ಕಾವ್ಯ ಸಂಗಾತಿ
ಎ.ಎನ್.ರಮೇಶ್.ಗುಬ್ಬಿ
ದೃಷ್ಟಾಂತ.!
ಕೊಲೆಗಡುಕ ಆ ಕೆಡುಕ ಬೇಡನೆದುರು
ನಾರದಮುನಿ ಕೃಪಾಸಿಂಧುವಾಗೆ ನಿಂದ
ರಾಮ ನಾಮದ ಮಂತ್ರವ ಅರುಹಿದ
ವ್ಯಾಧನೆದುರು ಋಷಿ ಋಷಿಯೇ ಆದ
ಕಿರಾತನ ವಾಲ್ಮೀಕಿಯಾಗಿಸುತ ಬೆಳಗಿದ.!
ಕಡುಕ್ರೂರಿ ಆ ಅಂಗೂಲಿಮಾಲನೆದುರು
ಬುದ್ದ ಕಾರುಣ್ಯಮೂರ್ತಿಯಾಗೆ ನಿಂದ
ದಯೆ ಕರುಣೆ ಕ್ಷಮೆಯೇ ಬೆಳಕೆಂದ
ಸೈತಾನನೆದುರೂ ಸಂತ ಸಂತನೇ ಆದ
ಸೈತಾನನನ್ನೂ ಸಂತನಾಗಿಸಿ ಹೊಳೆದ.!
ಶಿಲುಬೆಗೇರಿಸಿ ಕಲ್ಲು ಹೊಡೆದವರೆದುರು
ಯೇಸು ದಯಾಮಯನಾಗಿಯೇ ನಿಂದ
ಶಾಂತಿ ಪ್ರೀತಿ ಮಮತೆಯೇ ಬದುಕೆಂದ
ಕಟುಕರೆದುರೂ ಕರುಣಿ ಕರುಣಿಯೇ ಆದ
ಕಟುಕರನ್ನೂ ಕರುಣಿಗಳಾಗಿಸಿ ಮಿನುಗಿದ.!
ಕೊಡಲಿ ಹಿಡಿದು ಕಡಿಯಲು ನಿಂದವರಿಗು
ಮರ ನೀಡುವುದು ಫಲ, ನೆರಳಿನ ನೆರವು
ಬೆಂಕಿಯಿಟ್ಟು ಸುಡುವವರಿಗೂ ಜೇನ್ನೊಣ
ಸುರಿಸುವುದು ಜೇನಧಾರೆಯ ಸಿಹಿಹೂರಣ
ಇದುವೆ ನಿಸರ್ಗದ ಚರಾಚರದ ತತ್ವ ಗುಣ.!
ಕೊಲ್ಲಲು ಬಂದು ನಿಂತವರಿಗೂ ಗೋವು
ಒಡಲ ಹಾಲಿನ ಹೊಳೆಯನೇ ಹರಿಸುವವು
ತನ್ನನೇ ತೇಯುವ ಕಲ್ಲಿಗೂ ಆ ಚಂದನ
ನೀಡುವುದು ಸೌರಭ ಪರಿಮಳಗಳ ಪಾನ
ವಿಕೃತಿಯೆದುರು ಬದಲಾಗದು ಪ್ರಕೃತಿಗಾನ.!
ಕೆಟ್ಟವರೆದುರು ನಾವೂ ಕೆಟ್ಟವರಾಗಬೇಕಿಲ್ಲ
ಕೆಟ್ಟದಾಗಿಯೇ ನಡೆದುಕೊಳ್ಳಲೂ ಬೇಕಿಲ್ಲ
ನಮ್ಮೊಳೆಯತನಗಳ ತೋರಿದರೆ ಸಾಕಲ್ಲ
ಒಳಿತಪ್ರಭಾವ ಬೀರುತ ಬದಲಿಸಬಹುದಲ್ಲ
ಪುರಾಣ ಚರಿತ್ರೆಗಳಿದನೇ ಸಾಕ್ಷಿಕರಿಸಿದೆಯಲ್ಲ
ನಿಸರ್ಗವೇ ನಿತ್ಯವು ನಿದರ್ಶನವಾಗಿದೆಯಲ್ಲ.!
ಎ.ಎನ್.ರಮೇಶ್.ಗುಬ್ಬಿ.
ಸೂಪರ್ ಸರ್