ವಿಮಲಾರುಣ ಪಡ್ಡoಬೈಲ್ ಅವರ ಕವಿತೆ-ಪ್ರಿಯ ಅಮೃತಮತಿ

ಮಿನುಗುವ ಚುಕ್ಕಿ ತಾರೆಗಳೇ ನಾಚುವ
ಸುಂದರ ವದನ
ಮಲ್ಲಿಗೆಯ ಮೃದು ಮೈಸಿರಿ
ಕೆಂಪು ರಂಗಿನ ನುಣುಪು ಕೆನ್ನೆಯ
ಕಾಂತೆ ನೀ ಅಮೃತಮತಿ

ಯಶೋಧರಸನ ಪಟ್ಟದರಸಿ
ಸಕಲ ವೈಭವ ಅಷ್ಟೈಶ್ವರ್ಯ
ನಿನ್ನಸಿವ ಸೀಳಿದರು
ಬೂದಿ ಮುಚ್ಚಿದ ಪ್ರೇಮ ಕಾಮದ ಮೋಹಕೆ
ಸೋತು ಹೋದೆಯಾ?

ದೂರದಿಂದ ತೇಲಿ ಬಂದ
ಗಾನಕೆ ಮನಸೋತು
ಮುದುಡಿದ ನಿನ್ನ ಕನಸ
ಮೆಲ್ಲ ಮೆಲ್ಲನೆ ಅರಳಿಸಿ
ಮೋಹಕ ದನಿಗೆ ಮಾರುಹೋದೆಯಾ?

ಸವಿನಿದ್ರೆಗೆ ಜಾರಿದ ಮನ್ಮಥನ ಮರೆತು
ಬೆಕ್ಕಿನ್ಹೆಜ್ಜೆಯ ನೀನಿಟ್ಟು
ಅಂತಃಪುರದ ಚಿನ್ನದ ಪಂಜರದಿಂದ
ಗಂಧರ್ವ ಗಾಯಕನರಸುತಾ
ಕತ್ತಲಿನಿಂದ ಬೆಳಕಿನೆಡೆಗೆ ಸಾಗಿದೆಯಾ?

ನಿನ್ನ ಉದರದಿ ಜನಿಸಿದ
ನಕ್ಷತ್ರ ನಗುತಿಹುದು
ಕಾಮದ ಹಸಿವ ತಣಿಯದ ನೀ
ಕೊರಗಿ ಕೊರಗಿ ಸಕಲವ ದಿಕ್ಕರಿಸಿ
ನಿನ್ನ ಕನಸ ಕರಗಿಸುವನರಸುತ ನಡೆದೆಯಾ?

ಪಟ್ಟಧಾನೆಯ ಮಾವುತ ಅಷ್ಟವಕ್ರನ
ಮಧುರ ಗಾನ ನಿನ್ಹೆಜ್ಜೆಗೆ ಹಾದಿ ತೋರಿ
ಬೆಚ್ಚಗಿನುಸಿರಲ್ಲಿ ಮೂಡಿದ ರಾಗ
ನಿನ್ನೆದೆಯಲ್ಲಿ ಮೀಟಿದ ಭಾವಗಳ
ಅವನೆದೆಗೆ ನಾಟಿಸಿದೆಯಾ?

ಬಿಗಿದಷ್ಟು ಉಬ್ಬುವ ಕಾಮದ ಮೋಹಕೆ
ಧಕ್ಕೆಯಾದಿತೆಂದು
ಅತ್ತೆ ಪತಿಗೆ ವಿಷತೆತ್ತು
ಮೈ ತುಂಬಾ ಕೆಸರಾಗಿ ಕಳಂಕವ ಹೊತ್ತು
ಅಷ್ಟೈಶ್ವರ್ಯ ವ ತೊರೆದು
ಹೃದಯ ವೀಣೆಯರಾಗದೊಂದಿಗೆ
ನಡೆದೇ ಬಿಟ್ಟೆಯಾ?


Leave a Reply

Back To Top