ಬದುಕಿನ ಸಂಗಾತಿ
ಶುಭಲಕ್ಷ್ಮಿ ನಾಯಕ
“ಭರವಸೆಯೇ ಬದುಕು”
ಜೀವನವೆನ್ನುವುದು ಹುಟ್ಟು ಸಾವಿನ ಮಧ್ಯದಲ್ಲಿರುವ ಒಂದು ಪಯಣ.ಈ ಪಯಣದ ಹಾದಿಯಲ್ಲಿ ಹಲವಾರು ಕಲ್ಲು ಮುಳ್ಳುಗಳು, ಅನೇಕ ತಿರುವುಗಳು, ಏರು ತಗ್ಗುಗಳು, ಸಮತಟ್ಟಾದ ಪ್ರದೇಶಗಳು, ದುರ್ಗಮ ಕಣಿವೆಗಳು ಕಂದಕಗಳು ಮುಂತಾದ ಎಡರು ತೊಡರುಗಳು ಕಂಡುಬರುತ್ತವೆ. ಇವೆಲ್ಲವನ್ನು ಮೀರಿ, ಸರಿಸಿ, ಏರಿ, ಜಾಗ್ರತೆಯಿಂದ ಪ್ರಯಾಣಿಸಬೇಕಾದುದು ನಮ್ಮೆಲ್ಲ ಮಾನವರ ಹೊಣೆ, ಜವಾಬ್ದಾರಿ, ಕರ್ತವ್ಯ.ಹಾಗಿದ್ದರೆ ದಾರಿ ಸುಗಮವಾಗಿ ಸಮತಟ್ಟಾಗಿದ್ದಾಗ ಪಯಣ ಸುಲಭವೂ ಸರಳವೂ ಆಗಿರುತ್ತದೆ. ಬದುಕೂ ಹಾಗೆಯೇ ಬಹಳ ಸುಂದರವಾಗಿ ಬಹಳ ಸರಳವಾಗಿ ಸುಲಭವಾಗಿ ತೋರುತ್ತದೆ ಆದರೆ ಬದುಕಿನ ಪಯಣದಲ್ಲಿ ತೊಂದರೆಗಳು ಎದುರಾದಾಗ ಮಾತ್ರ ದಾರಿ ಕಠಿಣವಾಗಿ , ವಕ್ರವಾಗಿ ಗೋಚರಿಸಲು ಪ್ರಾರಂಭವಾಗುತ್ತದೆ. ತೊಡಕುಗಳೆಂಬ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿದಾಗ ಬದುಕೆಂದರೆ ಇಷ್ಟೇ ಎಂಬ ಋಣಾತ್ಮಕ ಭಾವನೆ ಮೂಡಿ ವ್ಯಕ್ತಿ , ಹಾಗೂ ವ್ಯಕ್ತಿತ್ವ ಎರಡೂನಾಶವಾಗಲೂ ಬಹುದು. ಈ ವ್ಯಕ್ತಿ ಹಾಗೂ ವ್ಯಕ್ತಿತ್ವ ನಾಶವಾಗದೇ ಧನಾತ್ಮಕಭಾವನೆ ಮೂಡಬೇಕಾದರೆ ಬದುಕಿನಲ್ಲಿ ಭರವಸೆಯ ಪಾತ್ರ ಹಿರಿದು. ನಮ್ಮ ಬದುಕನ್ನು ಹಸನಾಗಿಸಲು ನಮಗೆ ಅವಶ್ಯವಾಗಿರುವಿದು ಬದುಕಿನಲ್ಲಿ ನಮಗಿರುವ ಭರವಸೆ, ಆತ್ಮ ವಿಶ್ವಾಸ , ಆಶಾಭಾವ.
