ಮುಂದಿನ ಭವಿಷ್ಯವನ್ನು ಉಜ್ವಲ ಮಾಡಲೆಂದು ತಾಯಿ ಮಮತೆಯನ್ನೇ ಬದಿಗಿಟ್ಟು ಅನಾಥಾಶ್ರಮದಲ್ಲಿ ಮಕ್ಕಳನ್ನು ಬಿಟ್ಟ ಸುಮತಿಗೆ ಒಂಟಿಯಾಗಿ ಜೀವನ ಸಾಗಿಸುವುದು ಅಷ್ಟು ಸುಲಭವೇನಿರಲಿಲ್ಲ. ಚಿಕ್ಕ ವಯಸ್ಸಿನಲ್ಲಿಯೇ ವಿಧವೆಯಾದವಳು. ಅವಳಿಗೆ ಗಂಡನಿಲ್ಲ ಎಂಬುದನ್ನು ಅರಿತಾಗ ನೆರೆ ಹೊರೆಯವರು ತೀರಾ ನಿಕೃಷ್ಟವಾಗಿ ಕಾಣದೊಡಗಿದರು. ಅವಳು ಕೆಲಸಕ್ಕೆಂದು ಹೊರಡುವಾಗ, ಅಕ್ಕ ಪಕ್ಕದವರು ಹೊರಗೆ ಹೋಗುವ ಸಮಯದಲ್ಲಿ ಅವಳ ಮುಖ ನೋಡಿದರೆ “ನೀನು ಗಂಡನನ್ನು ಕಳೆದುಕೊಂಡ ಮುಂಡೆ… ನಾವೆಲ್ಲಾದರೂ ಹೊರಗೆ ಹೊರಟಾಗ ನಿನ್ನ ದರ್ಶನವಾಗಕೂಡದು….ನಾವು ಹೊರಗೆ ಹೊರಡುವಾಗ ಬಂದು ನಿನ್ನ ಮುಖ ತೋರಿಸಬೇಡ…. ಅಪಶಕುನ”…ಎಂದು ಹೇಳಿ ಹಿಯಾಳಿಸುತ್ತಿದ್ದರು. ಅವರು ಹೇಳುವ ಈ ಮಾತುಗಳನ್ನು ಅರಗಿಸಿಕೊಳ್ಳಲು ಸುಮತಿಗೆ ಸಾಧ್ಯವಾಗುತ್ತಿರಲಿಲ್ಲ. ತನ್ನದಲ್ಲದ ತಪ್ಪಿಗೆ ವಿನಾಕಾರಣ ಹೀಗೆ ಅಕ್ಕಪಕ್ಕದವರು ತನ್ನನ್ನು ದೂಷಿಸುವುದು ಅವಳ ನೋವಿಗೆ ಕಾರಣವಾಗುತ್ತಿತ್ತು. ಮುಖವನ್ನು ಸೆರಗಿನಿಂದ ಮರೆಮಾಡಿಕೊಂಡು ಕಣ್ಣೀರಿಡುತ್ತಾ ಮನೆಯ ಒಳಗೆ ಹೋಗಿ ಶ್ರೀ ಕೃಷ್ಣನನ್ನು ನೆನೆದು ಮನಸ್ಸು ಹಗುರವಾಗುವವರೆಗೂ ಅಳುತ್ತಿದ್ದಳು. ಅಕ್ಕ ಪಕ್ಕದವರು ಹೊರಗೆ ಹೋದ ನಂತರವೇ ಅವಳು ಕೂಲಿ ಕೆಲಸಕ್ಕೆ ಮನೆಯಿಂದ ಆಚೆ ಬರಬೇಕಿತ್ತು. ಮನೆಯಿಂದ ಹೊರಡುವಾಗ ಸೀರೆಯ ಸೆರಗನ್ನು ತಲೆಯ ಮೇಲೆ ಹೊದ್ದುಕೊಂಡು ತನ್ನ ಮುಖ ಯಾರಿಗೂ ಕಾಣದಂತೆ ಮರೆಮಾಚುವಳು. ಕೆಲಸ ಮಾಡುವಲ್ಲಿ ಹೋದಾಗ ತಡವಾಯಿತೆಂದು ಅಲ್ಲಿನ ಮೇಸ್ತ್ರಿಗಳಿಂದ ಬೈಗುಳ ಕೇಳಬೇಕಾಗಿ ಬರುತ್ತಿತ್ತು. ಒಂದೆಡೆ ಗಂಡನ ಮರಣ, ಇನ್ನೊಂದೆಡೆ ಮನಸ್ಸಿಲ್ಲದಿದ್ದರೂ ಬಲವಂತವಾಗಿ ಮಕ್ಕಳಿಂದ ದೂರವಾಗಿ ಬದುಕುತ್ತಿರುವ ನೋವು ಮನಸ್ಸನ್ನು ಹಿಂಡುತ್ತಿರುವಾಗ ಹೀಗೆ ನೆರೆಹೊರೆಯವರ ಚುಚ್ಚು ನುಡಿಗಳು ಶೂಲದಂತೆ ಅವಳನ್ನು ಇರಿಯುತ್ತಿದ್ದವು. 

