ಆದಪ್ಪ ಹೆಂಬಾ ಅವರ ಹೊಸ ಕವಿತೆ-ಹ್ಯಾಪೀನಾ…..!

ಒಂದೇ ಹೆಜ್ಜೆ
ಸೂರ್ಯ ಸರಿದರೆ ಸಾಕು
ಹೊಸ ವರ್ಷವಂತೆ
ಮುದುಕರೋ ಯುವಕರೋ
ತರುಣರೋ ತರುಣಿಯರೋ
ಎಲ್ಲರೂ ಬೇಕದಕೆ
ಮರೆತು ಮಲಗಿದವರ
ಕಣ್ಮುಚ್ಚದೇ ಕಾಯುತಿರುವವರ
ಮೋಜು ಮಸ್ತಿಗೆ
ರಹದಾರಿಯಿದ್ದಂತೆ ||

ಈ ಅಂಕಲ್ಲು
ಹುಡುಗನವನಂದು
ಗ್ಲಾಸು ಹಿಡಿದಿದದ್ದು ಅವತ್ತೇ
ಕೈ ನಡುಗುತಿತತ್ತು……
ಐವತ್ತು ವರ್ಷಗಳ ಹಿಂದೆ
ಈಗಾತ ಅಂಕಲ್ಲು
ಈಗಲೂ ನಡುಗಿತ್ತಿದೆ ಕೈ
ಹಂಗೇ……
ಬದುಕು ಹೆಂಗೋ ಮುಂದೆ? ||

ನಡುವೆ ನಡುಗುತ್ತಿರಲಿಲ್ಲ
ವಯಸ್ಸಿತ್ತು ಜೊತೆಗೆ
ರೆಟ್ಟೆಯಲಿ ಒಂದಷ್ಡು ಕಸುವು
ಈಗ ?
ಮತ್ತದೇ ನಡುಕ
ಲಿಮಿಟ್ಟು ಮೀರಿ
ಕುಡಿದುದರ ಫಲ ||

ಬೇಡಾ ಎನ್ನುತ್ತಾಳೆ ಮಡದಿ
ಅಂಕಲ್ ಒಪ್ಪುತ್ತಿಲ್ಲ
ಬದುಕಿನ ಚಿಂತೆಗಳ ನೆಪ
ಕುಡಿಯಲು
ಕುಂಟು ನೆಪವಾದರೂ ಬೇಕು
ಸದಾ ಹುಡುಕುತ್ತಿರುತ್ತಾನೆ
ಕುಡಿಯದಿರಲು
ಮುಂದಿದೆ ಬಂಗಾರದ ಬದುಕು
ಅರಿವಿದ್ದೂ ಮರೆತಿರುತ್ತಾನೆ||

ಕಳ್ಳನ ಪಿಳ್ಳೆ ನೆಪದ ಜೊತೆ
ಬಂತಿದು ಹೊಸ ವರ್ಷ
ಸರಿ ರಾತ್ರಿ ಹನ್ನೆರಡೇ
ಆಗಬೇಕವನಿಗೆ…..
ಜಗಬೆಳಗೋ ಸೂರ್ಯನೂ ಇಣುಕುವುದಿಲ್ಲ
ನೆಪಗಳ ತುಂಬಿದಿವನ ತಲೆಯಲಿ
ಚೂರು ಜಾಗವೂ ಇಲ್ಲ ||

ಶುರುವಾಗುತ್ತೆ ಸುರಪಾನ
ಮಾತು ಮಾತು ಮಾತು
ಕುಡಿತ ಸಾಕೆನಲು
ಆ ಅಂಕಲ್ ಗಿಲ್ಲ ವ್ಯವಧಾನ
ಪಾಪದ ಅಂಟಿಗೆ
ಬತ್ತಿಹೋದರೂ ಹನಿಹನಿಸುತ್ತಿರುವ
ತುಸು ಕಣ್ಣೀರಿನ ಸಮಾಧಾನ ||

ಜಗದಿ
ಇಂತಹ ಅಂಕಲ್ಗಳದೆಷ್ಟೋ
ಕಣ್ಣೀರು ಬತ್ತಿ
ಅಳುವುದ ಮರೆತ
ಆಂಟಿಗಳದೆಷ್ಟೋ…..
ತಾನು ಬದಲಾಗದ ಸೂರ್ಯ
ಇವರು ಬದಲಾಗುವಂತೆ ಮಾಡಲಿ
ಸಂಭ್ರಮಿಸಲೊಂದು ಹೊಸ ದಾರಿ ತೋರಲಿ
ಕೆಂಪಾಗುವ ಕಂಗಳಲಿ
ಹೊಸ ಹೊಳಪು ಮೂಡಲಿ
ಅಮ್ಮಗಳ, ಅಂಟಿಗಳ
ಮುಖದ ತುಂಬೆಲ್ಲ ನಗುವಿರಲಿ
ಹೊಸ ವರ್ಷದಾಚರಣೆಗೊಂದು
ಹೊಸ ಅರ್ಥ ಬರಲಿ.


Leave a Reply

Back To Top