“ಹೊಸ ಬಾಳಿಗೆ ಹೊಸ ಮೆರುಗು” ವಿಶೇಷ ಲೇಖನ ವಿಮಲಾರುಣ ಪಡ್ಡಂಬೈಲು

ಪ್ರಕೃತಿಯ ಸೊಬಗಿಗೆ ಇಬ್ಬನಿಯ ಹನಿ ಮುತ್ತಿಡುತ್ತಾ ಮೈ ಮನಗಳಿಗೆ ಚಳಿಯ ಮುದವನಿಟ್ಟು ರವಿಯ  ನಸು ಬೆಚ್ಚನೆಯ ಎಳೆ ಬಿಸಿಲ ಹಿತ, ತಂಪಾದ ಗಾಳಿ, ಹಣ್ಣೆಲೆಗಳು ಮೆಲ್ಲ ಮೆಲ್ಲನೆ ಉದುರುತ್ತ ಸುಂದರ ಸೊಬಗಿನಿಂದ ಪ್ರಕೃತಿಯೇ ಹೊಸ ವರ್ಷದ ಆಗಮನಕ್ಕೆ ಸಜ್ಜಾಗಿ ತಲೆಯೆತ್ತಿ ನಿಂತಿದೆ. ಹಿಂದಿನ ಮತ್ತು ಇಂದಿನ ಪ್ರಕೃತಿಯ ಸೊಬಗಲ್ಲಿ ದೊಡ್ಡ ವ್ಯತ್ಯಾಸ ಕಾಣದಿದ್ದರು ಆಚರಣೆಯಲ್ಲಿ ಢಾಳಾಗಿ ಅದನ್ನು ಕಾಣಬಹುದು. ಸುಮಾರು ಮೂವತ್ತು ವರ್ಷದ ಹಿಂದೆ ಬಾಲ್ಯದತ್ತ ಚಿತ್ತ ಹರಿದಾಗ ಅಂದಿನ ಹೊಸವರ್ಷದ ಉತ್ಸಾಹ, ಕಾತರತೆ ಅಹಾ..! ಅದೆಂತಹ ಸಂಭ್ರಮ! ಬರೆಯುವ ಪುಸ್ತಕದ ಮಧ್ಯ ಪುಟದ ಹಾಳೆಯನ್ನು ಜೋಪಾನವಾಗಿ ತೆಗೆದು ನಾಲ್ಕು ಭಾಗ ಮಾಡಿ ಬರೆಯುವ ಪರಿ “ಕಸಗುಡಿಸಿದ ಮೇಲೆ ಕಸವಿರಬಾರದು, ಊಟ ಮಾಡಿದ ಮೇಲೆ ಹಸಿವಿರಬಾರದು, ಸ್ನೇಹ ಮಾಡಿದ ಮೇಲೆ ಉಸಿರಿರುವ ತನಕ ಬಿಡಬಾರದು” ಚೀಟಿಯಲ್ಲಿ ಪುಟ್ಟ ಕೈಗಳಲಿ  ಚೆಂದದ ಹೂವಿನ ಚಿತ್ರ ಬಿಡಿಸಿ ದುಂಡಾಗಿ ಒಲವಿನ ಪದತೋರಣ ಕಟ್ಟಿ  ಅದರ ಮೇಲೆ ಪುಟ್ಟದಾದ ಪೆಪ್ಪರ‍್ಮೆಂಟ್ ಇಟ್ಟು ಆತ್ಮೀಯ ಗೆಳತಿಯರಿಗೆ ಕೊಟ್ಟು, ಅವರು ಕೊಟ್ಟದ್ದನ್ನು ಓದಿ  ಪೆಪ್ಪರ‍್ಮೆಂಟ್ ತಿಂದು ಸಂಭ್ರಮಿಸುವುದು. ಇಂತಹ  ಉಕ್ತಿಗಳ ಪುಸ್ತಕವೇ ನಮ್ಮ ಬಳಿ ಇರುತ್ತಿತ್ತು. ಎನಿಮಿಗಳಿಗೆ ಬರೆಯುವಂತದ್ದು ಬೇರೆಯೇ. ‘ಗಾಜಿನ ಲೋಟ ಚೂರಾದರೆ ಮತ್ತೆ ಜೋಡಿಸಲಾಗದು, ಸ್ನೇಹ ಮುರಿದ ಮೇಲೆ ಮತ್ತೆಂದೂ ಕೂಡಿಸಲಾಗದು” ಹೀಗೆ ಚೀಟಿಯಲ್ಲಿ ರವಾನೆಯಾಗುವ ಶುಭಾಶಯ, ನಂತರದ ದಿನಗಳಲ್ಲಿ ಗ್ರೀಟಿಂಗ್ ಕಾರ್ಡ್ ಗಳಲ್ಲಿ ಅಂತರಂಗದ  ಅನುರಾಗದ ಪದಗಳು ಮಿಳಿತವಾಗಿರುತಿತ್ತು.  ತದನಂತರ ಗ್ರೀಟಿಂಗ್ ನಲ್ಲಿಯೇ ಅಚ್ಚಾದ ಸಂದೇಶಗಳ ಮುಖಾಂತರ ಕಾರ್ಡ್ ಕೊಟ್ಟು ಹೊಸವರ್ಷವನ್ನು ಸಂಭ್ರಮಿಸುತ್ತಿದ್ದ ಆ ಕಾಲ ಈಗ ಮರೆಯಾಗಿ ಇಂದು ಪಟಾಕಿ ಸಿಡಿಸುವ ಮುಖಾಂತರ ಪಾರ್ಟಿ, ಮೋಜು-ಮಸ್ತಿ ಗಿಫ್ಟ್ ಕೊಡುವುದು ಹಾಗೂ  ದೂರದಿಂದಲೇ ಮೊಬೈಲ್ ನಲ್ಲಿ ಸಂದೇಶ ಕಳುಹಿಸುತ್ತಾ ಹರ್ಷ ಪಡುತ್ತಿದ್ದೇವೆ. ಅಂದಿನ ಹಸ್ತಾಕ್ಷರದಲ್ಲಿ ಮೂಡುವ ಪದತೋರಣದ ಮಧುರ ಭಾವದ  ಶುಭಹಾರೈಕೆಗಳು ಇನ್ನೆಂದೂ ಇಂದಿನ ಜಾಗಕ್ಕೆ ಬಂದು ನೆಲೆಯಾಗುವುದು ಅಸಾಧ್ಯ.

