ಕಾವ್ಯಸಂಗಾತಿ
ಡಾ ಅನ್ನಪೂರ್ಣ ಹಿರೇಮಠ
ಗಜಲ್
ಮುಗುದ ಮನಗಳಲಿ ಅಂಕುರಿಸುವುದು ಮೊಹಬ್ಬತ್
ಹಿಡಿತಕೆ ಸಿಗದಂತಯೇ ಒಳನುಗ್ಗುವುದು ಮೊಹಬ್ಬತ್
ಅನತಿ ಅಪ್ಪಣೆಗಾಗಿ ಕಾಯದು ಯಾರ ಮಾತು ಕೇಳದು
ಕಣ್ಣೋಟದ ಸೆಳೆತದಲಿ ಒಂದಾಗುವುದದು ಮೊಹಬ್ಬತ್
ಶಾಂತ ಕೊಳದೆ ಕಲ್ಲೆಸೆದು ಎಬ್ಬಿಸುವಂತಹ ಅಲೆಯದು
ಬಯಕೆ ಬಾಂದಳವನೇ ಕದಡುವುದದು ಮೊಹಬ್ಬತ್
ಭಾವದಲೆಯಲಿ ಜುಳುಗುಡುತ ಹರಿದು ಬರುವುದು
ಜೀವ ಶರಧಿಯನ್ನೇ ಉಕ್ಕಿಸುವುದದು ಮೊಹಬ್ಬತ್
ನಶೆಯೇರಿಸುವ ಸುರೆ ಕಂಠಪೂರ್ತಿ ಕುಡಿದಂತಿಹುದು
ಅಂತರಾಳದಿ ಕೋಲಾಹಲ ಹುಟ್ಟಿಸುವುದು ಮೊಹಬ್ಬತ್
ಮೋಹ ಪಾಶದ ಬಲೆಯದು ಬಂಧಿಸದೇ ಬಿಡದಾರನು
ಸ್ವರ್ಗಕೆ ಸೋಪಾನ ಕಟ್ಟಿ ತೇಲಾಡಿಸುವುದು ಮೊಹಬ್ಬತ್
ಉಹೆಗೆ ನಿಲುಕದಂತಹ ಮಾಯಾಜಾಲದ ಬಲೆಯದು
ತನುವನು ತಾಪದೋಳು ಕುದಿಸುವುದದು ಮೊಹಬ್ಬತ್
ದೇಹ ಕಣದೊಳಗೆ ತುಡಿತಗಳ ಕಾಳಭೈರವಿ ರಾಗಾಲಾಪ
ಮಮಕಾರದ ಸರಿಗಮನದಿ ಹುಚ್ಚೆಬ್ಬಿಸುವುದು ಮೊಹಬ್ಬತ್
ಹರ್ಷ ಹಂದರವನೇ ಹಸಿರಾಗಿಸಿ ಒಲವನೇ ಬಿತ್ತುವುದು
ಕಣ್ಣೀರ ಪಣ್ಣೀರ ಕಡಲಲಿ ತೇಲಿಸುವುದದು ಮೊಹಬ್ಬತ್
ಕಾರಣವಿಲ್ಲದೆ ಅಲೆಯಲು ಹಚ್ಚುವುದು ಗುರಿ ತಪ್ಪಿಸುವುದು
ಯೋಗಿಯ ತಪವನೂ ಭಂಗ ಮಾಡದಿರದದು ಮೊಹಬ್ಬತ್
ತನ್ಮಯತೆಯಲಿ ಜಗವನೆ ಮರೆಯುವಂತೆ ಮಾಡುವುದು
ಪ್ರೀತಿಯ ಅಪಾರ ಸಿರಿಯನು ತೋರದಿರದದು ಮೊಹಬ್ಬತ್
ಮಾತು ಸಂಭಾಷಣೆ ಲಿಪಿಯಿಲ್ಲದೆ ಕೆತ್ತಿದ ಪ್ರೇಮಪತ್ರವದು
ಇತಿಮಿತಿಯ ಅರಿವಿಲ್ಲದೆ ಸಮ್ಮಿಳಿಸುವುದು ಮೊಹಬ್ಬತ್
ಡಾ ಅನ್ನಪೂರ್ಣ ಹಿರೇಮಠ
ಬಹಳ ಸೊಗಸಾಗಿದೆ
ಮೊಹಬ್ಬತ್ ಹೃದಯದ ಮಾತುಗಳು