ಹಮೀದಾಬೇಗಂ ದೇಸಾಯಿ ಅವರ ಗಜಲ್

ತೊರೆಗಳ ತುಟಿಗಳು ಮೇಘಗಳ ರಾಗ ಗುನುಗಿದೆ ಮೆತ್ತಗೆ
ಹೂವುಗಳ ಎದೆಯೊಳಗೆ ತಣ್ಣನೆಯ ಬೆಂಕಿ ಮಲಗಿದೆ ಮೆತ್ತಗೆ

ತಂಗಾಳಿಯ ಅಲೆಗಳ ಸುಂಯ್ಯೆಂಬ ಗಾನ ಕೇಳಿಸದೇ ನಿನಗೆ
ಗಿರಿಗಳ ಶಿಖರಗಳಿಗೆ ಮಂಜು ಮುಸುಕು ಹೊದಿಸಿದೆ ಮೆತ್ತಗೆ

ಮುಂಗಾರಿನ ಮುತ್ತು ಹನಿಗಳು ಭುವಿಯೊಡಲು ತುಂಬಿ ತುಳುಕಿವೆ
ತೂರಿ ಬಂದ ರವಿ ಕಿರಣ ಮೊಗ್ಗುಗಳನು ನಾಚಿಸಿದೆ ಮೆತ್ತಗೆ

ತೊಟ್ಟಿಕ್ಕುವ ಬಿಂದುಗಳು ಹಸಿರೆಲೆಗಳಿಗೆ ಮುತ್ತು ಕೊಡುತಿವೆ ಹಗುರಾಗಿ
ಅರಳಿದ ಕುಸುಮಗಳ ಘಮಲು ದುಂಬಿಗಳಿಗೆ ಅಮಲೇರಿಸಿದೆ ಮೆತ್ತಗೆ

ಬಾನಂಗಳದಿ ಮೋಡಗಳ ಜಗಳ ಶುರುವಾಗಿದೆ ನೋಡು ಬೇಗಂ
ಸಂತೃಪ್ತ ಸಕಲ ಕಣಕಣವು ದೇವನೊಲುಮೆಗೆ ಬಾಗಿ ನಮಿಸಿದೆ ಮೆತ್ತಗೆ.


2 thoughts on “ಹಮೀದಾಬೇಗಂ ದೇಸಾಯಿ ಅವರ ಗಜಲ್

  1. ಸ್ಪಂದನೆಗೆ ಧನ್ಯವಾದಗಳು ತಮಗೆ ಮೇಡಂ.

    ಹಮೀದಾಬೇಗಂ ದೇಸಾಯಿ

Leave a Reply

Back To Top