‘ಗಾಜಿನ ಮನೆಯೊಳಗಿನ ಮಾತು’..ರಮೇಶ ಸಿ ಬನ್ನಿಕೊಪ್ಪ ಅವರ ಲೇಖನ

:ಅವನು ಇವನನ್ನು ತತ್ವ ಸಿದ್ಧಾಂತಗಳ ವಿಷಯ ಪ್ರಸ್ತಾಪಿಸಿ, ದೂಷಿಸುತ್ತಲೇ ಚೀರಾಡುತ್ತಾನೆ..!

ಇವರು ಅವನನ್ನು ತನ್ನ ತತ್ವ ಸಿದ್ಧಾಂತಗಳ ಪ್ರತಿಪಾದಿಸುತ್ತಲೇ ದೂಷಿಸುತ್ತಲೇ ಚಿರಾಡುತ್ತಾನೆ…!!

ಇಬ್ಬರೂ ಒಂದೊಂದು ಪಕ್ಷದ ಪ್ರತಿನಿಧಿಗಳು. ಟಿ.ವಿ ಪರದೆಯಲ್ಲಿ ಪ್ರೇಕ್ಷಕರೆದುರು  ತಮ್ಮ ತತ್ವ ಸಿದ್ಧಾಂತಗಳನ್ನು ಪ್ರತಿಪಾದಿಸುತ್ತಾರೆ.

 ಇನ್ನೊಂದೆಡೆ ಪ್ರಶಸ್ತಿಗಾಗಿ, ಪ್ರತಿಷ್ಠಿತ ಹುದ್ದೆಗಾಗಿ, ಲಾಬಿ ಮಾಡುವ ರಾಜಕಾರಣದ ನೆರಳಿಗೆ ಕೈ ಚಾಚುವ ಬಗ್ಗೆ ಒಬ್ಬರಿಗೊಬ್ಬರು ದೂಷಿಸಿ, ಮಾತನಾಡುವ, ಬರೆಯುವ, ನಮ್ಮನ್ನು ಯಾರು ಗುರುತಿಸುವುದಿಲ್ಲವೆಂದು  ಮೌಲ್ಯ ಸಿದ್ದಾಂತದ ಬಗ್ಗೆ ಮಾತನಾಡುವ ಅನೇಕ ವ್ಯಕ್ತಿಗಳನ್ನು, ಪ್ರಸಂಗಗಳನ್ನು ನಾವು ಕಾಣಬಹುದು.

 ಈ ಮೇಲಿನ ಪ್ರಸಂಗಗಳು ಕೇವಲ ಸಾಹಿತ್ಯ, ಸಾಂಸ್ಕೃತಿಕ, ಕಲಾ ವಲಯಗಳಲ್ಲದೆ ರಾಜಕಾರಣದ ಕ್ಷೇತ್ರಗಳಲ್ಲಿಯೂ ಕೂಡ ಇಂತಹ ಅನೇಕ ಘಟನೆಗಳನ್ನು ನಿತ್ಯವೂ ನೋಡುತ್ತೇವೆ.  ಇಲ್ಲಿ ತತ್ವಸಿದ್ಧಾಂತವನ್ನು ಪ್ರತಿಪಾದಿಸುವ ವ್ಯಕ್ತಿಗಳು ಕೂಡ ಗಾಜಿನಮನೆಯೊಳಗಿದ್ದುಕೊಂಡೆ, ಗಾಜಿನ ಮನೆ ಒಳಗಿನ ಮಾತು ಕೂಡ ಆಗಿರುತ್ತದೆ. ಇಂದು ನಾವು  ತತ್ವ ಸಿದ್ಧಾಂತದ ಬಗ್ಗೆ ಮಾತನಾಡುತ್ತಲೇ ರಾಜಕೀಯ ಲಾಭವನ್ನು ಪಡೆಯುವ, ಪಡೆದುಕೊಂಡಿರುವ ಪ್ರತಿಷ್ಠಿತ ಹುದ್ದೆಗಳನ್ನು ಪಡೆದುಕೊಂಡ ವ್ಯಕ್ತಿಗಳು ಕೂಡ ಪ್ರಸ್ತುತ ವಾತಾವರಣಕ್ಕೆ ಒಗ್ಗಿಕೊಳ್ಳಲೇಬೇಕು.  ತಮ್ಮ ತಮ್ಮ ಪಾಲಿನ ಕರ್ತವ್ಯವನ್ನು ನಿರ್ವಹಿಸಿಕೊಂಡು ಹೋಗುವ ಸಮಯದಲ್ಲಿ ಇಂತಹ ಹಲವು ಮಾತುಗಳು ಬರುವುದು ಸಹಜ.

