ಕಾವ್ಯ ಸಂಗಾತಿ
ಮಾಲಾ ಚೆಲುವನಹಳ್ಳಿ
ಗಜಲ್
ಗುಣದ ಗಣಿಯಾಗಿರಲು ಜಗವು
ಹೊಗಳುವುದು ಗೆಳೆಯಾ
ಕಣ ಕಣದಿ ಚೇತನವ ತುಂಬಲು
ಜೀವ ಬೆಳಗುವುದು ಗೆಳೆಯಾ
ಪಂಚಮದ ಕೋಗಿಲೆಯೊಂದು ಕಾಯ್ದು
ಕನವರಿಸುತ್ತಿದೆ ಕಂಡೆಯೇನು
ಇಂಚರವ ಆಲಿಸುತ ಕಮಲವೊoದು
ಬಿರಿದು ನಳನಳಿಸುವುದು ಗೆಳೆಯಾ
ಬಾಳಿನ ಹಾದಿ ಬಲು ಸುಗಮವೆಂಬ
ಭ್ರಮೆಯಲಿ ಬದುಕುತಿರುವೆವು
ತಾಳಿ ಬರುವ ಕಷ್ಟಗಳ ಸಹಿಸುವುದ
ಕಾಲ ಕಲಿಸುವುದು ಗೆಳೆಯಾ
ಪರರ ಕಷ್ಟಕ್ಕೆ ಮಿಡಿಯುವ ಹೃದಯಕೆ
ನೋವೇ ಹೆಚ್ಚಾಗಿರುವುದು
ಹರನ ಅನುಗ್ರಹವಿರಲು ಸಾಂತ್ವನವು
ಸಹಜವಾಗಿ ಲಭಿಸುವುದು ಗೆಳೆಯಾ
ಲವಲೇಷವು ಬೇಧವಿರದ ಮನಸ್ಸಿಗೆ
ಘಾಸಿ ಮಾಡುವರು ಅಡಿಗಡಿಗೆ
ಸಮಭಾವದಿ ಸತ್ಕರಿಸುವ ಮಾಲಾಳಿಗೆ
ವಿಧಿ ಮುಗುಳ್ನಗುವುದು ಗೆಳೆಯಾ.
—————————-
ಮಾಲಾ ಚೆಲುವನಹಳ್ಳಿ