ಆದರೂ ಮಕ್ಕಳಿಗಾಗಿ ಎಲ್ಲವನ್ನೂ ಸಹಿಸಿ ಬದುಕುವುದನ್ನು ರೂಢಿಸಿಕೊಳ್ಳಬೇಕಿತ್ತು. ಬೆಳಗ್ಗೆ ಬೇಗನೇ ಎದ್ದು ನಿತ್ಯಕರ್ಮಗಳನ್ನು ಮುಗಿಸಿ ದೇವರ ಪೂಜೆ ಮಾಡಿದ ನಂತರ ಅಡುಗೆ ಮಾಡಿ ತೋಟಕ್ಕೆ ಹೋಗಲು ಊಟದ ಡಬ್ಬಿಯನ್ನು ತಯಾರು ಮಾಡಿಕೊಂಡು ಬಾಗಿಲು ತೆರೆದು ನೆರೆ ಹೊರೆಯವರು ಹೊರಗೆ ಯಾರೂ ಇಲ್ಲ ಎನ್ನುವುದನ್ನು ಖಾತ್ರಿ ಮಾಡಿಕೊಂಡು ಮನೆಯಿಂದ ಆಚೆ ಇಳಿಯುತ್ತಿದ್ದಳು. 

ದಾರಿಯಲ್ಲಿ ನಡೆಯುವಾಗ ಸೀರೆಯ ಸೆರಗನ್ನು ಮೈತುಂಬ ಹೊದ್ದುಕೊಂಡು ತಲೆತಗ್ಗಿಸಿ ನೆಲವನ್ನು ನೋಡುತ್ತಾ ಹೆಜ್ಜೆ ಹಾಕುವಳು. ದಾರಿಯಲ್ಲಿ ಕೆಲವು ಪುಂಡಪೋಕರಿಗಳು ಛೇಡಿಸಿ ಲೇವಡಿ ಮಾಡಿದಾಗ ಮೈಯೆಲ್ಲಾ ಹಿಡಿಯಾಗಿ ಮಾಡಿಕೊಂಡು ಮುದುರಿ ಮುನ್ನಡೆಯುವಳು. ಪುಂಡ ಪೋಕರಿಗಳು ರಸ್ತೆ ಬದಿಯಲ್ಲಿ ಇರುವುದನ್ನು ಕಂಡು ದಾರಿಯಲ್ಲಿ ನಡೆಯುವಾಗ ಹೆದರುವಳು. ಅವರ ಅಸಭ್ಯ ಅಸಹ್ಯ ಹುಟ್ಟಿಸುವಂತಹ ಪದಗಳ ಪ್ರಯೋಗಳು ಅವಳಿಗೆ ಇರಿಸು ಮುರಿಸು ಉಂಟುಮಾಡುತ್ತಿದ್ದವು. ಅವರ ಮುಂದೆ ವಿವಸ್ತ್ರಳಾಗಿ ನಡೆಯುತ್ತಿರುವೆನೇನೋ ಎನಿಸುವಷ್ಟು ಕುಗ್ಗಿಹೋಗುವಳು. ಇದೆಲ್ಲವನ್ನೂ ದಾಟಿ ಕೆಲಸ ಮಾಡುವೆಡೆಗೆ ಹೋದರೆ ಅಲ್ಲಿಯೂ ಹದ್ಧಿನಂತಹ ಕಣ್ಣುಗಳು ಅವಳು ಉಟ್ಟ ಸೀರೆಯೊಳಗಿಂದಲೂ ಅವಳ ಶರೀರವನ್ನು ಕಂಡಂತೆ ನೋಡುತ್ತಿದ್ದವು. ಅವರ ದೃಷ್ಟಿ ತನ್ನ ಮೇಲೆ ಹರಿದಾಡಿದಾಗ ಕೆಲಸ ಮಾಡಲು ಅವಳಿಗೆ ಬಹಳ ಕಷ್ಟಕರವಾಗಿ ತೋರುತ್ತಿದ್ದು