 ಹಾಗಾದರೆ… ಸಿಗುವ
ಅವಕಾಶಕ್ಕಾಗಿ, ದೊರೆಯುವ ಹುದ್ದೆಗಾಗಿ ನಾವು ಮಾತನಾಡದೆ ಹೋದರೆ ಹುದ್ದೆ ನೀಡುವುದಾದರೂ ಹೇಗೆ..? ಯಾವುದೇ ಒಂದು ಸರ್ಕಾರ, ಸಾರ್ವಜನಿಕ ವ್ಯವಸ್ಥೆಯೊಳಗೆ ಒಂದಿಷ್ಟು ನಿಯಮಗಳು, ಚೌಕಟ್ಟುಗಳು ಇದ್ದೇ ಇರುತ್ತವೆ. ಆ ನಿಯಮಗಳನ್ನು ಪಾಲಿಸಿಕೊಂಡು ಆ ನಿಯಮಗಳೊಳಗೆ ಶಿಫಾರಸ್ಸು  ಅದರ ಜೊತೆಗೆ ಪ್ರತಿಭೆ ಎರಡು ಇದ್ದಾಗ ಅದಕ್ಕೊಂದು ಬೆಲೆ ಇರುತ್ತದೆ.  ಪಡೆದ ಅವಕಾಶಕ್ಕೂ ಬೆಲೆ ಸಿಗುತ್ತದೆ. ಕೇವಲ ವಸಲಿಬಾಜಿ ರಾಜಕಾರಣದ ಶಿಫಾರಸ್ಸಿನಿಂದ ಆಯ್ಕೆಗೊಂಡ ಅಥವಾ ಪಡೆದುಕೊಂಡ ಹುದ್ದೆಯಾಗಲಿ ತೆಗೆದುಕೊಂಡ ಅವಕಾಶವಾಗಲಿ ಕೆಲವರ ಕಣ್ಣು ಕೆಂಪೇರಿಸಬಹುದು, ಅದು ಸೂಕ್ತವೂ ಅಲ್ಲ.

 ಎಷ್ಟೋ ವ್ಯಕ್ತಿಗಳಿಗೆ ಹುದ್ದೆಗೆ ಅರ್ಹತೆಯಿದ್ದು ಅವಕಾಶ ಸಿಗದಿದ್ದಾಗ ಇಂತಹ ಕಠಿಣವಾದ ಪ್ರತಿರೋಧವನ್ನು ಒಡ್ಡುವುದು ತಪ್ಪಲ್ಲ. ಅರ್ಹತೆಯಿದ್ದು, ಪ್ರತಿಭೆಯಿದ್ದು ವ್ಯಕ್ತಿ ಎಲ್ಲಾ ಕಡೆಯಿಂದಲೂ ತನ್ನ ತನ್ನ ಕ್ಷೇತ್ರದಲ್ಲಿ ಸಾಧನೆ ಮಾಡಿದರೂ ಕೇವಲ ತನ್ನ ಪಾಡಿಗೆ ತಾನು ಇದ್ದಾಗ ಅಂತಹ ವ್ಯಕ್ತಿಯನ್ನು ಗುರುತಿಸಬೇಕಾಗಿರುವುದು ಸಮಾಜ ಮತ್ತು ಸಮಾಜದ ಜವಾಬ್ದಾರಿಯುತ ಸ್ಥಾನದಲ್ಲಿರುವ ವ್ಯಕ್ತಿಗಳು. ಇಲ್ಲದೆ ಹೋದರೆ ಪ್ರತಿಭೆಗೆ ಬೆಲೆ ಸಿಗುವುದಿಲ್ಲ.  ಇದನ್ನು ಕೂಡ ಜವಾಬ್ದಾರಿ ಸ್ಥಾನದಲ್ಲಿರುವ ವ್ಯಕ್ತಿಗಳು ಅರ್ಥಮಾಡಿಕೊಳ್ಳಬೇಕು.

