ಕಾವ್ಯ ಸಂಗಾತಿ
ಹಮೀದಾಬೇಗಂ ದೇಸಾಯಿ
ಗಜಲ್
ಕಳೆದು ಹೋದ ಗಳಿಗೆ ಬಾಳಿನಲಿ ಮರಳುವುದಿಲ್ಲ ಇನಿಯಾ
ಮುರುಟಿ ಬಾಡಿ ಒಣಗಿದ ಮೊಗ್ಗೆಂದೂ ಅರಳುವದಿಲ್ಲ ಇನಿಯಾ
ಬಿರಿದ ಮನಸು ಮತ್ತೆ ಒಂದಾಗುವುದೇ ಹೇಳು ನೀನು
ಉಸಿರಿಲ್ಲದ ದೇಹ ಬೆಂದ ನೋವಲಿ ನರಳುವದಿಲ್ಲ ಇನಿಯಾ
ಮುರಿದು ಬಿದ್ದ ಸೂರು ಮನೆಗೆ ಆಧಾರವಲ್ಲ ಎಂದಿಗೂ
ಜಾರಿ ಹೋದ ಸಮಯ ಮತ್ತೆ ತೆರಳುವದಿಲ್ಲ ಇನಿಯಾ
ರೆಕ್ಕೆ ಮುರಿದ ಕನಸುಗಳು ಹಾರಲಾರದೆ ನೊಂದು ಚಡಪಡಿಸಿವೆ
ಸೋತು ಸುಣ್ಣವಾಗಿ ಹೋದ ಭಾವಗಳೆಲ್ಲ ಕೆರಳುವದಿಲ್ಲ ಇನಿಯಾ
ಒಲವಿನ ಒಂದು ಜೇನ ಹನಿಗಾಗಿ ಕಾದಿದ್ದಳು ಬೇಗಂ
ಮಡುಗಟ್ಟಿದ ನೋವೆಲ್ಲ ಕಣ್ಣ ಹನಿಯಾಗಿ ಉರುಳುವದಿಲ್ಲ ಇನಿಯಾ
ಹಮೀದಾಬೇಗಂ ದೇಸಾಯಿ.