ಅಂಕಣ ಬರಹ
ವಿಜ್ಞಾನ ವೈವಿಧ್ಯ
ಶಿವಾನಂದ ಕಲ್ಯಾಣಿ
ಕಪ್ಪು ವಿಧವೆ
“ಗಂಡು – ಹೆಣ್ಣು” ಇದು ಸೃಷ್ಟಿ ನಿರ್ಮಿಸಿದ ವಿಶಿಷ್ಟ ಜೋಡಿ. ಸಂತಾನೋತ್ಪತ್ತಿಯ ನಡವಳಿಕೆಯನ್ನು ಅವಲಂಬಿಸಿದಈ ಜೊತೆ ಆಯಾ ಪ್ರಭೇದದ ಉಳುವಿಗೆ ಕಾರಣವಾಗಿದೆ. ಸಂಗಾತಿಯ ಜೀವನ್ಮರಣದ ಪ್ರಶ್ನೆ ಬಂದಾಗ ಅದರ ಜೊತೆಯ ಇನ್ನೊಂದು ಜೀವಿ ಶತಾಯಗತಾಯ ಅದನ್ನು ಉಳಿಸಲು ಪ್ರಯತ್ನಿಸುವುದು ಬಹುತೇಕ ಪಂಗಡಗಳ ಲಕ್ಷಣವಾಗಿದೆ.
“ನಾಗ” ನನ್ನು ಕೊಂದದ್ದಕ್ಕಾಗಿ “ನಾಗಿಣಿ” ಹಠ ತೊಡುವುದನ್ನು ದಂತಕಥೆಗಳಲ್ಲಿ ಓದುತ್ತೇವೆ…..
ಒಟ್ಟಾರೆ ಕೂಡಿಬಾಳುವುದು ಪ್ರತಿ ಜೋಡಿ ಪ್ರಭೇದದ ನಿಸರ್ಗ ವೈಶಿಷ್ಟವಾಗಿದೆ.
ಆದರೆ ಕಪ್ಪು ಜೇಡ ಮಾತ್ರ ಈ ಮಾತಿಗೆ ಅಪವಾದವೆನಿಸಿದೆ. ಕಪ್ಪು ಹೆಣ್ಣು ಜೇಡ ತಾನಾಗಿಯೇ ವಿಧವಾ ಅವಸ್ಥೆಯನ್ನು ತಂದುಕೊಳ್ಳುವ ವಿಸ್ಮಯ ವರ್ತನೆ ಬೀಭತ್ಸದಿಂದ ಕೂಡಿದೆ.
ಸಾಮಾನ್ಯವಾಗಿ ಜೇಡಗಳು ಏಕಾಂಗಿ ವಾಸಿ ಜೀವಿಗಳು. ಇವು ಒಂದೇ ಸ್ಥಳದಲ್ಲಿ ಇರಲಾರವು. ಏಕೆಂದರೆ ಜೇಡಗಳು ಸಜಾತಿ ಭಕ್ಷಕಗಳಾಗಿದ್ದು ಬಲಿಷ್ಠ ಹೆಣ್ಣು ದುರ್ಬಲ ಗಂಡುಗಳನ್ನು ತಿಂದು ಹಾಕಿ ಬಿಡುವ ಸಂದರ್ಭಗಳು ಹೆಚ್ಚು.ಆದರೇನು….. ಲಿಂಗರೀತಿ ಸಂತಾನೋತ್ಪತ್ತಿಗಾಗಿ ಗಂಡು-ಹೆಣ್ಣು ಸಂಧಿಸಬೇಕಿರುವುದು ಸೃಷ್ಟಿಯ ನಿಯಮವು. ಇಂತಹ ಸಮಯಕ್ಕಾಗಿ ಮಾತ್ರ ಈ ಜಾತಿಗಳು ಸಜಾತಿ ಭಕ್ಷಕ ಪ್ರವೃತ್ತಿಯನ್ನು ತಾತ್ಕಾಲಿಕವಾಗಿ ಮೆಟ್ಟಿ ನಿಲ್ಲುತ್ತವೆ.
