ಎ.ಎನ್.ರಮೇಶ್.ಗುಬ್ಬಿ ಅವರ ಕವಿತೆ-ಜಗದ ಜರೂರತ್ತಿದು ಬಾಸು.!

ಮನ್ನಿಸಿ, ಆದರಿಸಿ ಮಮಕಾರ ತೋರಿಸಿ
ಕನಿಕರಿಸಿ ಕೊಟ್ಟು ಕೀಳಾಗುವುದಕಿಂತ
ಕೇಳಿಸಿಕೊಳ್ಳದೆ, ಕಿವುಡಾಗಿ, ಕಡೆಗಣಿಸಿ
ಕೊಡದೆ ಕಡೆಯಾಗುವುದೆ ಸಲೀಸು.!

ಜನರ ಕಷ್ಟನಷ್ಟಗಳಿಗೆ ಅನುಕಂಪ ಸ್ಫುರಿಸಿ
ಸಹಕರಿಸಿ ಜೊತೆಯಾಗದಿದ್ದರೂ ತಪ್ಪಿಲ್ಲ
ಕುಹಕ ನಿಂದನೆಗಳ ಸುರಿಸದಿರೆ ಸಾಕು
ಧರಿಸಿ ಕೆಟ್ಟ ಕುತೂಹಲದ ಚಾಳೀಸು.!

ಧರೆಗೆ ದೊರೆಯಾಗಬೇಕೆಂದು ಬಯಸಿ
ಹನಿ ಧಾರೆಯಾಗದಿದ್ದರು ಪರವಾಗಿಲ್ಲ
ಹೊರೆಯಾಗದಿದ್ದರೆ, ಕೊರೆಯಾಗದಿದ್ದರೆ
ಬರೆಯಾಗದಿದ್ದರೆ ಸಾಕದುವೆ ಶಭಾಷು.!

ಊರಿಗೆ ಬೆಳಕಾಗುವೆನೆಂದು ಹಂಬಲಿಸಿ
ಕೊನೆಗೆ ಕನಿಷ್ಟಕಿರಣವಾಗದಿದ್ದರೂ ಚಿಂತಿಲ್ಲ
ಹುಚ್ಚಾಗಿ ಕಿಚ್ಚಾಗದಿದ್ದರೆ, ಕಾಳ್ಗಿಚ್ಚಾಗದಿದ್ದರೆ
ಬೆಂಕಿಯಾಗದಿದ್ದರೆ ನೀ ನಿಜಕ್ಕೂ ಭೇಷು.!

ಅರಿತುಕೋ ಜಗದ ಜರೂರತ್ತಿದು ಬಾಸು
ಕಳೆದುಕೊಳ್ಳದಿರೆಂದು ಮೈಮನದ ಹೋಶು
ಮರೆತರೆ ಮೆರೆದರೆ ಖಂಡಿತಾ ನೀ ನಪಾಸು
ವಾಸ್ತವಕೇಕೆ ಭ್ರಮೆ ಸುಳ್ಳುಗಳ ಮಾಲೀಷು?

ಇರದಿದ್ದರೆ ಸಾಕು ನಮ್ಮೆಲ್ಲರಲೂ ಎಂದು
ಅಧಿಕಪ್ರಸಂಗತನದಿ ಹದಗೆಡಿಸುವ ಜೋಶು.!
ಚತುರರಿಗಿಂತಲೂ ಸಮಚಿತ್ತದವರಿಗಾಗಿಂದು
ಸಮಾಜ ನಡೆಸುತಿದೆ ಎಡಬಿಡದೆ ತಲಾಷು.!


Leave a Reply

Back To Top