ಮುಳ್ಳೂ ಬೇಕು ಹೂವೂಬೇಕು
ಗಿಡದ ಮುಳ್ಳುಗಳು ತೊಂದರೆ ನೀಡುವಂತೆ ಹೊರನೋಟಕ್ಕೆ ಕಂಡರೂ ಆಮುಳ್ಳುಗಳೇ ಹೂವಿಗೆ ರಕ್ಷಣೆ ನೀಡುವ ರಕ್ಷಕರು. ಅಂತೆಯೇ ನಮ್ಮ ಬದುಕಿನಲ್ಲಿಯ ಬೇಗುದಿ, ನೋವು, ನಲಿವುಗಳು, ನಮ್ಮ ಆತ್ಮ ವಿಶ್ವಾಸವನ್ನು ಬಲಗೊಳಿಸುವ, ನಮ್ಮನ್ನು ರಕ್ಷಿಸುವ ಮುಳ್ಳುಗಳು.ಪೆಟ್ಟುಗಳು ಮೇಲಿಂದ ಮೇಲೆ ಚುಚ್ಚುತ್ತಿದ್ದರೂ, ಬೀಳುತ್ತಿದ್ದರೂ ಅದನ್ನು ತಾಳ್ಮೆಯಿಂದ ತಡೆದುಕೊಳುವ ಶಕ್ತಿ ನಮಗಿರಬೇಕು. ಹಾಗಿದ್ದರೆ ಈ ತಾಳ್ಮೆ ಬರಲು ಹೇಗೆ ಸಾಧ್ಯ? ಖಂಡಿತಾ ಸಾಧ್ಯವಿದೆ. ಹೇಗೆಂದರೆ ಭರವಸೆಯನ್ನು ಕಳೆದುಕೊಳ್ಳದಿದ್ದಾಗ ಸಾಧ್ಯವಾಗುತ್ತದೆ.
ಭರವಸೆ ಎಂದರೇನು?
ಅಚಲವಾದ ನಂಬಿಕೆ, ವಿಶ್ವಾಸ, ಮಾಡಬೇಕೆಂಬ ಛಲ, ಗುರಿಸೇರುವ ದೃಢ ಮನಸ್ಸು, ಇವೆಲ್ಲನ್ನೂ ಒಟ್ಟಾಗಿ ಸೇರಿಸಿ ಭರವಸೆ ಎನ್ನಬಹುದು. ಬದುಕು ಫಲವೀಯಲು ಈ ಭರವಸೆಯ ಪಾತ್ರ ಬಹಳ ಪ್ರಮುಖವಾಗಿದೆ.ಇದು ಮನುಷ್ಯನಲ್ಲಿ ಇರಲೇಬೇಕಾದ ಒಂದು ಉತ್ತಮ ಮೌಲ್ಯ. ನಿನ್ನೆಯ ಇತಿಹಾಸ ಇಂದಿಗೆ ಮಾದರಿಯಾಗಬಹುದು. ಪ್ರಶ್ನೆಗಳಿಗೆ ಉತ್ತರ ಸಿಕ್ಕೀತು. “ನಂಬಿಗೀನಸೋರಿದ್ರ ಬಲವಿಲ್ಲ” ಎಂದ ವರಕವಿ ಬೇಂದ್ರೆಯವರ ಮಾತಿನಂತೆ ನಂಬಿಕೆಯೇ ಇಲ್ಲದಿದ್ದರೆ ಬಲವೂ ಇರದೇಹೋಗಿ ಬದುಕು ದುರಂತದಲ್ಲಿ ಕೊನೆಗೊಳತ್ತದೆ. ಹಾಗಾಗಿ ಭರವಸೆ ಎಂಬುದು ನಮ್ಮ ಮುಂದಿನ ಬದುಕಿಗೆ ಸ್ಪೂರ್ತಿ.
