ದೀಪ ಜಿ ಎಲ್ ಅವರ ಕವಿತೆ-ಅಮ್ಮ

ಪದಗಳ ಪೋಣಿಸಿದರು ಸಾಲುತ್ತಿಲ್ಲ
ಶಬ್ದಗಳಿಗೆ ವ್ಯಾಖ್ಯಾನ ಸಿಗುತ್ತಿಲ್ಲ
ನಿನ್ನ ವರ್ಣಿಸುವಷ್ಟು ಜ್ಞಾನಿ ನಾನಲ್ಲ
ಅಮ್ಮ ಜಗದಿ ನಿನಗೆ ಸಾಟಿ ಇಲ್ಲ

ನವಮಾಸ ಗರ್ಭದಿ ಹೊತ್ತು
ಬಚ್ಚಿಟ್ಟು ತಿನಿಸಿ ತುತ್ತು
ಕರುಳಬಳ್ಳಿ ನಿನಗೆ ಮುತ್ತು
ಋಣ ತೀರಿಸಲು ಸಾಧ್ಯವೇ ಹೊತ್ತು(ಗಳಿಗೆ)

ಮರ ತಬ್ಬಿದ ಬಳ್ಳಿಯಾಗಿರುವೆ
ಗುಟುಕು ತಿನ್ನುವ ಗುಬ್ಬಿಯಾಗಿರುವೆ
ಹಸುವರಸಿ ಬರುವ ಕರುವಾಗಿರುವೆ
ನಿನ್ನ ರೂಪದ ಛಾಯೆಯಾಗಿರುವೆ

ನಿನ್ನ ಮಡಿಲಿನ ಸ್ವರ್ಗ ಎಲ್ಲಿಹುದಮ್ಮ
ಮಮತೆಯ ಮಡಿಲು ಸಿಗುವುದೆನಮ್ಮ
ಮತ್ತೆ ಮಗುವಾಗುವಾಸೆ ನನ್ನಮ್ಮ
ಮಡಿಲ ತೊಟ್ಟಿಲಲ್ಲಿ ಮಲಗಿಸಿ ಜೀಕಮ್ಮ

ನೆಮ್ಮದಿಯ ಬೀಡು ಅದಮ್ಮ
ಚಿಂತೆಗಳಿಲ್ಲದ ನಿಲ್ದಾಣವಮ್ಮ
ವೈಭವವಿಲ್ಲದ ಜಾತ್ರೆಯ ತೇರಮ್ಮ
ಅಲಂಕಾರವಿರದ ಪಲ್ಲಕ್ಕಿ ನಿನ್ನ ಮಡಿಲಮ್ಮ

ಕಷ್ಟವ ಸಹಿಸಿ ನಗುವ ಧಾತೆ
ಮಕ್ಕಳ ನೋವ ಮರೆಸುವ ಮಾತೆ
ಕರುಳೊಡತಿ ನೀ ಕರುಣಾಮಯಿ
ಧರೆಯ ದೇವಿ ಶರಣು ತಾಯಿ


3 thoughts on “ದೀಪ ಜಿ ಎಲ್ ಅವರ ಕವಿತೆ-ಅಮ್ಮ

  1. ಅಲಂಕಾರವಿಲ್ಲದ ಪಲ್ಲಕ್ಕಿ ನಿನ್ನ ಮಡಿಲಮ್ಮ ಚೆಂದದ ರೂಪಕ

Leave a Reply

Back To Top