ಮಾಲಾ ಹೆಗಡೆ ಅವರ ಗಜಲ್

ತಾಳ್ಮೆ ತಳೆ ಕಹಿಸೋಲನು
ಪ್ರಜ್ಞೆಯು
ಅವಿಸುವುದಾಗ
ಗೆಲುವಿನ ಸವಿ ಬೆಲ್ಲವ
ಜಿಹ್ವೆಯು ಸ್ವಾದಿಸುವುದಾಗ

ದುಃಖದ ದೋಣಿಯನೇರಿ
ಕ್ಷಣಕಾಲ ಪಯಣಿಸು
ಸೌಖ್ಯವಿಹಂಗಮ ತಟ
ದಿಶೆಯು ನಿಕಟವಾಗುವುದಾಗ

ವೈಫಲ್ಯದ ನಿಚ್ಚಣಿಗೆಯ
ತುಳಿದು ಮುಂದಡಿಯಿಡು
ಜಯದ ಮಹಡಿಯ
ತುದಿಯು ಎಟಕುವುದಾಗ

ಖೇದದ ಹಿಮಕಲ್ಲಿಗೆ
ಕೆಚ್ಚಿನಂಶುವ ಬೀರು
ತುಮುಲವರಗಿ ಸ್ವಾಸ್ಥ್ಯದ
ಸೋನೆಯು ಸುರಿಯುವುದಾಗ

ವ್ಯಾಕುಲದ ಗೆದ್ದಲನು
ತಾಳುತಲೇ ದಹಿಸು ನೀ
ತೃಪ್ತ ಭಾವವೃಕ್ಷದ
ಪೆರೆಯು ನಳಿಸುವುದಾಗ

ಯಶಹೀನ ಸ್ಥಿತಿರಂಧ್ರವ
ಶ್ರಮದoಟಲಿ ಮುಚ್ಚಿಡು
ಖ್ಯಾತಿ ‘ಮಾಲಾ’ ದಂಡೆಯ
ಮುಡಿಯು ಧರಿಸುವುದಾಗ.

Leave a Reply

Back To Top