ಬದುಕ ನಾವೆಗೆ ಭರವಸೆಯ ಹುಟ್ಟು
ಬದುಕೆಂಬುದನ್ನು ಒಂದು ನಾವೆಯಾಗಿಸಿಕೊಂಡರೆ ಭೋರ್ಗರೆಯುವ ಸಾಗರ ಬದುಕು ಎದುರಿಸಬೇಕಾದ ದುರಿತ ದುಮ್ಮಾನಗಳು. ಈ ದುರಿತಗಳನ್ನು ದಾಟಿ ನಾವೆ ದಡ ಸೇರಬೇಕಾದರೆ ಹುಟ್ಟನ್ನು ಭರವಸೆಯಲ್ಲಿ ಹಾಕಬೇಕು. ಆಭರವಸೆಯೇ ಬದುಕಿನ ನಗುವಿಗೆ ಕಾರಣವಾಗಿ ಸಂತೋಷ, ಸಂಭ್ರಮ, ಸಾರ್ಥಕತೆಯನ್ನು ತಂದು ಕೊಡುತ್ತದೆ.ದಿನದ ಆರಂಭವನ್ನು ಭರವಸೆಯಲ್ಲಿ ಮಾಡಿದಾಗ ಅದೇ ಭರವಸೆಯಲ್ಲಿ ದಿನದ ಅಂತ್ಯವನ್ನು ಕಾಣುತ್ತೇವೆ ಅದರ ಮಧ್ಯದಲ್ಲಿ ಬರುವ ತೊಡಕುಗಳು ನಗಣ್ಯವಾಗಿರುತ್ತವೆ.
ಭರವಸೆ ಇಲ್ಲದಾಗ ಅನಾಹುತ
ಪತ್ರಿಕೆಗಳಲ್ಲಿ, ಸುದ್ದಿ ವಾಹಿಗಳಲ್ಲಿ ಇಂದು ಕಾಣಸಿಗುವ , ದಿನನಿತ್ಯ ನಮ್ಮ ಸುತ್ತ ನಡೆಯುವ ಆತ್ಮಹತ್ಯೆಯಂತಹ ಅನೇಕ ಕಹಿ ಘಟನೆ ಗಳನ್ನು ನೋಡಿದಾಗ ಕಷ್ಟಗಳಿಗೆ ಹೆದರಿ, ಭರವಸೆಯನ್ನು ಕಳೆದುಕೊಂಡು, ಭರವಸೆಯೇ ಇಲ್ಲದೇ, ಋಣಾತ್ಮಕ ಯೋಚನೆ ಮಾಡಿ ಆತ್ಮಹತ್ಯೆಯಂತಹ ಕ್ರೂರ ಕೆಲಸಗಳಿಗೆ ಕೈ ಹಾಕಿ ಜೀವನದಿಂದ ವಿಮುಖವಾದುದನ್ನು ಕಾಣುತ್ತೇವೆ. ಕಷ್ಟಗಳನ್ನು, ಸೋಲನ್ನು , ಅನುಭವಿಸಲು ಆಗದವರು, ಭರವಸೆಯನ್ನು ಕಳೆದುಕೊಂಡು
ತಮ್ಮ ಬದುಕಿಗೆ ತಾವೇ ಕೊಳ್ಳಿಯಿಟ್ಟುಕೊಂಡ ಉದಾಹರಣೆಗಳು ಇತಿಹಾಸದಲ್ಲಿ ಸಿಗುತ್ತವೆ.
ಭರವಸೆಯನ್ನು ಕಳೆದುಕೊಳ್ಳಬೇಡ
ಬದುಕು ನಂದನವನವಾಗಲು, ಸಾರ್ಥಕತೆ ಪಡೆಯಲು ಭರವಸೆ ಬೇಕೇಬೇಕು. ಅದು ಇರುವುದರಿಂದಲೇ ಮಾನವ ಬದುಕುತ್ತಿರುವುದು. ನಿನ್ನೆ ಗಳ ನೋವುಗಳನ್ನು ಉಂಡು ನಾಳೆಗಳ ಭರವಸೆಯಲಿ ಇಂದು ಬದುಕುತ್ತಿರುವುದು ಬದುಕಿಗೆ ಅನಿವಾರ್ಯ. ಅದೆಂತ ಕ್ಲಿಷ್ಟಕರ ಪರಿಸ್ಥಿತಿಯಲ್ಲೂ ಭರವಸೆಯಲ್ಲಿ ಬದುಕಿದ ಕಲಾಂ, ಭವೇಶ್ ಭಾಟಿಯಾ, ವೀಣಾ ಧರಿ, ಯಂತಹ ಅನೇಕ ಮಹಾನ್ ಸಾಧಕರಿಗೆ ಸ್ಪೂರ್ತಿಯಾಗಿದ್ದು ಭವಿಷ್ಯದ ಮೇಲೆ ಅವರಿಟ್ಟುಕೊಂಡ ಭರವಸೆಯೇ ಕಾರಣ. ಭರವಸೆಯಲ್ಲಿ ಹಾಕಿದ ಹೆಜ್ಜೆಗಳು ಹಿಂದಕ್ಕೆ ಬರಲಾರವು. ದಣಿವನ್ನು ಸಹಿಸುತ್ತವೆ, ಸೋಲನ್ನು ಅನುಭವಿಸಿ ಅದರಿಂದ ಪಾಠ ಕಲಿಯುತ್ತವೆ. ಹೀಗೆ ಭರವಸೆಯನ್ನು ಕಳೆದು ಕೊಳ್ಳಬಾರದು.