ನಾವು ಸಮಾಜದಲ್ಲಿ ಎರಡು ವಿಭಿನ್ನ ಮನೋಭಾವದ ವ್ಯಕ್ತಿಗಳನ್ನು ಕಾಣುತ್ತೇವೆ. ಅರ್ಹತೆಯನ್ನು ಹೊಂದಿರುವ ವ್ಯಕ್ತಿಗಳು  ಕ್ರಿಯಾಶೀಲ ಕಾರ್ಯ ಚಟುವಟಿಕೆಗಳನ್ನು ಮಾಡಿಕೊಂಡು ತನ್ನ ಪಾಡಿಗೆ ತನ್ನ ಕ್ಷೇತ್ರದಲ್ಲಿ ಮುಂದುವರೆಯುತ್ತಾ, ಯಾವುದೇ ಹುದ್ದೆಯನ್ನು ಬಯಸದೆ ವಸಲಿಬಾಜಿ, ಶಿಫಾರಸ್ಸು ರಾಜಕಾರಣ ಮಾಡದಿದ್ದಾಗ ಹುದ್ದೆ ದೊರೆಯದಿದ್ದರೆ ನಿರ್ಲಿಪ್ತ ಮನೋಭಾವದಲ್ಲಿ ಮುಂದುವರೆಯುವವರದು ಒಂದು ವರ್ಗವಾದರೆ,  

“ನಾನು ಇಷ್ಟೆಲ್ಲಾ ದುಡಿದಿದ್ದೇನೆ. ಆಯಾ ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡಿದ್ದೇನೆ. ಸಮಾಜ ನನ್ನ ಗುರುತಿಸಲಿಲ್ಲವಲ್ಲ” ಎನ್ನುವ ಆತಂಕ, ಕಳವಳಪಡುವವರಿದ್ದಾರೆ. ಅದು ಸಹಜವೂ ಹೌದು. ಬಾಯಲ್ಲಿ ತತ್ವ ಸಿದ್ಧಾಂತಗಳ ಮಾತನಾಡಿ ಪ್ರತಿಸಲ ಅವಕಾಶವನ್ನು ತಾವೇ ಗಿಟ್ಟಿಸಿಕೊಂಡವರ ಮುಂದೆ ಇವರು ಕೆಲವು ಸಲ  ಅಪರಾಧಿಯಂತೆ ಕಾಣುತ್ತಾರೆ. ಆದರೆ ಇಲ್ಲಿ ಸಮಾಜವು ಜವಾಬ್ದಾರಿಯಿದ್ದಾಗ ಮಾತ್ರ ಇಂತಹ ಪ್ರತಿಭೆಯುಳ್ಳ ವ್ಯಕ್ತಿಗಳನ್ನು ಗುರುತಿಸಲು ಸಾಧ್ಯವಾಗುತ್ತದೆ.

ಅದೇನೆ ಇರಲಿ…

 ನಮ್ಮ ನಮ್ಮ ಕ್ಷೇತ್ರದಲ್ಲಿ ಮಾಡುವ ಕಾರ್ಯ ಚಟುವಟಿಕೆಗಳು, ಕೆಲಸಗಳು ನಮ್ಮ ವ್ಯಕ್ತಿತ್ವಕ್ಕೆ ಹಿಡಿದ ಕೈಗನ್ನಡಿಯಾಗಬೇಕು.  ಪ್ರಶಸ್ತಿ ಹುದ್ದೆಗಳಿಗಿಂತಲೂ ಮೀರಿದ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು.  ಅಂತಹ ವ್ಯಕ್ತಿತ್ವ ನಮ್ಮದಾಗಬೇಕು.  ಆಗ ಹುದ್ದೆಗಳು, ಪ್ರಶಸ್ತಿಗಳು ಎಷ್ಟೇ ವಶೀಲಿಬಾಜಿಗೆ, ರಾಜಕಾರಣಕ್ಕೆ ಒಳಗಾಗಿದ್ದರೂ ನಮ್ಮನ್ನು ಕೈಬೀಸಿ ಕರೆಯುತ್ತವೆ. ನಾವು ಅದರ ಹತ್ತಿರ ಸುಳಿಯದಿದ್ದಾಗ ಒಂದಿಲ್ಲ ಒಂದು ರೂಪದಲ್ಲಿ ಅದು ನಮ್ಮನ್ನು ಹುಡುಕಿಕೊಂಡು ಬಂದೇ ಬರುತ್ತದೆ.
 ಕಾಯುವ ತಾಳ್ಮೆ ನಮ್ಮದಾಗಬೇಕು. ಆ ತಾಳ್ಮೆ ಇಲ್ಲದೆ ಹೋದರೆ ಇನ್ನೊಬ್ಬರನ್ನು ದೂಷಿಸುವ, ವ್ಯವಸ್ಥೆಯನ್ನು ಅಣಕಿಸುವ ಹಲವು ವ್ಯಕ್ತಿಗಳಲ್ಲಿ ನಾವು ಒಬ್ಬರಾಗಿ ಬಿಡುತ್ತೇವೆ. ಹಾಗಂತ ಅದು ತಪ್ಪು ಅಲ್ಲ ಅದು ವ್ಯವಸ್ಥೆಯ ತಪ್ಪು.