ಹಬ್ಬ ಹರಿದಿನಗಳಿಗೆ ನಾವು ಎಷ್ಟು ಮಹತ್ವವನ್ನು ನೀಡುತ್ತೇವೋ ಹಾಗೆಯೇ  ಈ ಹೊಸವರ್ಷ ಆಚರಣೆಯನ್ನು ಕೂಡ ಬಹಳ ಸಂಭ್ರಮ  ಸಡಗರದಿಂದ ಆಚರಿಸುತ್ತೇವೆ. ಭಾರತೀಯರಿಗೆ ಯುಗಾದಿ ಹೊಸವರ್ಷದ ಕಂಪು ಚೆಲ್ಲಿದರು ಜನವರಿ ಒಂದನ್ನು ಸ್ವಾಗತಿಸುವ ಪರಿಯೇ ಭಿನ್ನವಾಗಿರುತ್ತದೆ. ಸೂರ್ಯ, ಚಂದ್ರ, ಗಾಳಿ, ನೀರು ಎಲ್ಲವು ಎಂದಿನಂತಿದೆ. ಆದರೂ ನಾವು ಉತ್ಸುಕರಾಗಿ ಭಾವುಕರಾಗುತ್ತೇವೆ.   ಜನವರಿ ಒಂದು  ಈಗ ತನ್ನ  ಹಿಂದಿನ ಸರಳತೆಯನ್ನು ಬದಿಗಿಟ್ಟು,  ಆಧುನಿಕ ಕಾಲಘಟ್ಟದಲ್ಲಿ   ಆಧುನಿಕತೆಯ ಸ್ಪರ್ಶದೊಂದಿಗೆ ತನ್ನ ಉಳಿವನ್ನು ಉಳಿಸಿಕೊಂಡು ಕಿರಿಯರಿಂದ ಹಿರಿಯರ ತನಕದ ಮನಗಳಿಗೆ ವರುಷದ ಹರುಷದ ಕಂಪು ಸುತ್ತಲು ಹರಡುತ್ತಿದೆ.