ಸಂತಾನೋತ್ಪತ್ತಿಗೆ ಸಿದ್ಧವಾದ ಹೆಣ್ಣು ಒಂದು ನಿರ್ದಿಷ್ಟ ಸ್ಥಾನವನ್ನು ಗುರುತಿಸಿ, ಗೂಡನ್ನು ಕಟ್ಟಿಕೊಂಡು ಗೂಡಿನ ಮಧ್ಯದಲ್ಲಿ ಕುಳಿತು, ಗಂಡಿನ ಬರುವಿಕೆಯ ನಿರೀಕ್ಷೆಯಲ್ಲಿರುತ್ತದೆ.ಮತ್ತು ತನ್ನ ನಿರೀಕ್ಷೆಯನ್ನು ಸಫಲಗೊಳಿಸಿಕೊಳ್ಳಲು ಅದು ತನ್ನ ಗೂಡಿನಿಂದ ಸ್ರವಿತ ರಸದ ಎಳೆಯೊಂದನ್ನು ಗಾಳಿಯ ಸಹಾಯದಿಂದ ಗಣನೀಯ ದೂರಕ್ಕೆ ಕೊಂಡೊಯ್ಯುತ್ತದೆ.ಇದು, ತಾನು ಲೈಂಗಿಕ ಕ್ರಿಯೆಗೆ ಸಿದ್ಧವೆಂದು ಹೇಳಿಕೊಳ್ಳುವ ಸೂಚನೆಯಾಗುತ್ತದೆ. ಇದನ್ನು ಅರಿತೊಡನೆ ಗಂಡು (ಲೈಂಗಿಕ ಆಕರ್ಷಣೆಯನ್ನು ಪಡೆದ ಇತರ ಜೀವಿಗಳಂತೆ) ಲೈಂಗಿಕ ಸಾಂಗತ್ಯಕ್ಕೆ ಒಳಪಡುವುದಿಲ್ಲ. ಗಂಡು ಸಾವಕಾಶವಾಗಿ ಬಹು ಜಾಗರೂಕತೆಯಿಂದ ಹೆಣ್ಣಿನೆಡೆಗೆ ಅದರ ನಿರ್ದೇಶಿತ ದಾರದೆಳೆ ಹಿಡಿದು ಸಾಗುತ್ತದೆ. ಕೊನೆಗೆ ಸಂದರ್ಭಕ್ಕೆ ಸಿದ್ಧವಾದೊಡನೆ ಜನನಾಂಗದಿಂದ ವೀರ್ಯದ ಚೆಂಡೊಂದನ್ನು ತಯಾರಿಸಿಕೊಳ್ಳುತ್ತದೆ.
ಗಂಡು ಜೇಡ ತಾನು ಹೆಣ್ಣಿಗೆ ಬಲಿಯಾಗುವನೆಂದು ತಿಳಿದೂ ತನ್ನ ಲೈಂಗಿಕ ಆಸಕ್ತಿಯ ಕೊನೆಯ ಕಾರ್ಯಗಳನ್ನು ಪ್ರಾರಂಭಿಸುತ್ತದೆ.ನಿಧಾನವಾಗಿ ಹೆಣ್ಣಿನತ್ತ ಬಂದು ತಟ್ಟನೆ ಹಿಂದಿರುಗುತ್ತದೆ. ಈ ವರ್ತನೆಯನ್ನು ಅದು ಅನೇಕ ಬಾರಿ ಪುನರಾವರ್ತಿಸಿದರೂ ಹೆಣ್ಣು ಮಾತ್ರ ಯಾವ ಪ್ರತಿಕ್ರಿಯೆಯನ್ನು ತೋರುವುದಿಲ್ಲ. ಏಕೆಂದರೆ ಗಂಡಿನಲ್ಲಿಯ ಜೀವನಾಶದ ಭಯವನ್ನು ಸಂಪೂರ್ಣವಾಗಿ ಕಿತ್ತುಹಾಕಿ ಲೈಂಗಿಕ ತೆವಲನ್ನು ತೀರಿಸಿಕೊಳ್ಳುವ ಉದ್ದೇಶ ಹೊಂದಿರುತ್ತದೆ. ಆದ್ದರಿಂದಲೇ ಮೊದಮೊದಲು ಹೆಣ್ಣು ಗಂಡನ್ನು ಹಿಡಿಯಲು ಪ್ರಯತ್ನಿಸುವುದಿಲ್ಲ.
ಕೊನೆಯಲ್ಲಿ ಗಂಡು ಇನ್ನೂ ಹತ್ತಿರ ಬಂದು ವೀರ್ಯದ ಚಂಡನ್ನು ಹೆಣ್ಣಿನ ರೆತಸ್ಸಿನ ಭಾಗಕ್ಕೆ ಸೇರಿಸುತ್ತದೆ. ಈ ಕ್ರಿಯೆ ಸಂಪೂರ್ಣಗೊಂಡ ತರುವಾಯ ಗಂಡು ಗೂಡಿನಿಂದ ಹೊರಬರಲು ಯತ್ನಿಸುತ್ತದೆ.
.
ಆದರೆ ದೇಹ, ಗಾತ್ರ ಮತ್ತು ರಚನೆಯಲ್ಲಿ ಗಂಡನ್ನು ಮೀರಿಸಿದ ಹೆಣ್ಣು,ಅದನ್ನು ಹೊರ ಹೋಗಲು ಬಿಡದೆ ಭೀಮ ಬಾಹುಗಳಿಂದ ಬಂಧಿಸಿ ಗಪಗಪನೆ ತಿಂದು ಹಾಕಿ ಬಿಡುತ್ತದೆ.