 ಆದರೆ…

 ಹೀಗಾಗಿ  ನಾವು ನಮ್ಮ ಚಟುವಟಿಕೆಗಳಿಂದ, ಮಾಡುವ ಕೆಲಸಗಳಿಂದ, ತತ್ವ ಸಿದ್ಧಾಂತಗಳಿಂದ ವಿಮುಖರಾಗದೆ, ನಮ್ಮಲ್ಲಿರುವ ಸ್ಪೂರ್ತಿದಾಯಕ ಕ್ರಿಯಾಶೀಲತೆಯನ್ನು ಕಳೆದುಕೊಳ್ಳುವುದು ಬೇಡ. ನಮ್ಮಲ್ಲಿರುವ ಪ್ರತಿಭೆ ಯಾರೂ ಕಸಿದುಕೊಳ್ಳಲು ಸಾಧ್ಯವಿಲ್ಲ.  ನಮ್ಮಲ್ಲಿರುವ ಸಂಘಟನಾ ಚತುರತೆ, ಸಮಾಜಮುಖಿ ಕಾರ್ಯಗಳು, ಸಾಹಿತ್ಯಿಕ ಚಟುವಟಿಕೆಗಳು, ಕಲಾ ಸಾಂಸ್ಕೃತಿಕ ಚಟುವಟಿಕೆಗಳು ಸದಾ ಮುಂದುವರಿಯಬೇಕು. ಪ್ರಶಸ್ತಿಗಾಗಿ, ಹುದ್ದೆಗಳಿಗಾಗಿ ಅಪಾಹಪಿಸದೆ ಅವಕಾಶ ಸಿಕ್ಕರೆ ಮುಗುಳ್ಗತ್ತ ಅದನ್ನು ಸ್ವೀಕರಿಸಬೇಕು..! ಅವಕಾಶಗಳು ಸಿಗದೇ ಹೋದರೆ ಇರುವ ವ್ಯವಸ್ಥೆಯೊಳಗೆ ನಮ್ಮ ಕಾರ್ಯ ಚಟುವಟಿಕೆಗಳನ್ನು ವಿಸ್ತರಿಸಿಕೊಳ್ಳಬೇಕು. ಎಲ್ಲವನ್ನು ಮೀರಿ ಬೆಳೆದಾಗಲೇ ವ್ಯಕ್ತಿಗಳಿಗೆ ವ್ಯಕ್ತಿತ್ವಕ್ಕೆ ಬೆಲೆ ಬರುತ್ತದೆ. ಇಲ್ಲದಿದ್ದರೆ ನಾವು ಸವಕಲು ನಾಣ್ಯವಾಗುತ್ತೇವೆ.

ವ್ಯವಸ್ಥೆಯ  ಒಂದು ಭಾಗ ಮಾತ್ರ ನಾವು. ಇಡೀ ವ್ಯವಸ್ಥೆಯೇ ನಾವು ಅಲ್ಲ ಎನ್ನುವುದು ನಮ್ಮ ಗಮನಕ್ಕಿರಬೇಕು. ವ್ಯವಸ್ಥೆಯನ್ನು ದೂಷಿಸುವುದಕ್ಕಿಂತ ವ್ಯವಸ್ಥೆಯೊಳಗೆ ಹೊಂದಿಕೊಂಡು ನಮ್ಮ ಕಾರ್ಯ ಚಟುವಟಿಕೆಗಳನ್ನು ಸದಾ ಮುಂದುವರಿಸಿಕೊಂಡು ಹೋಗಬೇಕು.  ತಮ್ಮ ಬದುಕಿನ ಮುಕ್ಕಾಲು ಭಾಗ ಕಾರ್ಯ ಚಟುವಟಿಕೆಗಳಲ್ಲಿ ತೊಡಗಿದ ಅದೆಷ್ಟೋ ವ್ಯಕ್ತಿಗಳನ್ನು  ಈ ಸಮಾಜ ಗುರುತಿಸದೆ ಹೋದ ಸಾಕಷ್ಟು ಉದಾಹರಣೆಗಳು ನಮ್ಮ ಕಣ್ಮುಂದೆ ಇವೆ. ಅದು ವ್ಯವಸ್ಥೆಯ ತಪ್ಪು. ವ್ಯವಸ್ಥೆಯೊಳಗಿನ ಜವಾಬ್ದಾರಿಯುತ ವ್ಯಕ್ತಿಗಳು ಅಂತಹ ಪ್ರತಿಭೆಗಳನ್ನು ಗುರುತಿಸುವುದು ಅವರ ಕರ್ತವ್ಯ.  ಆದರೂ ಅವಕಾಶ ವಂಚಿತ ಪ್ರತಿಭೆಗಳು  ಅವರು ತಮ್ಮ ಕರ್ತವ್ಯದಿಂದ ವಿಮುಖರಾಗಿಲ್ಲ.  ಅವುಗಳು ನಮಗೆ ಸ್ಪೂರ್ತಿಯಾಗಬೇಕು.

