕೆದುಕಿದಾಗ ಗೊಚರಿಸುವ ಸತ್ಯವೆಂದರೆ ಎದೆ ಕಣಿವೆಯಲಿ ಪ್ರೇಮವು ಎಂದೂ ಬತ್ತದ ಝರಿಯಂತೆ, ತುಳಿದರು, ಚಿವುಟಿದರು ಮತ್ತೆ ಚಿಗುರುವ ಗರಿಕೆಯಂತೆ ನಿಶ್ಕಲ್ಮಶತೆಯು ಹೊಕ್ಕಿರುವ ಹೃದಯದ ಗಾಯ ಎಂದಿಗೂ ಮಾಸದಿರುವ ಸಂಗತಿಯಾಗಿದೆ.
ಪುಟ 42 ರ 24ನೇ ಶಾಯಿರಿ
“ನಾ ಎಷ್ಟು ಹೇಳಿದರೂ ನಿನ್ನ ಮನಸ್ಸು ಕರಗಾವಲ್ಲದು ನೀನೆ ಹೇಳು ಒಮ್ಮೆ ನಿನ್ನ ಶಿಲೆಯಂತಹ ಮನ ಕೆತ್ತಿ ದೇವರಾಗಿಸಲು ಯಾವ ಸುತ್ತಿಗೆ ಚಾಣ ತರಬೇಕು ಹೇಳೆ”
ಪುಟ 57 ರ 49ನೇ ಶಾಯಿರಿ
“ಸಖಿ ಹಚ್ಚಬೇಡವೆ ಆ ಮೊಂಬತ್ತಿ
ಬೆಳಗಾನ ಉರಿಸು ನಿನ್ನ ಕಣ್ಣ ಕಾಂತಿ
ಅದರಲ್ಲೆ ಪಡುಕೋಣ ತನು ಮನಕೆ ಶಾಂತಿ“
ಪುಟ 68 ರ 67ನೇ ಶಾಯಿರಿ
“ಈ ಜಗತ್ತಿನಲಿ ಯಾರೇ ನಮ್ಮದೇನಾದ್ರು ಕದ್ದರೇ ಸಂಕಟ ಬೇಜಾರು ಪಡೊದು ಸಹಜ ಐತಿ
ಆದರೆ ಹೃದಯ ಕದ್ದವರ ಬಗ್ಗೆ ವಿಪರೀತ ಪ್ರೀತಿ ಕಾಳಜಿ ಸಹಾಜಾತಿ ಸಹಜ ಐತಿ”
ಪುಟ 75ರ 77ನೇ ಶಾಯಿರಿ
“ನೀನೇ ಹುಟ್ಟಿಸಿದ ಕನಸುಗಳಿಗೆ ನೀನೇ ಕೊಳ್ಳಿ ಹಚ್ಚಬೇಕಿತ್ತೇ ಸಖಿ
ತಂತಿ ಹರಿದ ವೀಣೆಯಾಗಿದೆ ಮನ ಹೇಗೆ ಹಾಡ ಹಾಡಿಸಲಿ ಸಖಿ“
ಈ ಭಾವವನ್ನೇ ಎಸ್. ಎಸ್. ಅಲಿ ಯವರ ಈ ಶಾಯಿರಿ ಪ್ರಚುರಪಡಿಸುತ್ತದೆ.
“ನಿನಗಾಗಿ ಬಹುತೇಕರನ್ನು ತಿರಸ್ಕರಿಸಿದ್ದೆ ಗೆಳತಿ ನಿನ್ನಗಲಿಕೆ ಬಹುಷ ಅವರ ಶಾಪವೇ ಇರಬೇಕು”
ಹೊನ್ಕಲ್ಲ ರವರ ಶಾಯಿರಿಯಲ್ಲಿ ಮನದನ್ನೆಗಾಗಿ ಸದಾ ಹಪಹಪಿಸಿ-ಹಂಬಲಿಸಿ, ವಿರಹದ ದಾವಾಗ್ನಿಯಲಿ ನೊಂದ ನೋವಿನ ಆಗರವಿದೆ.
