ಕಾವ್ಯ ಸಂಗಾತಿ
ಕಾಡಜ್ಜಿ ಮಂಜುನಾಥ ಕವಿತೆ-
ಸಂಕ್ರಾಂತಿಯ ಸೊಬಗು !
ನೇಸರ ಪಥವ ಬದಲಿಸುವ ಸಮಯ
ಚಳಿಯು ಕರಗಿ ಉಷ್ಣತೆಯ ಉದಯ
ಮನಗಳು ಬೆಸೆವ ಎಳ್ಳುಬೆಲ್ಲದ ರಸಪಾಕ
ರವಿಯ ಕಿರಣವು ಭುವಿಗೆ ಹೊಸನಾಕ
ಗಿಡಮರಕೆ ನವೋಲ್ಲಾಸದ ಉದಕ
ಎಲೆಗಳುದುರಿ ಚಿಗುರು ಬರುವ ತವಕ
ಬಿಸಿಲು ಮಾಗಿಸಿ ನಗುವ ದಿನಕರ
ಮಳೆಯ ಮೋಡಗಳು ಕಳೆಗಟ್ಟೋ ಆತುರ
ರೈತನ ಬೆವರಿಗೆ ಬೆಲೆಬಂದ ಸಮಯ
ಧಾನ್ಯದ ರಾಶಿಯ ನೋಡುವುದೇ ವಿಸ್ಮಯ
ದಣಿದ ಮನಸಿಗೆ ಕಬ್ಬಿನ ರಸಕವಳ
ಎಳ್ಳುಬೆಲ್ಲಕೆ ಮನಸೋಲದವರೇ ವಿರಳ
ಹೊಸ ಹುರುಪು ನವೋಲ್ಲಾಸದ ಸಮಯ
ಸನಾತನ ಸಂಸ್ಕೃತಿಯ ಪಾಲಿಸುವ ಹೃದಯ
ಜೀವಿ ಜೀವನ ಪ್ರೇಮವು ಕಗೋಳಿಸುವ ಕಾಲವು
ವೃತ್ತಿ ಪ್ರವೃತ್ತಿಗಳು ಸಂಗಮವಾಗುವ ಕ್ಷಣವು
ಸ್ನೇಹ ಪ್ರೀತಿಯ ಬಂಧವ ಮೂಡಿಸಿ
ದ್ವೇಷಗಳನು ಬಿಸಿಲಲಿ ಮೌನದಿ ದಹಿಸಿ
ಎಲ್ಲರ ಮನದಲ್ಲೂ ಸೌಹಾರ್ದತೆ ಮೊಳಗಿಸಿ
ಭಾರತವೆಂಬ ಭೂಮಿಯಲಿ ಏಕತೆಯ ಬೆಳೆಸಿ
ಕಾಡಜ್ಜಿ ಮಂಜುನಾಥ