ತಿರುವುಗಳ ಬಗ್ಗೆ ಜಾಗ್ರತೆ
ತಿರುವುಗಳಿಲ್ಲದ ದಾರಿಗಳಿಲ್ಲ. ಚಿಕ್ಕಪುಟ್ಟ ತಿರುವು, ಏರು ಪೇರುಗಳು ಇದ್ದೇ ಇರುತ್ತವೆ. ಹಾಗೆಂದ ಮಾತ್ರಕ್ಕೆ ದಾರಿಯನ್ನು ಕ್ರಮಿಸುವುದನ್ನೇ ಬಿಡುವುದಲ್ಲ. ಬದುಕೂ ಹಾಗೆಯೇ ನಾವು ಬಯಸದ, ಕಾಣದ ಅದೆಷ್ಟೋ ಚಿಕ್ಕ ಪುಟ್ಟ ಅಥವಾ ದೊಡ್ಡ ತಿರುವುಗಳನ್ನು ಒಳಗೊಂಡಿದೆ. ಈ ತಿರುವು ಒಬ್ಬರಿಂದ ಒಬ್ಬರಿಗೆ ಭಿನ್ನವಾಗಿರುತ್ತದೆ.ಅಲ್ಲದೇ ಅದನ್ನು ಸ್ವೀಕರಿಸುವ ರೀತಿಕೂಡ ಒಬ್ಬರಿಂದ ಒಬ್ಬರಿಗೆ ಭಿನ್ನವಾಗಿರುತ್ತದೆ. ಕೆಲವರು ತಿರುವುಗಳನ್ನು ಧನಾತ್ಮಕವಾಗಿ ಇನ್ನು ಕೆಲವರು ಋಣಾತ್ಮಕವಾಗಿ ತೆಗೆದುಕೊಳ್ಳುತ್ತಾರೆ. ಈ ತಿರುವುಗಳು ನಮ್ಮಲ್ಲಿ ಚಿಕ್ಕ- ಪುಟ್ಟ ಬದಲಾವಣೆಯನ್ನು ತರುವುದರೊಂದಿಗೆ ಬದುಕಿನಲ್ಲಿ ಹೊಸ ಭರವಸೆಯನ್ನು, ವಿಶ್ವಾಸವನ್ನು ಮೂಡಿಸುವಂತಾಗ ಬೇಕು. ತಿರುವುಗಳಲ್ಲಿ ಅತೀ ಎಚ್ಚರಿಕೆಯಿಂದ ಸಾಗಬೇಕಾದ ಅವಶ್ಯಕತೆ ಇದೆ. ಈ ಸಂದರ್ಭದಲ್ಲಿ ತಾಳ್ಮೆ, ಸಂಯಮ, ಧೈರ್ಯ, ಆಶಾಭಾವ ನಮ್ಮೊಂದಿಗೆ ಇರಬೇಕು.