ನಿರ್ಧಾರಗಳ ಆಗರವೆಂದೇ ಹೇಳಬಹುದಾದ ಹೊಸ ವರ್ಷದ ಮೊದಲ ದಿನ ಬದುಕಿಗೆ ಪೂರಕವಾಗುವಂತಹ ಹಾಗು ಆರೋಗ್ಯ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ದುಶ್ಚಟ ವ್ಯಸನಿಗಳು, ಮೂಗಿನ ತುದಿಯಲ್ಲಿ ಮುಂಗೋಪ ಇರಿಸಿಕೊಂಡವರು, ಸಾಲ ಸೋಲ ಮಾಡಿ ಆಡಂಬರ ಬದುಕು ನಡೆಸುತ್ತಿರುವವರು, ಹೀಗೇ ಹೇಳುತ್ತಾ ಹೋದರೆ ಹಲವಾರು ಮುಖಗಳು ಸಮಾಜದಲ್ಲಿ ಕಾಣಸಿಗುತ್ತವೆ. ಇವರಲ್ಲಿ ಕೆಲವರು ತಮ್ಮ ಸ್ವಇಚ್ಛೆಯಿಂದ ಮನಸ್ಸನ್ನು ಪರಿವರ್ತನೆ ಮಾಡಿಕೊಂಡು,  ಬೇಡವಾದದ್ದಕ್ಕೆ ಕಡಿವಾಣ ಹಾಕುವ ಸಲಹಾ ದಿನವು ಹೊಸ ವರ್ಷವೇ.  ಅಂತೆಯೇ ಅಹಿತಕರ ಘಟನೆಗಳು, ಸಾವು, ನೋವು, ನಷ್ಟ ಮುಂತಾದವುಗಳನ್ನು ಮರೆಯುವ ಪ್ರಯತ್ನ, ಕಾಡುವ ಚಿಂತೆಗಳನ್ನು ಹತ್ತಿಕ್ಕಿ ಹೊಸ ಆಲೋಚನೆಗಳನ್ನು, ನಿರ್ಧಾರಗಳನ್ನು ಮಾಡುತ್ತಾ ಸಂತೋಷದಿಂದ ಸುಂದರವಾಗಿ ಬದುಕುವ ಪ್ರಯತ್ನಕ್ಕೆ ಹೊಸ ವರ್ಷವನ್ನೇ ವೇದಿಕೆಯಾಗಿಸಿಕೊಳ್ಳುವುದು ಸಹಜ.

ಮನುಷ್ಯನಿಗೆ ಚಿಂತಿಸುವ ಯೋಚಿಸುವ ಶಕ್ತಿ ದೈವದತ್ತವಾಗಿದೆ. ಈ ಚಿಂತನ ಶೀಲತೆಯಿಂದಲೇ ವೈಜ್ಞಾನಿಕವಾಗಿ ವಿಚಾರ ಮಾಡುತ್ತಾ ಪ್ರತಿನಿತ್ಯ ಹೊಸ ಹೊಸ ವಿಶ್ಲೇಷಣೆಗಳನ್ನು ಮಾಡಿ ಹೊಸತನ್ನು ಸಮಾಜಕ್ಕೆ ತಲುಪಿಸುವುದರಲ್ಲಿ ವಿಜ್ಞಾನಿ ವಿದ್ವಾಂಸರ ಹೊಸ ಕೊಡುಗೆಗಳನ್ನು ಶ್ಲಾಘಿಸಲೇಬೇಕು. ಸಂಘ ಜೀವಿಯಾಗಿರುವ ಮಾನವನಿಗೆ ನುಡಿದಂತೆ ನಡೆಯುವ ಜಾಣ್ಮೆ ಮತ್ತು ತಾಳ್ಮೆ ಒಳ್ಳೆಯದನ್ನು ಅನುಷ್ಠಾನಗೊಳಿಸುವ ಮನಸ್ಸು ಆಲದ ಮರದಂತೆ ವಿಶಾಲವಾಗಿದೆ. ಇಂತಹ ಶ್ರೇಷ್ಠ ಮನಸಿರುವ ಮನುಜರು ಇಂದಿನ ದಿನದಲ್ಲಿ ಸಣ್ಣಪುಟ್ಟ ವಿಚಾರಗಳಿಗೂ ಖಿನ್ನರಾಗುತ್ತಿದ್ದಾರೆ. ತಮ್ಮ ಸ್ವಾಸ್ಥ್ಯವನ್ನು ನಿರ್ಲಕ್ಷ್ಯ ಮಾಡುತ್ತಾ ಸದಾ ಮುಂಚೂಣಿಯಲ್ಲಿ ಇರಬೇಕೆಂಬ ಹಂಬಲ ನಾಗರಿಕರಲ್ಲಿ ಕಾಡುತ್ತಿದೆ. ಕೇವಲ ಪ್ರತಿಷ್ಠೆಗಾಗಿ ಹೋರಾಡುತ್ತಿದ್ದಾರೆ. ಆಧುನಿಕತೆಯೊಂದಿಗೆ ಮಾನವೀಯತೆಯನ್ನು ಮರೆಯುತ್ತಿದ್ದಾರೆ. ಬಂಧುತ್ವಗಳು  ಬಿರುಕು ಬಿಡುತ್ತಿವೆ. ವೈಚಾರಿಕತೆಯ ಮಧ್ಯೆ ವಿಚ್ಛೇದನ  ಹೆಚ್ಚಾಗುತ್ತಿದೆ. ಧರ್ಮದ ಹೆಸರಲ್ಲಿ ಶೋಷಣೆ ಹೆಚ್ಚಾಗುತ್ತಿದೆ. ಪರಿಸರ ಮಾಲಿನ್ಯ ಹೆಚ್ಚಾಗುತ್ತಿದೆ. ಭ್ರಷ್ಟಾಚಾರ ತಾಂಡವವಾಡುತ್ತಿದೆ.  ಸಮಾಜದಲ್ಲಿ   ಆಶ್ವಾಸನೆಯ ಮಾತುಗಳು ಮೌಲ್ಯವನ್ನು ಕಳೆದುಕೊಳ್ಳುತ್ತಿದೆ. ಸಂಶಯ ದೃಷ್ಟಿ ಹೆಚ್ಚಾಗುತ್ತಿದೆ, ಇದರಿಂದ ಮನುಷ್ಯರು ದಿನೇ ದಿನೇ ಕುಗ್ಗುತ್ತಿದ್ದಾರೆ. ಹಾಗೆಂದ ಮಾತ್ರಕ್ಕೆ ಹತಾಶರಾಗಬೇಕಿಲ್ಲ. ಇದಕ್ಕೆ ಇಂದೇ ಕಡಿವಾಣ ಹಾಕಿ 2024 ರಲ್ಲಿ ನಾವು ಕಳೆದುಕೊಂಡಿದ್ದನ್ನು 2025 ರಲ್ಲಿ ವೈಚಾರಿಕತೆಯ ನಿಲುವಿನೊಂದಿಗೆ ಮಾನವೀಯ ಮೌಲ್ಯಗಳನ್ನು ಕಟ್ಟಿಕೊಳ್ಳುವ ಪ್ರಯತ್ನ ನಮ್ಮದಾಗಬೇಕು.

