ಕಾವ್ಯ ಸಂಗಾತಿ
ಹನಮಂತ ಸೋಮನಕಟ್ಟಿ
ಮಳೆಬಿಲ್ಲು
ಪೂರ್ಣ ಚಂದಿರನಂತ
ದುಂಡು ಮೊಗದಲ್ಲಿ
ಸ್ವೇತವರ್ಣದ ದಂತದ ಸಾಲು
ಆಹಾ ! ಅದೆಂತಹ ಕಾಂತಿ………
ತಿಳಿಬಿಳಿಯಾದ ಸೂಜಿಮಲ್ಲಿಗೆಯ
ಗಾತ್ರದಲ್ಲಿ ನೋಡಬೇಕು
ಆಹಾ! ಹೊಳಪು
ಮುಂಗಾರಿನ ಕೋಲ್ಮಿಂಚು ಕಣ್ಣು ಹೊಡೆದಂತೆ
ತಂಪಾದ ತಿಳಿಯ ಕೊಳದಲ್ಲಿ
ನೆನೆಯದೆ ನಿಂತ
ಬಿಳಿ ಹವಳದ ಸಾಲುಗಳ ಮಿಂಚು
ಆಹಾ! ನೋಡಬೇಕು ಮುಂದಣ ದಾರಿಗೆ ಅದೇ ಬೆಳಕು
ಕೆಂಪು ತುಟಿಯ
ಮಧ್ಯೆ ಹೊಸ ಬೆಳಕು ಹರಡುವ
ಮೈತೊಳೆದು ನಿಲ್ಲಿಸಿದ ಮುತ್ತುಗಳು
ಮುಂಗಾರಿನ ಕೋಲ್ಮಿಂಚು ಕಣ್ಣು ಹೊಡೆದಂತೆ
ಕಣ್ಣಿಗೆ ನಾಟುವ ದೃಶ್ಯ
ಆಹಾ! ಜೋಗದ ಜಲಪಾತ ಜಾರಿ ಬಿದ್ದಂತೆ
ಪಳಪಳನೆ ಮಿಂಚಿ
ಇರುಳಿಗೆಲ್ಲ ಬೆಳಕು ನೀಡುವ
ಹೊಳೆಯುವ ನಕ್ಷತೆಗಳ ಮೀರಿಸಿ ಮಿಂಚುವ
ದಾಳಿಂಬೆಯ ಸೋಲಿಸಿದ ಬೆಳ್ಳಿಯ ಗುಣದ
ಬೆಳಕು ನೋಡಬೇಕು
ಆಹಾ!ಮಳೆ ಬಿಲ್ಲು ಎದುರು ನಿಂತಂತೆ
ಕೆನ್ನೆ ಮೇಲಿನ ಕುಣಿಯುವ
ನಾಭಿ ಹೋಲುವ ಗುಳಿಯಂತೂ
ದಂತದ ಸಾಲುಗಳಿಗೆ ಸೋಕಿ
ಒನಪಿನಿಂದ ಬಾಯ್ತೆರೆದು ನೋಡಿ
ನಗು ಉಕ್ಕಿಸುವ ಬಗೆ ಕಾಣಬೇಕು
ಆಹಾ!ಕಣ್ಣಿಗದೆ ಸ್ವರ್ಗ
ತುಟಿಯ ಅಂಚಿನಿಂದ ಆಚೆ ಬರುವ
ಕಿರು ನಗೆ ಒಂದೊಂದು ಸಾರಿ ಹೃದಯಕ್ಕೆ ತಂಪೆರಚಿ
ಶಾಕುಂತಲೆಯ ನಾಟ್ಯ ಭಂಗಿಯಲಿ
ನಗು ತೋರಿ
ಸರಸಕ್ಕೆ ಸಮ್ಮತಿ ಕೊಡುವುದು
ನೋಡಬೇಕು ಆಹಾ! ಏನದರ ರತಿಯ ಹಾವಳಿ
—————
ಹನಮಂತ ಸೋಮನಕಟ್ಟಿ
ಶ್ವೇತವರ್ಣ