“ಮೌನ ಸುಮ್ಮನೆ ಬರುವದಲ್ಲ ಸಖಿ
ಕೆಲ ನೋವುಗಳು ದನಿಯನ್ನು ಕಸಿದುಕೊಳ್ಳುತ್ತವೆ”
ಇಂತಹ ಸದಾ ವಿರಹದಿಂದ ಹಚ್ಚ ಹಸಿರಾಗಿ ಕಾಡಿದ ನೆನಪುಗಳ ಹಾವಳಿಗೆ ಕೊರಗಿ ಬೆಂದು ಬಳಲಿಕೆಯ ಸಾಗರವಿದೆ.
ಈ ಕೃತಿಯಲಿ ಚುಟುಕುಗಳು ಮತ್ತು ಹನಿಗವಿತೆಗಳಂತಹ ಕಿರುಗವನಗಳು ಸರಳವಾದ, ಆಪ್ತವಾದ ನುಡಿಗಳಲ್ಲಿ ಗಾಢವಾದ ಪರಿಣಾಮ ಬೀರುತ್ತಾ ಒಂದೊಂದು ಓದುತ್ತಾ ಹೊದಂತೆ, ನಮಗೆ ಅರಿವಿಲ್ಲದೆಯೇ ‘ವಾಹ್’ ಎನ್ನುತ ಚಪ್ಪಾಳೆ ತಟ್ಟುವ ಆನಂದದ ಅನುಭವವಿದೆ.
ಒಟ್ಟಾರೆ ಇಲ್ಲಿನ ಎಲ್ಲ ಶಾಯಿರಿಗಳು
ಹೀಗೆಯೆ ಸರಿಸುಮಾರು 154 ಶಾಯಿರಿಗಳನು ಒಳಗೊಂಡಿರುವ ಸಂಕಲನವು ಪ್ರೇಮ ಮತ್ತು ವಿರಹವೆ ಸ್ಥಾಯಿ ಭಾವವಾಗಿ ರಚನೆಗೊಂಡಿದ್ದು, ಇಲ್ಲಿ ಒಲವಿನ ಉತ್ಕಟತೆ ಇದೆ ಪ್ರೀತಿಯ ಪರಾಕಾಷ್ಠೆ ಇದೆ. ಪ್ರೇಮದ ಪರಿಣಯವಿದೆ, ಪ್ರಣಯದ ಪ್ರಖರತೆಯಿದೆ, ಅಲ್ಲದೆ ವಿರಹದ ಓಘದಲಿ ಉದಿಸಿದ ಭಾವಬಿಂದುಗಳಾಗಿವೆ. ಪ್ರೀತಿಸಿದ, ಪ್ರೀತಿಸುತ್ತಿರುವ ಹಾಗೂ ಪ್ರೀತಿಸಲು ಬಯಸುವ ಹೃದಯಗಳಿಗೆ ಈ “ಹೊನ್ಕಲ್ ರ ಶಾಯಿರಿಲೋಕ” ಸಂಗ್ರಹ ಯೋಗ್ಯ ಕೃತಿಯಾಗಿದೆ.
ಪಾರ್ವತಿ ಎಸ್ ಬೂದೂರು
(ಪುಸ್ತಕ ಓದಬಯಸುವ ಆಸಕ್ತರು ರೂ.೧೨೦/- ಅಂಚೆ ವೆಚ್ಚ ಸೇರಿ 9945922151 ಗೆ ಫೋನ್ ಪೇ ಮಾಡಿ ನಿಮ್ಮ ವಿಳಾಸ ಕಳಿಸಲು ಕೋರಿದೆ)
———————————
ಪಾರ್ವತಿ ಬೂದೂರು ಕೆಂಭಾವಿ