ಮನದಲ್ಲಿ ಕೃಷ್ಣನನ್ನು ನೆನೆದುಕೊಂಡು ತನ್ನ ಸಂಕಷ್ಟಗಳನ್ನು ಹೇಳಿಕೊಳ್ಳುತ್ತಿದ್ದಳು. ಎಲ್ಲರಿಂದಲೂ ನನ್ನನ್ನು ಕಾಪಾಡು ತಂದೆ ಎಂದು ಪ್ರಾರ್ಥಿಸುತ್ತಿದ್ದಳು. ಪ್ರತಿಕ್ಷಣವೂ ಮುಳ್ಳಿನ ಮೇಲೆ ನಡೆಯುವಂತೆ ಇತ್ತು ಅವಳ ಜೀವನ. ಇತ್ತ ಅವಳ ಸಂಬಂಧಿಕರಲ್ಲಿ ಇತರ ಪುರುಷರು ಕೂಡ ಅವಳ ಅಸಹಾಯಕ ಪರಿಸ್ಥಿತಿಯನ್ನು ದುರುಪಯೋಗ ಪಡಿಸಿಕೊಳ್ಳಲು ಹವಣಿಸುತ್ತಿದ್ದರು.

ಅವಳ ತೀರಾಹತ್ತಿರದ ಸಂಬಂಧಿಯೊಬ್ಬರು ತಾವು ವಿವಾಹಿತರಾಗಿದ್ದರೂ ಕೂಡಾ, ನೀನು ನನ್ನ ಜೊತೆ ಸಂಬಂಧ ಇಟ್ಟುಕೊಳ್ಳುವುದಾದರೆ ನಿನ್ನನ್ನು ಹಾಗೂ ಮಕ್ಕಳನ್ನು ಬೇರೆ ಒಂದು ಮನೆ ಮಾಡಿ ಅಲ್ಲಿ ಇಟ್ಟು ನಿನಗೆ ಯಾವುದೇ ಕುಂದು ಕೊರತೆಗಳಾದಂತೆ ರಾಣಿಯಂತೆ ನಿನ್ನನ್ನು ನೋಡಿಕೊಳ್ಳುವೆ.

ದಯವಿಟ್ಟು ನನ್ನ ಮನದ ಇಂಗಿತವನ್ನು ಪೂರೈಸು ಎಂದು ದಂಬಾಲು ಬೀಳುತ್ತಿದ್ದರು. ಇಂತಹ ಮಾತುಗಳನ್ನು ಸ್ವತಃ ತನ್ನ ಸಂಬಂಧಿಕರಿಂದಲೇ ಕೇಳುವಾಗ ಭೂಮಿಯು ಬಾಯಿಬಿಟ್ಟು ತನ್ನನ್ನು ನುಂಗಬಾರದೇ ಎಂದು ಪರಿತಪಿಸುವಳು. ಇಂತಹ ಪರಿಸ್ಥಿತಿಗಳಿಗೆ ತನ್ನನ್ನು ಒಡ್ಡಿದ ದೇವರ ಮೇಲೆ ಕೆಲವೊಮ್ಮೆ ಅವಳಿಗೆ ಕೋಪ ಬರುತ್ತಿತ್ತು. ಪರಪುರುಷರು ತನ್ನನ್ನು ಕೆಟ್ಟ ದೃಷ್ಟಿಯಿಂದ ನೋಡಿದಾಗೆಲ್ಲ ತನ್ನನ್ನು ತಾನೇ ಶಪಿಸಿಕೊಳ್ಳುತ್ತಿದ್ದಳು. ನಾನೇಕೆ ಹೆಣ್ಣಾಗಿ ಈ ಪ್ರಪಂಚದಲ್ಲಿ ಹುಟ್ಟಿದ್ದೇನೆ? ಹೆಣ್ಣೆಂದರೆ ಬರಿ ಭೋಗದ ವಸ್ತುವೇ? ಹೆಣ್ಣಾಗಿ ಬದುಕುವುದು ಘೋರ ಶಾಪವೇ? ಅದರಲ್ಲೂ ಗಂಡಿನ ಆಶ್ರಯವಿಲ್ಲದ ಹೆಣ್ಣು ಈ ಪ್ರಪಂಚದಲ್ಲಿ ಬದುಕಲು ಸಾಧ್ಯವಿಲ್ಲವೇ? ಎಂದು ತನ್ನನ್ನು ತಾನೇ ಪ್ರಶ್ನಿಸಿಕೊಳ್ಳುತ್ತಿದ್ದಳು. ಪತಿ ಇದ್ದಾಗ ಜೀವನವು ಇನ್ನೊಂದು ನರಕವಾದರೆ ಪತಿಯ ಮರಣದ ಬಳಿಕ ಈಗ ಸಂಪೂರ್ಣ ನರಕದ ದರ್ಶನವಾಗಿತ್ತು ಅವಳಿಗೆ. ಈ ಕೆಟ್ಟ ಪ್ರಪಂಚದಲ್ಲಿ ತಾನು ಹೇಗೆ ಬದುಕಲಿ? ತನ್ನ ನಾಲ್ಕು ಹೆಣ್ಣು ಮಕ್ಕಳನ್ನು ಈ ಕೆಟ್ಟ ಪ್ರಪಂಚದ ಮಡಿಲಿಗೆ ಹೇಗೆ ಹಾಕಲಿ. ನನ್ನ ಮಕ್ಕಳು ಅನಾಥಾಶ್ರಮದಲ್ಲಿ ಎಂತಹ ಕಷ್ಟಗಳನ್ನು ಅನುಭವಿಸುತ್ತಿರುವರೋ ನಾನಿಲ್ಲದೇ ಎಷ್ಟು ಸಂಕಟ ಪಡುತ್ತಿರುವರೋ ಎಂದು ಯೋಚಿಸುವಾಗ ತನ್ನ ಮೈಯಲ್ಲಿನ ಶಕ್ತಿಯೆಲ್ಲಾ ಸೋರಿ ಹೋಗುವಂತೆ ಸುಮತಿಗೆ ಭಾಸವಾಗುತ್ತಿತ್ತು.

ಎಷ್ಟೋ ಬಾರಿ ಗುರುವಾರ ಸಕಲೇಶಪುರದ ಸಂತೆಗೆ ಹೋಗುವ ಸಮಯದಲ್ಲಿ ಹೇಮಾವತಿ ನದಿಯ ಮೇಲೆ ಕಟ್ಟಿರುವ ರೈಲ್ವೆ ಸೇತುವೆಯನ್ನು ದಾಟುವಾಗ ತನ್ನ ಪುಟ್ಟ ಮಗುವಿನೊಂದಿಗೆ ನದಿಗೆ ಹಾರಿ ಪ್ರಾಣ ಕಳೆದುಕೊಂಡರೆ ಎನ್ನುವ ಯೋಚನೆಯು ಅವಳ ಮನದಲ್ಲಿ ಆಗಾಗ ಸುಳಿಯುತ್ತಿತ್ತು. ಇನ್ನುಳಿದ ಮೂವರು ಮಕ್ಕಳು ತಾನು ಜೀವಂತವಾಗಿದ್ದರೂ ಕೂಡ ಅನಾಥ ಮಕ್ಕಳಂತೆ ಅನಾಥಾಶ್ರಮದಲ್ಲಿ ಬದುಕುತ್ತಿದ್ದಾರೆ. ಇನ್ನು ತಾನು ಜೀವ ಕಳೆದುಕೊಂಡರೆ ಸಂಪೂರ್ಣವಾಗಿ ಅನಾಥರಾಗುತ್ತಾರೆ ಎನ್ನುವ ಯೋಚನೆ ಅವಳ ಮನಸ್ಸಲ್ಲಿ ಬಂದ ಕೂಡಲೇ ಜೀವವನ್ನು