ಕಾವ್ಯ ಸಂಗಾತಿ
ಅರುಣಾ ನರೇಂದ್ರ ಅವರ
ಗಜಲ್
ಕುದಿವ ಬೇಗುದಿಗೆ ತಂಬೆಲರಾಗಿ ಬಂದ
ಹಕ್ಕಿಗಳ ಇನಿದಾದ ಧ್ವನಿಯಾಗಿ ಬಂದ
ಅವನು ಅಡಿ ಇಡದ ದಾರಿ ಕತ್ತಲಾಗಿತ್ತು
ಬಲು ನಗೆ ನಕ್ಕು ಜೊನ್ನ ಬೆಳಕಾಗಿ ಬಂದ
ಕಣ್ಣು ತೆರೆಯುವ ಮೊಳಕೆಗೂ ಮುಜುಗುರ
ಅಂಗಳದ ತುಂಬಾ ಹಸಿರ ಸುಗ್ಗಿಯಾಗಿ ಬಂದ
ಹಿಂತಿರುಗಿ ನೋಡದೆ ದೂರ ನಡೆದವನು
ಉದಯ ಕಾಲದ ಹೊಸ ಅಲೆಯಾಗಿ ಬಂದ
ಜಗದ ಸೊಗವೀಗ ಅರುಣಾಳ ಮುಂದಿದೆ
ಪುಗ್ಗದೊಳಗಿನ ಹಸಿ ಉಸಿರಾಗಿ ಬಂದ
ಅರುಣಾ ನರೇಂದ್ರ