ಕಾವ್ಯ ಸಂಗಾತಿ
ಸುಲೋಚನಾ ಮಾಲಿಪಾಟೀಲ
ನಮ್ಮೂರ ಜಾತ್ರೆಯ ಹಬ್ಬ
ಸೂರ್ಯ ತನ್ನ ಪಧ ಬದಲಿಸಲು
ಉತ್ತರದ ಕಡೆಗೆ ಅಡಿ ಇರಿಸಲು
ಸವಿ ಹಂಚುತ ಸವಿಮಾತಾಡಲು
ಬಂದಿತು ಸಂಕ್ರಮಣದ ಹಬ್ಬ ಆಚರಿಸಲು
ನಮ್ಮೂರ ಸಂಗಮೇಶ್ವರ ಜಾತ್ರೆಯದು
ಸುತ್ತಮುತ್ತಲಿನ ಭಕ್ತರ ಸಂಗಮವದು
ಸಮೃದ್ಧಿಯ ಪ್ರತೀಕ ಹರಡಿಹುದು
ಏಕತೆಯ ಸಂಕ್ರಾಂತಿಯ ಆಚರಣೆಯದು
ನದಿ ದಂಡೆಯಲ್ಲಿ ತುಂಬಿದ ಜನಸಾಗರ
ಕರ್ಮ ಕಳೆವ ಕರಮುಟಿಗಿಯ ಸ್ನಾನ ಜೋರ
ಶುಭ ಸಂಕ್ರಮಣದ ಭಾವೈಕ್ಯತೆಯ ತೀರ
ನಗುತ ಸ್ವಾಗತಿಸುತಿಹೆ ಹೊಲದಲ್ಲಿಯ ಪೈರ
ಛಜ್ಜಿ ರೊಟ್ಟಿ ಭಜ್ಜಿ ಪಲ್ಲೆ ಊಟ ನದಿ ದಂಡೆಯಲಿ
ಹೂವಿನ ಅಲಂಕಾರ ಶ್ರೀ ಸಂಗಮೇಶ್ವರನ ಪಲ್ಲಕ್ಕಿಯಲಿ
ಭಕ್ತರಿಂದ ಜಯ ಜಯ ಕಾರ ಮೊಳಗಿಹುದಲ್ಲಿ
ಮೈ ನೆವರೆಳಿಸುವಂತಹ ಆಟ ಆಡುವ ಪುರವಂತರಲ್ಲಿ
ದಣಿದ ರೈತರ ಸಂತಸದ ಸಂಕ್ರಮಣವು
ಬೆಳೆದ ಸಿರಿಧಾನ್ಯಗಳ ಪೂಜಾರ್ಪಣವು
ಹಳೆ ಬೇರು ಹೊಸ ಚಿಗುರಿಗೆ ಆವ್ಹಾಹನವು
ಎಳ್ಳು ಬೆಲ್ಲ ಹಂಚುತ ನೀಡುವ ಗೌರವವು
ಭಕ್ತರು ಕಂಡಂತಹ ಕನಸುಗಳು ನನಸಾಗಲಿ
ಗಾಳಿಪಟದಂತೆ ಮನಸು ಹಗುರವಾಗಲಿ
ಸಾಂಪ್ರದಾಯಿಕ ಭಕ್ಷಗಳ ಸೇವನೆಯಾಗಲಿ
ಶಾಂತಿ ಸೌಹಾರ್ದತೆ ಬದುಕು ನಮ್ಮದಾಗಲಿ
ಕಬ್ಬು ಬಾಳೆ ಎಳ್ಳು ಬೆಲ್ಲದ ಅಚ್ಚುಗಳಿಂದ
ಮಕ್ಕಳಿಗೆ ಎರೆಯುವ ಪ್ರಧವು ಬಲುಚಂದ
ಈ ಸಂಭ್ರಮ ಮುಂಬರುವ ಸಂಕ್ರಾಂತಿಯ ತನಕವಿರಲೆಂದು
ಬೇಡಿಕೊಳ್ಳುವೆವು ದೇವರಲ್ಲಿ ತಲೆಬಾಗಿ ಈ ಹಬ್ಬದಂದು
ಸುಲೋಚನಾ ಮಾಲಿಪಾಟೀಲ