ಕಾವ್ಯ ಸಂಗಾತಿ
ಡಾ. ಮೀನಾಕ್ಷಿ ಪಾಟೀಲ್
ಕಂಪಿನ ಹುಡುಗಿಯ ಇಂಪಾದ ಹಾಡು
ಹಾಡೋ ದಾಸಯ್ಯ
ಕಥೆಯಾದ ಹುಡುಗಿಯ ಹಾಡು – ಪಾಡು
ಕಾಡಲ್ಲಿ ಹಸಿರ ಚಿಮ್ಮಿಸಿ
ಕಣಿವೆಯಲ್ಲಿ ಝರಿ – ಜಲಪಾತಗಳ ಹರಿಸಿ
ಕಣ್ಣಿಗೆ ಹಬ್ಬವಾದವಳು
ಬಾಲೆಯ ಬಳಿ ಸಾರಿ
ಬರಲು ಸೆಣಸಾಡೋ ಸೂರ್ಯ
ಕದಿಯಬೇಡ ಹಸಿರುಟ್ಟ ಹೊದಿಕೆಯ
ಹಚ್ಚ ಹಸುರಿನ ಅಚ್ಚ ಮನಕೆ
ಆಗದಿರು ಬೆಂಗದಿರ್
ಕಾಡು ಮಲ್ಲಿಗೆಯ ಘಮ್ಮನ್ನ
ವಾಸನೆ ಸುಳುವಿಡಿದು
ಹರಿವ ಜುಳು ಜುಳು ಜಲ
ಬಯಸಿ ಬರುವ ಹಕ್ಕಿ- ಪಕ್ಕಿಗೆ
ದಾರಿಯ ತೋರೋ ರವಿಕಿರಣ
ಕಣ್ಣಂಚಿನ ಸನ್ನೆಯಲಿ
ನಕ್ಷತ್ರಗಳ ಸೆರೆ ಹಿಡಿದು
ಕಾಡ ಗರ್ಭದಲ್ಲಿ ಹೂವ ತೂರಾಡಿ
ಬೆಟ್ಟಸಾಲುಗಳ ಮಾಲೆ ಮಾಡಿ
ಹಸಿರು ಮುಡಿದವಳು
ಬಯಲ ಹುಲ್ಲನು ಕಳಚಿ
ದಟ್ಟ ಕಾಡನು ಧರಿಸಿ ಗಿರಿ ಪಂಕ್ತಿಗಳ ಸಾಲು
ಗಗನೆತ್ತರಕ್ಕೆ ಜೀಕು ಜೋಕಾಲಿ
ಕೈ ಬೀಸಿ ಕರೆವ ಕೆರೆ ತೊರೆಗಳಲಿ
ತೆರೆಯ ಚಿಮುಕಿಸಿ ಖಗ ಮೃಗಗಳ ಪೊರೆವೆ
ಡಾ. ಮೀನಾಕ್ಷಿ ಪಾಟೀಲ್
Beautiful poem