ಕಾವ್ಯ ಸಂಗಾತಿ
ಲಲಿತಾ ಪ್ರಭು ಅಂಗಡಿ
ಉತ್ತರಾಯಣ
ಸಂಕ್ರಾಂತಿ ಹಬ್ಬಕೆ ಸುಗ್ಗಿಯ ಕಡಲು
ರೈತನ ದುಡಿಮೆಯ ಬೆವರಿನ ಫಸಲು
ಕವಿಯ ಮನಕೆ ಕಾವ್ಯದ ಒಡಲು
ತೋಚಿದ್ದನು ಗೀಚಿ ಗುನುಗುವ ತೆವಲು
ಶಬ್ದಗಳ ಹೆರಿಗೆಗೆ ದಾರಿ ತೋರಿದ ಕವಲು
ಸುಗ್ಗಿಯ ಕಾಲಕೆ ಮದುವಣಿಗಿತ್ತಿಯಾದ ನೆಲವು
ಸೂರ್ಯನ ಕಿರಣಕೆ ನಸುನಕ್ಕ ನಂದನವನದ ಹೊನಲು
ದಿನತುಂಬಿ ಹೊತ್ತಂತೆ ಭೂದೇವಿ ಮಡಿಲು ಹಸಿರನುಟ್ಟು ನಳನಳಿಸುವ ಒಡಲು
ಕಬ್ಬು ಕಡಲೆ ಎಳ್ಳು ಅವರೆ ತೆನೆತುಂಬಿ ಬಳುಕ್ಯಾವ ಸಾಲು ಸಾಲು
ನೇಗಿಲ ಯೋಗಿಗೆ ಭೂತಾಯೆ ಸಗ್ಗದ ಸಿರಿಯ ಹೊನಲು
ಹಕ್ಕಿ ಪಕ್ಷಿಗಳು ಮನ ಬಿಚ್ಚಿ ಹಾಡ್ಯಾವ ನಂದನ ವನದಲಿ
ಬೆಳೆದ ಪೈರುಗಳ ಹೂ ಮೊಗ್ಗು ತುಂಬಿ ತುಳುಕ್ಯಾವ ರಾಶಿರಾಶಿಯಲಿ
ಉತ್ತರಾಯಣದ ರವಿತೇಜನ ಪಥದಲಿ
ಹಸಿರನುಟ್ಟ ಭೂರಮೆಯ ಮಡಿಲಲಿ ನಾಟ್ಯವಾಡಿತು ನವಿಲು
ಭಾವದೊಲುಮೆಯ ಗಾನಕೆ ಕೊಳಲನೂದಿತು ಕೋಗಿಲೆ.
ಹಕ್ಕಿ ಪಕ್ಷಿಗಳ ಗಾನಕೆ
ಕಬ್ಬನೊಳಗಿನ ಸಿಹಿಯಂತೆ
ಎಳ್ಳಿನೊಳಗಿನ ಒಗರಿನಂತೆ
ಬೆಲ್ಲ ದೊಳಗಿನ ರುಚಿಯಂತೆ
ಸುಖ ಶಾಂತಿ ನೆಮ್ಮದಿಯ ಬದುಕಿಗೆ
ನಮ್ಮರಿವು ಉದಯವಾಗಲು
ರವಿತೇಜನ ಹೊಂಗಿರಣ
ಬರೀ ತಿರುಗಲ್ಲ ತಿರುಳಿನ ಬೆಳಕು
ಬದುಕಿಗೆ ನೆಲೆಯೂರಲು ಹೊಂಬೆಳಕು
ಹೊಮ್ಮಿರಲಿ ಮನುಜ ಪಥ.
ಲಲಿತಾ ಪ್ರಭು ಅಂಗಡಿ ಮುಂಬಯಿ
.