ನಾವು ಋಣಾತ್ಮಕ ಅಂಶಗಳನ್ನು ಮನಸ್ಸಿನೊಳಗೆ ತುಂಬಿಕೊಂಡು ಮಾಡಬೇಕಾದ ಕೆಲಸಗಳನ್ನು ಕೈ ಬಿಟ್ಟು ನಮ್ಮಲ್ಲಿರುವ ಧನಾತ್ಮಕ ಅಂಶಗಳಿಗೆ ಕೊಡಲಿ ಪೆಟ್ಟು ಕೊಡುವುದು ಒಳ್ಳೆಯದಲ್ಲ. ಎಲ್ಲರೂ ಅವರವರ ಮೂಗಿನ ಮೇಲೆ ನಿಂತುಕೊಂಡೇ ಮಾತನಾಡುತ್ತೇವೆ. ತುಂಬಾ ತಾರ್ಕಿಕವಾಗಿ, ವಿಚಾರಶೀಲರಾಗಿ ಮಾತನಾಡಿದಾಗ ಎಲ್ಲರೊಳಗೂ ಗಾಜಿನ ಮನೆಯೊಳಗಣ ಮಾತುಗಳು ಇಂದು ತುಂಬಿಕೊಂಡಿವೆ.  ವಯಕ್ತಿಕ ಹಿತಾಸಕ್ತಿ, ರಾಜಕಾರಣ, ಜಾತಿ, ವಸೂಲಿಬಾಜಿ, ಧರ್ಮಕಾರಣಗಳು… ನಮ್ಮ ನಮ್ಮ ಮೂಗಿನ ನೇರಕ್ಕೆ ನಾವು ಸಾರ್ವಜನಿಕವಾಗಿ ಆಚರಿಸಿಕೊಳ್ಳದಿದ್ದರೂ ಅಂತರ್ಯದಲ್ಲಿ, ಆತ್ಮೀಯರೊಳಗೆ, ನಮಗೆ ಗೊತ್ತಾಗದ ಹಾಗೆ ವ್ಯವಸ್ಥೆಯು ಜೇಡರ ಬಲೆಯನ್ನು ಎಣೆದುಬಿಟ್ಟಿದೆ. ಹಾಗಾಗಿ ಗಾಜಿನ ಮನೆಯೊಳಗೆ ನಿಂತುಕೊಂಡ ಅವನ ಕುರಿತು ಇವನು,  ಗಾಜಿನ ಮನೆಯೊಳಗಿದ್ದಾನೆಂದು ಕಲ್ಲು ತೂರುವುದು ಒಳ್ಳೆಯದಲ್ಲ.  ನಾನು ಗಾಜಿನ ಮನೆಯೊಳಗೆ ನಿಂತುಕೊಂಡಿದ್ದೇನೆ ಎನ್ನುವುದನ್ನು ಮರೆಯದಿರೋಣ. ಎಲ್ಲವನ್ನು ಮೀರಿ ಹೊಸತನಕ್ಕೆ ಮಿಡಿಯೋಣ. ಬರೆಯೋಣ. ಬೆರೆಯೋಣ. ಕ್ರಿಯಾಶೀಲವಾಗಿ ಸಮಾಜದೊಳಗೆ ದುಡಿಯೋಣ.

ಡಾ. ಜಿ. ಎಸ್. ಶಿವರುದ್ರಪ್ಪನವರ ಈ ಹಾಡು ಮತ್ತೆ ಮತ್ತೆ ನೆನಪಾಗುತ್ತದೆ….
 “ಎಲ್ಲಾ ಕೇಳಲಿ ಎಂದು ನಾನು ಹಾಡುವುದಿಲ್ಲ ಹಾಡುವುದು ಅನಿವಾರ್ಯ ಕರ್ಮ ಏನಗೆ
ಹಾಡು ಹಕ್ಕಿಗೆ ಬೇಕೆ ಬಿರಿದು ಸನ್ಮಾನ….” ಎನ್ನುವ ಸಾಲುಗಳು ನಮ್ಮ ಎದೆಯೊಳಗೆ  ಸದಾ ಇರಲಿ ಎಂದು ಬಯಸೋಣ.


Leave a Reply

Back To Top