ಹೊಸತನದ ಭರವಸೆ
ಬದುಕೆಂದರೆ ನಿಂತ ನೀರಲ್ಲ ಸದಾ ಹರಿಯುವ ಸ್ವಚ್ಛ ತೊರೆಯಂತೆ ಹೊಸತನವನ್ನು ಅನುಕ್ಷಣ ಅನುದಿನ ಪಡೆಯುತ್ತಾ ಅದನ್ನು ಹಂಚುತ್ತಾ ಸಾಗಬೇಕು. ಭರವಸೆಯಲ್ಲಿ ಸಾಗಬೇಕಾದರೆ ಮನಸ್ಸನ್ನು ಆ ಕಾರ್ಯದೆಡೆ ಅಣಿಗೊಳಿಸಿ ನಿರಂತರ ಪ್ರಯತ್ನ ಶೀಲರಾದಾಗ ಮಾತ್ರ ಗುರಿಯನ್ನು ತಲುಪಬಲ್ಲೆವು. ಅಂದರೆ ಬದುಕಿನ ಭರವಸೆಗಳಿಗೆ ಸ್ಪೂರ್ತಿ ನಿರಂತರ ಪ್ರಯತ್ನಿಸುವ ಮನಸ್ಥಿತಿ. ಹಳೆಯ ಕೊರಗುಗಳನ್ನು ಬಿಟ್ಟು ಆ ದುರಿತಗಳ ಅನುಭವದಲ್ಲಿ ಹೊಸ ಬಾಳನ್ನು ಕಟ್ಟುತ್ತೇನೆ ಎಂಬ ಭರವಸೆ ಬಂದಾಗಲೇ ಬದುಕಿಗೊಂದು ಅರ್ಥ. ನಮ್ಮಲ್ಲಿ ಮೂಡುವ ಭರವಸೆಗಳು ನಮ್ಮ ಬದುಕಿಗೆ ಒಳಿತನ್ನು ಮಾಡುವುದಲ್ಲದೇ ಸಮಾಜದ ಮೇಲೆ ಕೂಡ ಸಕಾರಾತ್ಮಕ ಪರಿಣಾಮವನ್ನು ನೀಡುತ್ತದೆ.
ಬದುಕಿನಲ್ಲಿ ನಾವು ಕಟ್ಟಿಕೊಳ್ಳುವ ಆಸೆಗಳು, ಮಾಡುವ ಕಾರ್ಯಗಳು ವಯ್ಯಕ್ತಿಕವಾಗಿ ಹಾಗೂ ಸಾಮಾಜಿಕವಾಗಿ ಉಪಯೋಗ, ಸಂತೋಷವನ್ನು ಕೊಡುವಂತಿರಬೇಕು.
ಬದುಕಿನ ಮೂಲಧ್ಯೇಯ ಸಂತೋಷ ಸಂತೃಪ್ತಿ:
ಸಂತೋಷ ಹಾಗೂ ಸಂತೃಪ್ತಿಗಳು ಹೊರಗಿರುವ ವಸ್ತುಗಳಲ್ಲ. ನಮ್ಮೊಳಗೇ ಇರುವ ಒಂದು ಮಾನಸಿಕ ಸ್ಥಿತಿ. ಮಾಡುವ ಕೆಲಸವನ್ನು ಮನದಾನಂದಕ್ಕೆ ಮಾಡಬೇಕು ತೃಪ್ತ ಭಾವದಲ್ಲಿ ಬದುಕನ್ನು ಕಾಣುವಂತಾಗಬೇಕು. ನಾವೆಲ್ಲ ಬದುಕುವುದು ನಮಗೆ ಹಾಗೂ ಪರರಿಗೆ ಸಂತೋಷ ನೀಡುವುದೇ ಹೊರತೂ ದುಃಖ, ದ್ವೇಷ, ಕಣ್ಣೀರು ತರಿಸುವುದಲ್ಲ.ಹಾಗಾಗಿ ಬದುಕಿನಲ್ಲಿ ನಮ್ಮ ಭರವಸೆಗಳು ಸ್ಪೂರ್ತಿ ಯನ್ನು, ಸಂತೃಪ್ತಿಯನ್ನು ನೀಡುವಂತಾದಾಗ ಬದುಕಿಗೂ ಸಾರ್ಥಕತೆ ಇರಲು ಸಾಧ್ಯ.
ಶುಭಲಕ್ಷ್ಮಿ ನಾಯಕ