‘ಒಂದು ಮನದಲ್ಲಿನ ಮೋಡ’ ಲಹರಿ-ಶೃತಿ ರುದ್ರಾಗ್ನಿ

ಒಂದು ಮನದಲ್ಲಿನ ಮೋಡ
ತನ್ನೊಳಗೆ ಮನದಾಳದ ನೋವುಗಳ ಮಳೆ ತುಂಬಿ ಕೊಂಡು  ಅವನಿಯಾದವಳ ಎದೆಗೆ ಇಳಿದು ಹಗುರಾಗಲು  ಕಾದಾಗ..  

ಅವನೆಂಬ ಆಗಸಕ್ಕೂ ಇವಳೆಂಬ ಇಳೆಗೂ ಪ್ರೇಮವಾಗಬಹುದೇ…? ಪ್ರೇಮವೇ ಅದಾಗಿದ್ದರೆ ದುಃಖ್ಖದ ಹೊನಲ ಮಳೆಯೋ.. ಪ್ರೇಮದ ಋತುಗಾನದ ಹನಿಗಳ ಹೂರಣವೋ…
ಭೂಮಿ ಅಲ್ಲವೇ ತಾಳ್ಮೆ ಹೆಚ್ಚು ಹೆತ್ತಿದ್ದು ಹಸಿರನ್ನೇ ಹೊರತು  ಬಂಜರಲ್ಲ…

ಭಾನು ಅವಳನ್ನು ಬಹುದೂರದಿಂದಲೇ ನೋಡಿ ನಗುತ್ತಿದ್ದ. ಪ್ರೀತಿ ಪತ್ರವನ್ನು ತನ್ನದೇ ಆವರಣದಲ್ಲಿ ಅಲಂಕಾರಗೊಂಡ ಮೋಡದ ಮೇಲೆಲ್ಲ್ಲಾ ಗೀಚುತಿದ್ದ… ಬಹುಷಃ ಅದೇ ಬರಹಗಳಾಗಿ ಕವಿ ಕಾಳಿದಾಸನಿಗೂ ಮೇಘ ದೂತನಾಗಿ ಕಂಡಿತ್ತೋ..!

ಹಳೆ ರೇಡಿಯೋದಲ್ಲಿ ನನ್ನದೇ ದನಿಯಲ್ಲಿ ಈ ಮೇಲಿನ ಮಾತುಗಳು ಕಿವಿಗೆ ಬೀಳುತಿತ್ತು. ಹೊರಗಡೆ ಜೋರು ಮಳೆಯ ಹಸಿ ಹಸಿ ತಂಪು ತಂಪು ವಾತಾವಾರಣ. ಬೆಚ್ಚನೆ ಬೆಡ್ಶೀಟ್ ಒಳಗೆ ತಂಪಾದ ಕೈಗಳ ಸ್ಪರ್ಶವಾಗಲೂ ಕನಸಿನ ಊರಿನಿಂದ ಜಾರಿ ವಾಸ್ತವದ ಬೆಳಕಿಗೆ ಎಚ್ಚರವಾದಾಗ ಮುದ್ದು ಮಗಳು “ಅಮ್ಮ ಏಳು…” ಎಂದಾಗ ಸಮಯ ಅದಾಗಲೆ ಏಳು… ಉಫ್ ಅದೇ ಗೃಹಿಣಿಯ ಪಾತ್ರ ನನ್ನ ಮೈಯೊಳಗೆ ದೆವ್ವದಂತೆ ಹೊಕ್ಕಿತ್ತು. ಕೆಲಸಗಳ ಜಾಗಟೆ ಕಿವಿಯೊಳಗೆ ಬಾರಿಸಲು… ಶಿಟ್ ತಿಂಡಿ ಏನು ಮಾಡ್ಲಿ..? ಅಯ್ಯೋ ಸ್ಕೂಲ್ ಬ್ಯಾಗ್ ಶೂ್ಸ್, ಯುನಿಫಾರ್ಮ್ ಐರನ್, ಲಂಚ್ ಬ್ಯಾಗ್… ಇದಷ್ಟು ಮೇಘ ದೂತನ ಕನಸನ್ನು ಕರ್ಚಿಫ್ ಅಲ್ಲಿ ಮಡಚಿಟ್ಟು  ನಗುತ್ತಾ ಮಕ್ಕಳನ್ನು ಕಳುಹಿಸುವಾಗ…

ಹೇ ಆಯಂ ಹಿಯರ್ ಕಣೆ ಚೆಲುವೆ… ಎಂದು ಆಗಸದಿಂದ ಒಂದು ಪುಟ್ಟ ಹನಿ ಕೆನ್ನೆ ಮೇಲೆ ಬಿದ್ದಿತ್ತು. ವಾವ್.. ಎಸ್ ಯು ಆರ್ ಮೈ ಡ್ರೀಮ್.. ಮೈ ಲವ್ ಮೈ ಕವಿತೆ.   ಎನ್ನುತ್ತಾ ಮತ್ತದೆ ಬುಕ್ ಪೆನ್ ಹಿಡಿದು ಒಂದು ಲೋಟ ಬಿಸಿ ಬಿಸಿ ಘಮ ಘಮ ಹಬೆಯಾಡುವ ಫಿಲ್ಟರ್ ಕಾಫಿ ಮಾಡಿಕೊಂಡು ಕುಳಿತು,  ಮೊಬೈಲ್ ಅಲ್ಲಿ ರಿಮ್ ಜಿಮ್ ಗಿರೆ ಸಾವನ್ ಹಾಡು ಹಾಕಿಕೊಂಡು… ಕಿಟಕಿಯಿಂದ ದೂರದಲ್ಲೆಲ್ಲೋ ನನ್ನನ್ನೇ ದುರುಗುಟ್ಟಿ ನೋಡುತ್ತಿರುವ ಮೋಡದ ಬಗ್ಗೆ ಕವಿತೆ ಗೀಚುತ್ತಾ ಕಾಫಿ ಕುಡಿದಿದ್ದೆ…

“ಅವನಿಯಾದ ನಾನು
ನಿನಗಾಗಿ ಬರೆದ ಕವಿತೆಯನ್ನು
ಓದಲೇಬೇಕು ನೀ ಇಲ್ಲಿ ಬಂದು…”

“ಮೋಡವಾಗಿ
ನನ್ನೊಳಗೆ ಮಳೆಯಾಗಿ
ಪದಗಳ ಪೂರೈಸುತ್ತಾ
ನಿನ್ನ ಪ್ರೇಮ ಪುಷ್ಕರಣಿಯಲ್ಲಿ
ನಾ ಮೀಯುವಂತೆ
ಸೇರಲೇಬೇಕು ಹಾಳೆಯ ಹದಿ ಹರೆಯದ
ಭಾವ ಬರಹದ ಮಿಲನ ಮಹೋತ್ಸವದಲ್ಲಿ ಎಂದು..

ಕಾರಣ ಮಳೆಗಾಲ ಶುರುವಾಯಿತು ಇಂದು…
ಹಸಿರಾಗಲು ಕಾದಿರುವೆ ನಾ ಎಂದೆಂದು…..”


Leave a Reply

Back To Top