ಒಳ್ಳೆಯ ಚಿಂತನೆಗಳನ್ನು ಚಿಂತಿಸುತ್ತಾ ಹಸನ್ಮುಖಿಯಾಗಿ ಕಾರ್ಯನಿರ್ವಹಿಸಿ ನಕರಾತ್ಮಕ ಗುಣಗಳಿಗೆ ಬೆಲೆ ಕೊಡದೆ ಮೌಲ್ಯ ಗುಣ ಧರ್ಮಗಳಿಗೆ ಬೆಲೆ ಕೊಟ್ಟು ಇಲ್ಲದರ ಬಗ್ಗೆ  ಅನಾವಶ್ಯಕವಾಗಿ ಚಿಂತಿಸದೆ ಇದ್ದದರಲಿ ತೃಪ್ತಿಯಾಗಿ ದೊರಕಿದ ಅವಕಾಶ ಸದುಪಯೋಗಪಡಿಸಿಕೊಂಡು ಕ್ರಿಯಾಶೀಲರಾಗಿ, ಆಶಾವಾದಿಯಾಗಿ ತಮ್ಮ ಬಗ್ಗೆ ತಮಗೆ ಆತ್ಮವಿಶ್ವಾಸ ಜಾಗ್ರತವಾಗಿದ್ದರೆ ಪ್ರತಿ ನಿಮಿಷವು ರಸವತ್ತಾದ ಹರುಷದಾ ದಿನವೇ..ಬಾಲ್ಯ ಮತ್ತು ಹರೆಯದಲ್ಲಿ ಸ್ನೇಹಗಟ್ಟಿಗೊಳಿಸಿಕೊಳ್ಳುವ ಹಾಗು ಹರುಷದಲ್ಲಿ ಇರುವ ಇರಾದೆ ಮಾತ್ರ ಹೊಸವರ್ಷದ ಗುರಿಯಾದರೆ,  ಜವಾಬ್ದಾರಿ ಹೇಗಲೇರಿದಾಗ ಸಮಾಜದಲ್ಲಿ ಒಬ್ಬ ಉತ್ತಮ ನಾಗರಿಕರಾಗಿ ಬದುಕಲು ಹೊಸವರ್ಷ ನವಕನಸುಗಳ ಸಾಕ್ಷಾತ್ಕಾರಕ್ಕೆ ಬುನಾದಿಯು ಹೌದು. ಹಾಗಾಗಿ ಕನಸಿನ ಮೆಟ್ಟಿಲನ್ನು ತಾಳ್ಮೆಯಿಂದ ಏರಿ ಗುರಿಯ ಹರುಷ ಮುಗಿಲು ಮುಟ್ಟಲಿ..

————————————

Leave a Reply

Back To Top