ಶುಭಲಕ್ಷ್ಮಿ ನಾಯಕ ಅವರ ಕವಿತೆ-ಸುಗ್ಗಿ ಸಂಭ್ರಮ

(ಜಾನಪದ ಶೈಲಿಯಲ್ಲಿ ಕವನ)

ಸುಗ್ಗೀಯ ಸಂಕ್ರಾಂತಿ ಸಂಭ್ರಮವ ತಂದೈತೆ
ಹಿಗ್ಗೀನ ಚೆಲುವನು ತುಂಬೈತೆ/ಧರಣಿಯಲಿ
ಸಗ್ಗಾವ ಹಾಸುತ ನಲಿದೈತೆ//೧//

ಮನೆಮುಂದೆ ರಂಗೋಲಿ ಹಾಕ್ಯಾರ ನಾರಿಯರು
ಘನತೆಯಲಿ ಫಸಲನು ತುಂಬ್ಯಾರ/ಕಣಜಕ್ಕೆ
ಮನದಿಂದ ಪೂಜೆಯ ಮಾಡ್ಯಾರ//೨//

ಎಳ್ಳನ್ನು ಬೆಲ್ಲವನು ಬೆರೆಸುತ್ತ ಹಂಚ್ಯಾರ
ಹಳ್ಳಿಯಲಿ ಜನಮನ ನಲಿದಾರ/ ಮೆಲ್ಲುತ್ತ
ತಳ್ಳುತ್ತ ತಮ್ಮಯ ತೊಡಕುಗಳ//೩//

ಕಬ್ಬುಗಳತಂದ್ಯಾರ ಸಿಹಿಯನ್ನು ಕೊಟ್ಯಾರ
ಹಬ್ಬವನು ಕುಶಲದಿ ಮಾಡ್ಯಾರ/ಕುಣಿಕುಣಿದು
ದಿಬ್ಬಣದ ತೆರದಲಿ ಸೇರ್ಯಾರ//೪//

ಎತ್ತುಗಳ ಸಿಂಗರಿಸಿ ದಾರಿಯಲಿ ನಡೆಸ್ಯಾರ
ಹೊತ್ತಿಸಿದ ಕಿಚ್ಚಲಿ ಹಾಯ್ಸ್ಯಾರ/ ಜನರೆಲ್ಲ
ಸುತ್ತಣಕೆ ಹರುಷವ ತುಂಬ್ಯಾರ//೫//

ಬೆಳೆದಂತ ಬೆಳೆಯಲ್ಲಿ ಹೊಸತನ್ನು ಮಾಡ್ಯಾರ
ಕಳೆಯನ್ನು ಕೇರಿಗೆ ತುಂಬ್ಯಾರ/ಸಡಗರದಿ
ಗೆಳೆತನವ ತೋರುತ ಬದುಕ್ಯಾರ//೬//

ಎಲ್ಲರು ಕೂಡ್ಕೊಂಡು ಎಳ್ಳನ್ನು ಬೀರ್ಯಾರ
ಬೆಲ್ಲವ ಹಂಚಿ ಸುಖಿಸ್ಯಾರ/ ಸುಗ್ಗೀಲಿ
ಜಲ್ಲಿಯ ಕಬ್ಬನ್ನು ಸವಿದಾರ//೭//

ಸಿರಿದೇವಿ ಬೆಳೆಯನ್ನು ಹಿರಿತನದಿ ಕೂಡುತ್ತ
ತಿರೆಯಲ್ಲಿ ಸಂಭ್ರಮ ತುಂಬ್ಯಾದ/ ಸಂಕ್ರಾಂತಿ
ಹಿರಿದಾದ ಹಿಗ್ಗನು ತಂದೈತೆ//೮//


One thought on “ಶುಭಲಕ್ಷ್ಮಿ ನಾಯಕ ಅವರ ಕವಿತೆ-ಸುಗ್ಗಿ ಸಂಭ್ರಮ

  1. ಸುಗ್ಗಿಯ ಹಬ್ಬ ರೈತನ ಜೀವನೋತ್ಸಾಹಕ್ಕೆ ಹಾಗೂ ವೈಜ್ಞಾನಿಕ ಜಗತ್ತಿಗೆ ಸಂಕ್ರಾಂತಿಯ ಸೊಬಗಿನ ಕವಿತೆ ಚೆನ್ನಾಗಿದೆ ಮೇಡಂ

Leave a Reply

Back To Top