ಇಂತಹ ವಿಸ್ಮಯ ಲೈಂಗಿಕ ವರ್ತನೆ ತೋರುವ ಕಪ್ಪು ಹೆಣ್ಣು ಜೇಡವು ತನಗೆ ತಾನೆ ವಿಧವಾ ಅವಸ್ಥೆಯನ್ನು ತಂದುಕೊಳ್ಳುತ್ತದೆ.
———————————————–
ಶಿವಾನಂದ ಕಲ್ಯಾಣಿ
ಶಿವಾನಂದ ಕಲ್ಯಾಣಿ ಅವರು ಮೂಲತಃ ಬಸವನಬಾಗೇವಾಡಿ ತಾಲೂಕಿನ ಉತ್ನಾಳ
ಗ್ರಾಮದವರು.ಪ್ರಾಥಮಿಕ ಹಾಗೂ ಮಾಧ್ಯಮಿಕ ಶಿಕ್ಷಣವನ್ನು ಹುಟ್ಟೂರಲ್ಲಿ ಮುಗಿಸಿ, ಪದವಿಯನ್ನು ವಿಜಯಪುರದಲ್ಲಿ ಪೂರೈಸಿದರು. ಉನ್ನತ ಪದವಿಗಳಾದ ಎಂಎಸ್ಸಿಯನ್ನು ಕುವೆಂಪು ವಿಶ್ವವಿದ್ಯಾಲಯ ಹಾಗೂ ಎಂ.ಈಡಿ ಪದವಿಯನ್ನು ಮೈಸೂರಿನ ಮಾನಸಗಂಗೋತ್ರಿ ವಿಶ್ವವಿದ್ಯಾಲಯದಲ್ಲಿ ಪೂರೈಸಿದರು. ಜೊತೆಗೆ ಸಾಹಿತ್ಯದ ಆಸಕ್ತಿಯಿಂದ ಎಂ.ಎ. ಕನ್ನಡ ಪದವಿಯನ್ನು ಕರ್ನಾಟಕ ವಿಶ್ವವಿದ್ಯಾಲಯದಿಂದ ಪಡೆದರು. ಪ್ರಸ್ತುತ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು ವಿಜಯಪುರ, ರಸಾಯನ ಶಾಸ್ತ್ರದ ಹಿರಿಯ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಕಳೆದ 30 ವರ್ಷಗಳಿಂದ ವಿಜ್ಞಾನ ಬೋಧನೆಯಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಅಧ್ಯಯನ ಹಾಗೂ ಬರವಣಿಗೆಯಲ್ಲಿ ಆಸಕ್ತಿ ಹೊಂದಿರುವ ಇವರು ವಿಜ್ಞಾನದ ಲೇಖನಗಳನ್ನು ಅನೇಕ ಪತ್ರಿಕೆಗಳಿಗೆ ಬರೆದಿದ್ದಾರೆ ಸೃಜನಶೀಲ ಪ್ರತಿಭೆಯುಳ್ಳ ಇವರು ಈಗಾಗಲೇ ಎರಡು ಪುಸ್ತಕಗಳನ್ನ ಪ್ರಕಟಿಸಿದ್ದಾರೆ . ಗ್ರಾಮೀಣ ಪರಿಸರದಿಂದ ಬಂದ ಇವರು ತನ್ನೂರಿನ ಜನಪದ ಕಥೆಗಳನ್ನು ಒಳಗೊಂಡ “ಸಾತೆವ್ವನ ಕೌದಿಕತೆ ಹಾಗೂ ನನ್ನೂರ ಜನಪದ ಕಥೆಗಳು” ಮತ್ತು 101 ವಿಜ್ಞಾನ ಲೇಖನಗಳ ಸಂಗ್ರಹ, “ಅಜ್ಜ ಅಮೀಬಾ ಮತ್ತು ವಿಚಿತ್ರ ವಿಶ್ವ” ಎಂಬ ಎರಡು ಗ್ರಂಥಗಳನ್ನು ಪ್ರಕಟಿಸಿದ್ದಾರೆ.
ಅನೇಕ ಶಾಲಾ-ಕಾಲೇಜುಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಸಾವಿರಾರು ವಿದ್ಯಾರ್ಥಿಗಳಿಗೆ ತರಬೇತಿ ನೀಡಿ ಪಿಎಸ್ಐ ಪಿಡಿಓ ಬ್ಯಾಂಕ್ ಹೈ ಸ್ಕೂಲ್ ಟೀಚರ್ಸ್ ನಂತಹ ಸರಕಾರಿ ನೌಕರಿ ಪಡೆಯುವಲ್ಲಿ ತರಬೇತುಗೊಳಿಸಿದ್ದಾರೆ. ಅವರ ಶೈಕ್ಷಣಿಕ ಸೇವೆಯನ್ನು ಗುರುತಿಸಿ ಅನೇಕ ಸಂಘ ಸಂಸ್ಥೆಗಳು ಅವರನ್ನು ಗೌರವಿಸಿವೆ.