ಕಾವ್ಯ ಸಂಗಾತಿ
ಡಾ. ಬಸಮ್ಮ ಎಸ್.ಗಂಗನಳ್ಳಿ
ಉತ್ತರಾಯಣ

ಬಂತು ಸಂಕ್ರಾಂತಿ
ಜನರ ಮನದ
ಭ್ರಾಂತಿ ಕಳೆದು
ಚಿಂತೆಯ ನೀಗಿಸಿ..
ಚಳಿಯು ತಾನು
ಮೈಯ ಹೊರಳಿಸಿ
ಬಿಸಿಲಿಗೆ ಬೆನ್ನೊಡ್ಡಿ
ಸುಖ ಪಡೆವ ಕಾಲ..
ಗಿಡ ಮರ ಬಳ್ಳಿಗಳು
ಹಳೆಯ ಎಲೆಗಳ
ಉದುರಿಸಿ, ಹೊಸ
ಚಿಗುರಿನ ಚಿತ್ತಾರವು..
ನವಿರು ಅಲರಿಗೆ
ಪಕ್ಷಿಗಳು ಮುಕುರಿ
ಸವಿಯ ಹೀರುತಲಿ
ಕಲರವದ ಇಂಚರ..
ದಕ್ಷಿಣ ಧ್ರುವ ಪಥದಿ
ಸರಿದ ಸೂರ್ಯನು
ಉತ್ತರಧ್ರುವದೆಡೆಗೆ
ಸಾಗುವ ಪರ್ವಕಾಲ..
ಪ್ರಕೃತಿಯ ಮಡಿಲಲ್ಲಿ
ನಿತ್ಯವೂ ಮಿಂದೇಳುವ
ರೈತಗೆ ಸುಗ್ಗಿಯ ಹಬ್ಬ
ಹಸಿರಿನ ವನಸಿರಿಯು..
ಹೊಲದ ತುಂಬ ಹೂ
ಕಾಯಿ,ಫಲ ತುಂಬಿದೆ
ಭೂತಾಯಿ ಹಸಿರುಟ್ಟು
ಬಸಿರಿನ ಸಂಭ್ರಮ..
ಸಜ್ಜಿ ರೊಟ್ಟಿ,ಕಡುಬು
ಎಣ್ಣೆ ಬದನಿಕಾಯಿ
ಶೇಂಗಾ ಹೋಳಿಗಿ
ತರತರದ ತರಕಾರಿ..
ಬಯಕೆಯ ಬುತ್ತಿ
ಭುವಿಗೆ ನೈವೇದ್ಯ
ಸಡಗರ ಸಂಕ್ರಾಂತಿ
ಬದುಕಿಗೆ ಶಾಂತಿ..
ಶುಭ ಗಳಿಗೆ, ಸುಸಮಯ
ಸರ್ವಕಾರ್ಯಕೂ, ಸಕಲ
ಪೂಜೆಗೂ ಅಸ್ತು, ಈ ಕಾಲ
ಅಳಿಯುವ ಅಸಮಾನತೆ..

———————————————–
ಡಾ. ಬಸಮ್ಮ ಎಸ್.ಗಂಗನಳ್ಳಿ
Nice