ಅಂಬಾದಾಸ ವಡೆ ಅವರ ಕವಿತೆ-ಸಮಾಪ್ತಿ

ಆಂತರ್ಯದ ಅಮಿತ ಶೂನ್ಯತೆಯ ಕೂಗು ಹಾಕಿ
ತನ್ನ ನೆಲೆಗೆ ಸಾಕ್ಷಿಯಾಗುತ್ತದೆ ಸಾವು !
ನಿಸ್ಸೀಮ ಕಾಡಿನ ನಿಗೂಢತೆಯಂತೆ
ಮುಷ್ಠಿಗೆ ಬರದ ಅದರ ಹೊಯ್ದಾಟ !
ಬಿತ್ತಿದ ಕನಸುಗಳು ತೀರದಾಚೆ ಹರಿಯುವ ನದಿಯಂತೆ
ನಿತ್ಯ ಅದರತ್ತ ಚಲನೆಯ ಸದ್ದು !

ಅಮೂರ್ತ ತುದಿಯ ನೆಲೆಯಲಿ
ಸಾವಿನ ನಿಜ ಆರಂಭ.
ನೋವಲ್ಲ ; ಶಾಶ್ವತ ಮೌನದ ಸಂಕೇತ.
ಬಿದ್ದು ಹೊರಳಿ, ಬಿಟ್ಟು ಹೋದ
ನಮ್ಮ ಪ್ರತಿ ಹೆಜ್ಜೆಯ ಮೊನಚಿನಲಿ
ಕಾಣುವ ನಗುವಿನ ಅಜ್ಞಾತ !
ಸಾಗುವ ನಿಷ್ಪ್ರಜ್ಞೆಯ ಮೌನದೊಂದಿಗೆ
ಬೆಳಗುವ ಕಿರಣವೋ ; ತೀರವನು ಹತ್ತಿರ ಕರೆತರುವ
ಅಂತರಾಳದ ಶೂನ್ಯವೋ …
ಮೃತ್ಯುವಿನ ಸಮಾಹಿತವೇ ಕಾಲದ ಬಲ !
ಯಕ್ಷಪ್ರಶ್ನೆಯ ಕಿಡಿಯಾರಿಸಿದ ಯುಧಿಷ್ಠಿರನ ದಾರಿಗುಂಟ ಪಯಣ !

ನಿಗೂಢ ಅರ್ಥ ಅರಿಯದ ಸಾವೆಂಬ ಸಮಾಪ್ತಿ
ಕಾಲದ ಪಯಣದುದ್ದಕ್ಕೂ ಸಂಗಾತಿ !
ಸೋಜಿಗದ ರಣಬಿಸಿಲ ಹಾದಿಗೆ
ಎದುರಾಗುವ ಹೆಬ್ಬಂಡೆ.
ಉರುಳಿ ನಿಲ್ಲಿಸುತ್ತದೆ ಶ್ವಾಸ !
ಶ್ವಾಸ ನಿಶ್ವಾಸಗಳ ಮಧ್ಯೆ ಚಕಿತವಾಗಿಸಿ
ಚಿಗುರುತಿದೆ ಕಾಲದ ಸತ್ಯದ ಗಿಡಗಂಟಿಗಳು !  

————————————-

2 thoughts on “ಅಂಬಾದಾಸ ವಡೆ ಅವರ ಕವಿತೆ-ಸಮಾಪ್ತಿ

Leave a Reply

Back To Top