ಕಳೆದುಕೊಳ್ಳುವ ನಿರ್ಧಾರವನ್ನು ಕೈಬಿಡುತ್ತಿದ್ದಳು. ಇಷ್ಟೊಂದು ಕಷ್ಟಪಡಲು ಅಂತಹ ಘೋರ ಪಾಪವನ್ನು ನಾನೇನು ಮಾಡಿದ್ದೇನೆ? ತಾನು ಹೆತ್ತ ಗಂಡು ಮಗನೂ ಜೀವಂತವಾಗಿಲ್ಲ. ಮಗ ಇದ್ದಿದ್ದರೆ ಇಷ್ಟು ಹೊತ್ತಿಗೆಲ್ಲಾ ದೊಡ್ಡವನಾಗಿರುತ್ತಿದ್ದ. ನಾನು ಈ ರೀತಿ ಕಷ್ಟಪಡುವುದನ್ನು ಅವನು ಸಹಿಸುತ್ತಲೇ ಇರಲಿಲ್ಲ. ನನ್ನನ್ನು ಹಾಗೂ ತಂಗಿಯರನ್ನು ಎಷ್ಟೊಂದು ಕಾಳಜಿ ವಹಿಸಿ ನೋಡಿಕೊಳ್ಳುತ್ತಿದ್ದ. ಅವನನ್ನು ಉಳಿಸಿಕೊಳ್ಳದಂತಹ ಮಹಾ ಪಾಪಿ ನಾನು… “ಅಯ್ಯೋ ದೇವರೇ ಪತಿಯನ್ನು ನನ್ನಿಂದ ಕಿತ್ತುಕೊಂಡೆ ಮಗನನ್ನಾದರೂ ನನಗೆ ಉಳಿಸಿಕೊಡಬಾರದಿತ್ತೇ…. ನನ್ನ ಮಗನಿದಿದ್ದರೆ ನಾನು ಹಾಗೂ ನನ್ನ ಹೆಣ್ಣು ಮಕ್ಕಳು ಇಷ್ಟೊಂದು ಕಷ್ಟ ಪಡುತ್ತಿರಲಿಲ್ಲ. ವಾಸಿಸಲು ಸ್ವಂತ ಸೂರಿಲ್ಲ, ರಕ್ಷಣೆಗೆ ಗಂಡನ ನೆರಳಿಲ್ಲ, ಹುಟ್ಟಿದ ಮಗ ಬದುಕುಳಿದಿಲ್ಲ, ಜೊತೆಗೆ ಇತರ ಮಕ್ಕಳೂ ಜೊತೆಯಲ್ಲಿ ಇಲ್ಲ. ನನ್ನ ಜೊತೆ ಇರುವ ಈ ಪುಟ್ಟ ಕೂಸಿಗೆ ಜೊತೆಗೆ ಆಡಲು ಅಕ್ಕಂದಿರು ಇಲ್ಲ. ಇದೆಂತಹಾ ಪರಿಸ್ಥಿತಿಗೆ ನನ್ನನ್ನು ಹಾಗೂ ನನ್ನ ಹೆಣ್ಣು ಮಕ್ಕಳನ್ನೂ ದೂಡಿದೆ ದೇವರೇ!! ಇನ್ನು ನನ್ನ ಮಕ್ಕಳಿಗೂ ನನಗೂ ಯಾರು ದಿಕ್ಕು? ಈ ಎಲ್ಲಾ ಸಂಕಷ್ಟಗಳನ್ನು ದಾಟಿ ಬದುಕುವ ಧೈರ್ಯ ನಮಗೆಲ್ಲರಿಗೂ ಕೊಡು ತಂದೇ ಎಂದು ದೇವರಲ್ಲಿ ಮೊರೆ ಇಡದೇ ಅವಳ ಮುಂದೆ ಅನ್ಯ ಮಾರ್ಗವಿರಲಿಲ್ಲ.


Leave a Reply

Back To Top